*  ಕೊಪ್ಪಳ- ಕಾತರಕಿ ರಸ್ತೆಯುದ್ದಕ್ಕೂ ಬಸ್‌ನದ್ದೇ ನಿತ್ಯ ಗೋಳು*  4 ಕಿ.ಮೀ. ನಡೆದು ಬಸ್‌ ಹತ್ತುವ ವಿದ್ಯಾರ್ಥಿಗಳು*  ನಾಲ್ಕು ಗ್ರಾಮಗಳಿಗೆ ಬಸ್‌ ಕೊರತೆ 

ಕೊಪ್ಪಳ(ಡಿ.27): ಸುಮಾರು ನಾಲ್ಕು ಕಿ.ಮೀ. ನಡೆದು ಬಸ್‌ ಹತ್ತುವ ವಿದ್ಯಾರ್ಥಿಗಳು(Students) ಸೇರಿದಂತೆ ಶಾಲಾ-ಕಾಲೇಜಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗಮ್ಯ ಸೇರಲು ಬಳಕೆಗಿರುವುದು ಕೇವಲ ಒಂದೇ ಬಸ್‌(Bus). ಕಾತರಕಿಯಿಂದ ಕೊಪ್ಪಳದವರೆಗಿನ ಗ್ರಾಮಗಳ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.

ಕಾತರಕಿ ಮಾರ್ಗವಾಗಿ ಕಾತರಕಿ, ಬೆಳೂರು, ಡೊಂಬರಳ್ಳಿ ಹಾಗೂ ಬೂದಿಹಾಳ ಗ್ರಾಮದಿಂದ ಕೊಪ್ಪಳ(Koppal) ಕಾಲೇಜು ಮತ್ತು ಹಿರೇಸಿಂದೋಗಿ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್‌ಗಳ ಕೊರತೆ ಕಾಡುತ್ತಿದೆ. ಇರುವ ಬಸ್‌ ಕೂಡ ತುಂಬಿ ತುಳುಕುವಂತಿರುತ್ತದೆ. ವಿದ್ಯಾರ್ಥಿಗಳ ಪಡಿಪಾಟಲು ಕೇಳುವವರೂ ಇಲ್ಲದಂತಾಗಿದೆ. ಬೆಳಗ್ಗೆ ಶಾಲಾ-ಕಾಲೇಜಿಗೆ(Schools-Collegs) ಈ ನಾಲ್ಕು ಗ್ರಾಮಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಇವರಿಗೆ ಕೇವಲ ಒಂದೇ ಬಸ್‌. ಈ ಬಸ್‌ನಲ್ಲಿ ವಿದ್ಯಾರ್ಥಿಗಳು ಕಿಕ್ಕಿರಿದು ಪ್ರಯಾಣಿಸುತ್ತಾರೆ. ಬಸ್‌ನ ಬಾಗಿಲಿನಲ್ಲೂ ಜೋತುಬಿದ್ದು ಪ್ರಯಾಣಿಸುವುದು ಒಂದೆಡೆಯಾದರೆ, ಬಸ್‌ ಸಿಗದೆ ಕೆಲ ವಿದ್ಯಾರ್ಥಿಗಳು ಮನೆಯ ದಾರಿ ಹಿಡಿಯುತ್ತಾರೆ. ಇನ್ನುಳಿದ ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪುವುದೇ ದುಸ್ತರವಾಗಲಿದೆ. ಇಂತಹ ದುಸ್ಥಿತಿಯಲ್ಲೇ ವಿದ್ಯಾರ್ಥಿಗಳು ವಿದ್ಯಾಭ್ಯಾಸ(Study) ನಡೆಸುವುದು ಕಷ್ಟಸಾಧ್ಯವಾಗಿದೆ.

Bears Killed in Road Accidents: ಸರ್ಕಾರದ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಕರಡಿಗಳ ಬಲಿ ಬೇಕು?

4 ಕಿ.ಮೀ. ನಡೆದಾಟ:

ಕಾತರಕಿ ಮತ್ತು ಬೇಳೂರು ಗ್ರಾಮದಿಂದಲೇ ಬಸ್‌ ತುಂಬಿ ಹೋಗಿರುತ್ತದೆ. ಇನ್ನು ಡೊಂಬರಳ್ಳಿ ಹಾಗೂ ಬೂದಿಹಾಳ ಗ್ರಾಮದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದಕ್ಕೆ ಬಸ್ಸೇ ಇರುವುದಿಲ್ಲ. ಆಗ ನಾಲ್ಕು ಕಿ.ಮೀ. ನಡೆದು ಹಿರೇಸಿಂದೋಗಿ ತಲುಪಬೇಕು. ಅಲ್ಲಿಂದ ಬೇರೆ ಬಸ್‌ನ ಮೂಲಕ ಕೊಪ್ಪಳಕ್ಕೆ ಕಾಲೇಜಿಗೆ ಬರಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಕೋವಿಡ್‌(Covid-19) ಲಾಕ್‌ಡೌನ್‌ಗೂ(Lockdown) ಮೊದಲು ಇದ್ದ ಬಸ್‌ಗಳು ಸ್ಥಗಿತಗೊಂಡು ಇಲ್ಲಿಯವರೆಗೂ ಆರಂಭವಾಗಿಲ್ಲ. ಒಂದಿಷ್ಟು ಬಸ್‌ಗಳು ಆರಂಭದಲ್ಲ ಶುರುವಾದರೂ ಶಾಲಾ ವೇಳೆಗೆ ಆಗಮಿಸುವುದಿಲ್ಲ. ಹೀಗಾಗಿ ಸುಮಾರು 15-20 ವಿದ್ಯಾರ್ಥಿಗಳು ನಿತ್ಯವೂ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಕಾಲೇಜು ಮತ್ತು ಶಾಲಾ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಬಿಡಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಖಾಸಗಿ ವಾಹನಗಳ ಲಾಬಿ:

ಇದೇ ಮಾರ್ಗದಲ್ಲಿ ಈ ಹಿಂದೆ ಸಾಕಷ್ಟು ಬಸ್‌ಗಳು ಓಡಾಡುತ್ತಿದ್ದವು. ಆದರೆ, ಖಾಸಗಿ ವಾಹನಗಳ ಲಾಬಿಯಿಂದ ಅನೇಕ ಬಸ್‌ಗಳು ರದ್ದಾಗಿವೆ. ಹತ್ತಾರು ಖಾಸಗಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದವು. ಆದರೆ, ಕೋವಿಡ್‌ ಲಾಕ್‌ಡೌನ್‌ ವೇಳೆಯಲ್ಲಿ ಜನ ಸಂಚಾರ ಸ್ಥಗಿತಗೊಂಡಿದ್ದರಿಂದ ಆ ಖಾಸಗಿ ವಾಹನಗಳು ಮಾಯವಾಗಿವೆ. ಹೀಗಾಗಿ, ಇಲ್ಲಿ ಜನರ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಬಸ್‌ಗಳು ಇಲ್ಲ. ಖಾಸಗಿ ವಾಹನಗಳೂ ಇಲ್ಲ. ಇಲ್ಲಿ ಆಸ್ಪತ್ರೆಗೆ ತೆರಳಲು ಜನಸಾಮಾನ್ಯರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Kalyana-Karnataka: 371ಜೆ ಜಾರಿಯಾದ್ರೂ ಕಲ್ಯಾಣ ಕರ್ನಾಟಕದವರ ಅನ್ಯಾಯ ನೀಗಿಲ್ಲ..!

ಸೆಟ್ಲ್ ಬಸ್‌ ಆರಂಭಿಸಲು ಆಗ್ರಹ:

ಕೊಪ್ಪಳದಿಂದ ಕಾತರಕಿ ಕೇವಲ 16 ಕಿ.ಮೀ. ದೂರದಲ್ಲಿದೆ. ನಿತ್ಯವೂ ಶಾಲೆ, ಕಾಲೇಜಿಗಾಗಿ ನೂರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಹಾಗೆಯೇ ಸಾರ್ವಜನಿಕರು ವ್ಯಾಪಾರ, ವಹಿವಾಟು, ಆಸ್ಪತ್ರೆ ಸೇರಿದಂತೆ ನಾನಾ ಕಾರ್ಯಕ್ಕಾಗಿ ಸುಮಾರು ನೂರಾರು ಸಂಖ್ಯೆಯಲ್ಲಿ ಓಡಾಡುತ್ತಾರೆ. ಈ ಮಾರ್ಗವಾಗಿ ಸೆಟ್ಲ್ ಬಸ್‌(Settle Bus) ಪ್ರಾರಂಭಿಸಬೇಕು. ಎರಡು ಪ್ರತ್ಯೇಕ ಬಸ್‌ಗಳನ್ನು ಇದೇ ಮಾರ್ಗವಾಗಿ ಹತ್ತಾರು ಬಾರಿ ಓಡಾಡಿಸಿದರೆ ಮಾತ್ರ ಈ ಸಮಸ್ಯೆ ಇತ್ಯರ್ಥವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಬಸ್‌ ಸಮಸ್ಯೆ ತೀರಾ ಗಂಭೀರವಾಗಿದೆ. ಬಸ್‌ ಕೊರತೆ ನೀಗಿಸದಿದ್ದಲ್ಲಿ ಇನ್ನು ಸಮಸ್ಯೆಗಳು ಹೆಚ್ಚಲಿವೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೋರಾಟ ಮಾಡುವುದೊಂದೇ ನಮ್ಮ ಮುಂದಿನ ದಾರಿಯಾಗಿದೆ ಅಂತ ಡೊಂಬರಳ್ಳಿ ಗ್ರಾಪಂ ಸದಸ್ಯ ಶಂಕ್ರಪ್ಪ ಮಾಟ್ರ ತಿಳಿಸಿದ್ದಾರೆ. 

ಬಸ್‌ಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜಿಗೆ ಹೋಗಲು ಪರದಾಡುತ್ತಿದ್ದಾರೆ. ನೂರಾರು ಕಾಲೇಜು ವಿದ್ಯಾರ್ಥಿಗಳು ಒಂದೇ ಬಸನಲ್ಲಿ ಹೋಗುವುದು ಹೇಗೆ? ಇದಕ್ಕಾಗಿ ನಿತ್ಯವೂ ಜಗಳ ವಿದ್ಯಾರ್ಥಿಗಳು ಜಗಳ ಮಾಡುವಂತಾಗಿದೆ ಅಂತ ಡೊಂಬರಳ್ಳಿ ಗ್ರಾಪಂ ಮಾಜಿ ಸದಸ್ಯ ಸಿದ್ದರಡ್ಡಿ ದುರ್ಗದ ಹೇಳಿದ್ದಾರೆ.