ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮೆಟ್ರೋ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ, ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವಿನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಜೆ ಪೀಕ್ ಅವರ್‌ನಲ್ಲಿ ಘಟನೆ ನಡೆದಿದ್ದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಬೆಂಗಳೂರು (ಮೇ.26): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಡು ಬೇಸಿಗೆಯ ಬಳಿಕ ವರುಣನ ಆರ್ಭಟ ಜೋರಾಗಿದೆ. ಮಂಗಳವಾರ ಸಂಜೆ ನಗರದ ಹಲವೆಡೆ ಗುಡುಗು, ಗಾಳಿ ಸಹಿತ ಭಾರಿ ಮಳೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಶಾಕ್ ಎದುರಾಗಿದೆ. ಭಾರಿ ಗಾಳಿಗೆ ಮೆಟ್ರೋ ಹಳಿಯ ಮೇಲೆ ಮರದ ಕೊಂಬೆ ಮುರಿದು ಬಿದ್ದಿರುವ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ (Purple Line) ರೈಲು ಸಂಚಾರವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೆಟ್ರೋ ಸಂಚಾರ ಸ್ಥಗಿತ: ಪ್ರಯಾಣಿಕರಿಗೆ ಕಷ್ಟ

ಐಟಿಪಿಎಲ್ (ITPL) ಮತ್ತು ಸತ್ಯಸಾಯಿ ಪ್ರಶಾಂತ್ ನಿಲಯಂ ನಡುವೆ ಹಳಿಯ ಮೇಲೆ ಮರದ ಕೊಂಬೆ ಬಿದ್ದಿರುವುದರಿಂದ, ವೈಟ್‌ಫೀಲ್ಡ್ (Whitefield) ಮತ್ತು ಗರುಡಾಚಾರ್ ಪಾಳ್ಯ (Garudachar Palya) ನಡುವಿನ ಮೆಟ್ರೋ ರೈಲು ಸಂಚಾರವನ್ನು ತಾತ್ಕಲಿಕವಾಗಿ ನಿಲ್ಲಿಸಲಾಗಿದೆ. ಇಂದು ಸಂಜೆ 6 ಗಂಟೆಯಿಂದಲೇ ಅನ್ವಯವಾಗುವಂತೆ ಈ ಭಾಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಆಫೀಸ್ ಮುಗಿಸಿ ಮನೆಗೆ ಮರಳುವ ಪೀಕ್ ಅವರ್‌ನಲ್ಲೇ ಈ ಘಟನೆ ನಡೆದಿರುವುದರಿಂದ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಸದ್ಯಕ್ಕೆ ಗರುಡಾಚಾರ್ ಪಾಳ್ಯ ಮತ್ತು ಚಲ್ಲಘಟ್ಟ (Challaghatta) ನಡುವೆ ಎಂದಿನಂತೆ ಮೆಟ್ರೋ ರೈಲು ಸಂಚಾರ ಮುಂದುವರಿದಿದೆ ಎಂದು ಮೆಟ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಗರದ ಹೃದಯಭಾಗದಲ್ಲಿ ವರುಣನ ಆರ್ಭಟ

ಬೆಂಗಳೂರಿನಲ್ಲಿ ಸಂಜೆ ಜಿಟಿ ಜಿಟಿ ಮಳೆಯಾಗಿ ಆರಂಭವಾಗಿ, ನಂತರ ಗುಡುಗು ಸಹಿತ ಭಾರಿ ಮಳೆಯಾಗಿ ಮಾರ್ಪಟ್ಟಿದೆ. ಮೆಜೆಸ್ಟಿಕ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಗಾಂಧಿ ನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಟೌನ್ ಹಾಲ್, ಕೆ.ಆರ್. ಮಾರ್ಕೆಟ್ ಹಾಗೂ ವಿಧಾನಸೌಧದ ಸುತ್ತಮುತ್ತಲಿನ ಭಾಗಗಳಲ್ಲಿ ವರುಣನ ಆಗಮನವಾಗಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿವೆ.

ಬೆಂಗಳೂರಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

ಮುಂದಿನ ಕೆಲವು ಗಂಟೆಗಳ ಕಾಲ ನಗರದಲ್ಲಿ ಗಾಳಿ ಹಾಗೂ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಬೆಂಗಳೂರಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ವಾಹನ ಸವಾರರು ಜಾಗರೂಕರಾಗಿರಬೇಕು ಮತ್ತು ತುರ್ತು ಕೆಲಸಗಳಿದ್ದರೆ ಮಾತ್ರ ಹೊರಬರಬೇಕು ಎಂದು ಸೂಚಿಸಲಾಗಿದೆ.