ಮಂಡ್ಯ ತಾಲೂಕಿನ ಹಲ್ಲೇಗೆರೆಯಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗುತ್ತಿದೆ. ಈ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುವ ನಿರೀಕ್ಷೆಯಿದ್ದು, ಭೂದೇವಿ ಪ್ರತಿಷ್ಠಾಪನೆಗೆ ಹಾಗೂ ಗಣ್ಯರ ಸ್ವಾಗತಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಮಂಡ್ಯ: ತಾಲೂಕಿನ ಹಲ್ಲೇಗೆರೆ ಹೊರವಲಯದಲ್ಲಿ ಸ್ಕೋಪ್ ಫೌಂಡೇಷನ್ ವತಿಯಿಂದ ನಿರ್ಮಿಸುತ್ತಿರುವ ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಭೂದೇವಿ ಪ್ರತಿಷ್ಠಾಪನೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಈ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಷೆಲ್‌ ಅವರು ಆಗಮಿಸುವ ಸಾಧ್ಯತೆಯಿದ್ದು, ಕಾರ್ಯಕ್ರಮ ಸಾಕಷ್ಟು ಮಹತ್ವ ಪಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ವೇದಿಕೆ ನಿರ್ಮಾಣ

ಈ ಕಾರ್ಯಕ್ರಮಕ್ಕಾಗಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಸುಮಾರು 50 ಲಕ್ಷ ರೂ.ಗೂ ಅಧಿಕ ವೆಚ್ಚದಲ್ಲಿ ಭೂಕಂಪನಕ್ಕೂ ಜಗ್ಗದ ರೀತಿಯಲ್ಲಿ ತಳಪಾಯವನ್ನು ನಿರ್ಮಿಸಲಾಗಿದೆ. 12 ಅಡಿ ಆಳದಿಂದ ನಾಲ್ಕು ಹಂತದಲ್ಲಿ ತಳಪಾಯವನ್ನು ನಿರ್ಮಿಸಿಕೊಂಡು ಬಂದಿದ್ದು, ಅದರ ಮೇಲೆ ಇನ್ನೂ 4 ಅಡಿ ಎತ್ತರಿಸಿ ಅದರ ಮೇಲೆ ಭೂದೇವಿ (ಮದರ್ ಆಫ್ ಅರ್ಥ್) ಪ್ರತಿಷ್ಠಾಪನೆ ಮಾಡಲಾಗುವುದು.

ತಳಪಾಯಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕದೆ ಸಂಪೂರ್ಣವಾಗಿ ಕಲ್ಲುಗಳು ಹಾಗೂ ಮಣ್ಣನ್ನು ತುಂಬಿ ನೈಸರ್ಗಿಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ನೀಲಿ ಗ್ರಾನೈಟ್ ಮತ್ತು ವೈಟ್ ಸ್ಟೋನ್‌ನಿಂದ 14 ಅಡಿ ಎತ್ತರದ ಭೂದೇವಿಯ ಏಕಶಿಲಾ ಪ್ರತಿಮೆಯನ್ನು ಖ್ಯಾತ ಶಿಲ್ಪಿಗಳಿಂದ ಕೆತ್ತಿಸಲು ಯೋಜನೆ ರೂಪಿಸಲಾಗಿದೆ.

7.5 ಕಿ.ಮೀ.ರಸ್ತೆ 11.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ

ಹಲ್ಲೇಗೆರೆಯಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರದ ಶಂಕುಸ್ಥಾಪನೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಬಸರಾಳು-ತಂಗಳಗೆರೆ ರಸ್ತೆ, ಕೊತ್ತಗೆರೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ, ಬಸರಾಳು-ಕೊಪ್ಪ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಸುಮಾರು 7.5 ಕಿ.ಮೀ.ರಸ್ತೆಯನ್ನು 11.4 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ.

ಮುಂದಿನ ಆಗಸ್ಟ್ ತಿಂಗಳಲ್ಲಿ ಅಮೆರಿಕದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಆಗಮಿಸಲಿದ್ದಾರೆ. ಅವರು ಬಂದ ನಂತರ ಎಲ್ಲ ಕಾರ್ಯಗಳಿಗೂ ಚುರುಕು ನೀಡಲಿದ್ದಾರೆ. ಕಾರ್ಯಕ್ರಮದ ದಿನಾಂಕ ಕೂಡ ನಂತರ ಘೋಷಣೆಯಾಗುವ ಸಾಧ್ಯತೆಯಿದೆ.