ತಾಂಡವಪುರ(ಸೆ.21): ಕರ್ನಾಟಕ ಸೇರಿದಂತೆ ಭಾರತದ 95 ಸಾವಿರ ವಿದ್ಯಾರ್ಥಿಗಳಿಗೆ ಅಮೆರಿಕ ರಾಯಭಾರ ಸಂಸ್ಥೆ ವತಿಯಿಂದ ಇಂಗ್ಲಿಷ್ ಕಲಿಕೆಗೆ ಹೆಚ್ಚಿನ ನೆರವು ನೀಡಲಾಗುವುದೆಂದು ಚೆನ್ನೈನ ಅಮೆರಿಕ ರಾಯಭಾರ ಕಚೇರಿಯ ಯುಎಸ್ ಕಾನ್ಸುಲೇಟ್ ಲಾರೆನ್ಸ್ ಲವ್ಲೆಸ್ ಹೇಳಿದರು.

ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದ ಕ್ರೈಸ್ಟ್ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಭಾರತ-ಅಮೆರಿಕ ರಾಯಭಾರ ಸಂಸ್ಥೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಸಾಂಸ್ಕೃತಿಕ ಹಾಗೂ ಮೈಕ್ರೋ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂಗ್ಲೀಷ್ ಕಲಿಕೆಗೆ ತಾಂಡವಪುರ ಸರ್ಕಾರಿ ಪ್ರೌಢಶಾಲೆಯ 25 ಮಕ್ಕಳು, ಕ್ರೈಸ್ಟ್ ಶಾಲೆಯ 25 ವಿದ್ಯಾರ್ಥಿಗಳು, ಕುಶಾಲನಗರ ಕೊಪ್ಪ ಭಾರತ್ ಕಾಲೇಜಿನ 25 ಮಂದಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 75 ಮಂದಿ ವಿದ್ಯಾರ್ಥಿಗಳು ಈ ಕಲಿಕಾ ಶಿಬಿರಕ್ಕೆ ಆಯ್ಕೆಯಾಗಿದ್ದು, ಶಿಬಿರದಲ್ಲಿ ಶಾಲಾ ಅವಧಿಯ ನಂತರ ವಾರದ 5 ದಿನಗಳು ಒಟ್ಟು 5 ಗಂಟೆಗಳ ಕಾಲ ಉಚಿತ ಇಂಗ್ಲಿಷ್ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಡಲಾಗುವುದು ಎಂದು ತಿಳಿಸಿದರು.

ದಕ್ಷಿಣ ಭಾರತದ ಮೂರು ಮತ್ತು ಉತ್ತರ ಭಾರತದ ನಾಲ್ಕು ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಯುಎಸ್ ಇಂಗ್ಲಿಷ್ ತರಬೇತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಮೆರಿಕ ಜಗತ್ತಿನ ವಿವಿಧ ಭಾಷೆಗಳನ್ನಾಡುವ ಜನರನ್ನು ಒಳಗೊಂಡಿರುವುದು ವಿಶೇಷವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚು ಒತ್ತು ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕನ್ನಡ ಮಾತೃ ಭಾಷೆಯಾದ ಮೈಸೂರು ಪ್ರಾಂತ್ಯದ ಮಕ್ಕಳು ಅಕ್ಸೆಸ್ ಇಂಗ್ಲಿಷ್ ಕಲಿಕೆಯೊಂದಿಗೆ ಇಲ್ಲಿನ ಮಹತ್ವದ ಸಂಗತಿಗಳನ್ನು ಅಕ್ಸೆಸ್‌ಗೆ ಅನುವಾದಿಸುವ ಸಾಮರ್ಥ್ಯ ಗಳಿಸಿಕೊಳ್ಳಲಿದ್ದಾರೆ. ಅಲ್ಲದೇ ತರಬೇತಿ ಪೂರ್ಣಗೊಳಿಸಿದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಚೆನ್ನೈನಲ್ಲಿ ಕಲಿಕೆಗೆ ಅನುಗುಣವಾಗಿ ಗ್ರಂಥಾಲಯವನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಓದಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ಮೈಸೂರು ಸಿಎಂಐ ಉಪ ಪ್ರಾಂತ್ಯ ಗುರುಗಳಾದ ಫಾದರ್ ಜೋಸೆಫ್, ತಾಂಡವಪುರ ಕ್ರೈಸ್ಟ್ ಶಾಲೆ ಪ್ರಾಂಶುಪಾಲರಾದ ಫಾದರ್ ಸೆಬಾಸ್ಟಿಯನ್, ಫಾದರ್ ರೆನ್ನಿ, ಫಿನು ಜೋಸ್, ರಚನಾ ಶರ್ಮ ಇದ್ದರು. ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.