ಮಂಗಳೂರು ವಿವಿ ಕಾಲೇಜಿನಲ್ಲಿ ಸಾವರ್ಕರ್ ಫೋಟೋ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ
ಸಾವರ್ಕರ್ ಫೋಟೋ ತೆರವು ಮಾಡುವಂತೆ ಪ್ರಾಂಶುಪಾಲೆಗೆ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಹೀಗಾಗಿ ಸಾವರ್ಕರ್ ಫೋಟೋವನ್ನು ಕಾಲೇಜು ಪ್ರಾಂಶುಪಾಲೆ ತೆರವು ಮಾಡಿಸಿದ್ದರು
ಮಂಗಳೂರು (ಜೂ. 10): ಹಿಜಾಬ್ ವಿಚಾರದಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಮಂಗಳೂರು ವಿವಿ (Mangalore University) ಕಾಲೇಜಿನಲ್ಲೀಗ ಸಾವರ್ಕರ್ ಫೋಟೋ ವಿಷಯವಾಗಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಮಂಗಳೂರು ನಗರದ ಹಂಪನಕಟ್ಟೆಯ ವಿವಿ ಘಟಕ ಕಾಲೇಜಿನಲ್ಲಿ ಘಟನೆ ನಡೆದಿದೆ. ಎಬಿವಿಪಿ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾಲೇಜಿನಲ್ಲಿ ಎಬಿವಿಪಿ (ABVP) ವಿದ್ಯಾರ್ಥಿಗಳು ಸೋಮವಾರ ಸಾವರ್ಕರ್ (Veer Savarkar) ಫೋಟೋ ಹಾಕಿದ್ದರು. ಸಾವರ್ಕರ್ ಫೋಟೋ ತೆರವಿಗೆ ವಿದ್ಯಾರ್ಥಿಗಳ ಗುಂಪು ಮನವಿ ಮಾಡಿತ್ತು.
ಫೋಟೋ ತೆರವು ಮಾಡುವಂತೆ ಪ್ರಾಂಶುಪಾಲೆಗೆ ಕೆಲ ಮುಸ್ಲಿಂ (Muslim)ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಹೀಗಾಗಿ ಸಾವರ್ಕರ್ ಫೋಟೋವನ್ನು ಕಾಲೇಜು ಪ್ರಾಂಶುಪಾಲೆ ತೆರವು ಮಾಡಿಸಿದ್ದರು. ಅದರ ದ್ವೇಷದ ಹಿನ್ನೆಲೆಯಲ್ಲಿ ಇಂದು ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಪಾಂಡೇಶ್ವರ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನಡೆದದ್ದೇನು?: ಸೋಮವಾರ ಸಂಜೆ ವಿದ್ಯಾರ್ಥಿಗಳಿಬ್ಬರು ಭಾರತಮಾತೆ ಮತ್ತು ಸಾವರ್ಕರ್ ಫೋಟೊವನ್ನು ಮುಚ್ಚಿದ ಕವರ್‌ನೊಳಗೆ ತಂದು ಅದನ್ನು ತರಗತಿಯ ಕರಿಹಲಗೆಯ ಮೇಲೆ ಹಾಕಿದ್ದರು. ಇದನ್ನು ಇತರ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಮಂಗಳವಾರ ಬೆಳಗ್ಗೆ ಪ್ರಾಂಶುಪಾಲರು ಆಗಮಿಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ, ಅನಧಿಕೃತವಾಗಿ ಹಾಕಿದ್ದ ಫೋಟೊಗಳನ್ನು ತೆರವುಗೊಳಿಸಿದ್ದಾರೆ. ಬಳಿಕ ಫೋಟೋ ಹಾಕಿದ ವಿದ್ಯಾರ್ಥಿಗಳನ್ನು ಕರೆಸಿ ಎಚ್ಚರಿಕೆ ನೀಡಿ ತಪ್ಪೊಪ್ಪಿಗೆಯನ್ನು ಪಡೆದಿದ್ದಾರೆ.
ಇದನ್ನೂ ಓದಿ: ಮಂಗ್ಳೂರು ವಿವಿ ಕಾಲೇಜು ವಿವಾದ: ನೋಟಿಸ್‌ಗೆ ಉತ್ತರಿಸದ ಹಿಜಾಬ್ ವಿದ್ಯಾರ್ಥಿನಿಯರು
ಜಾಲತಾಣದಲ್ಲಿ ವೈರಲ್: ಸಾವರ್ಕರ್ ಫೋಟೊ ಹಾಕಿದ ಇಡೀ ಘಟನೆಯನ್ನು ವಿದ್ಯಾರ್ಥಿಗಳೇ ವಿಡಿಯೊ ಚಿತ್ರೀಕರಣ ಮಾಡಿ ಅದನ್ನು ಎಡಿಟ್ ಕೂಡ ಮಾಡಿ ಜಾಲತಾಣದಲ್ಲಿ (Social Media) ಪಸರಿಸಿದ್ದರು. ಮಾತ್ರವಲ್ಲದೆ, ಕಾಲೇಜಿನ ಅನೇಕ ವಿದ್ಯಾರ್ಥಿಗಳು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದರು, ವಾಟ್ಸಪ್ ಸ್ಟೇಟಸ್‌ನಲ್ಲೂ ಹಾಕಿಕೊಂಡಿದ್ದರು. ಹೀಗಾಗಿ ಈ ಘಟನೆ ಹೊರಗೆ ಬಂದಿದ್ದು, ಬಳಿಕ ವೈರಲ್ ಆಗಿತ್ತು. ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ಹೋರಾಟಕ್ಕೆ
ಹಿಜಾಬ್ ಗದ್ದಲ: ಇನ್ನು ಹಿಜಾಬ್ ವಿಚಾರವಾಗಿ ಸರ್ಕಾರಿ ನಿಯಮಾವಳಿಯನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಿ ವಿವಾದದ ಕೇಂದ್ರವಾಗಿದ್ದ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ಸಮವಸ್ತ್ರ ನಿಯಮ ಪಾಲನೆಯೊಂದಿಗೆ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿದ್ದಾರೆ.
ನಿಯಮ ಉಲ್ಲಂಘನೆಯ ಕಾರಣಕ್ಕೆ ಕಳೆದ ಸೋಮವಾರದಂದು 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಳಿದ ವಿದ್ಯಾರ್ಥಿನಿಯರು ಹಿಜಾಬ್‌ಗೆ ಬೇಡಿಕೆ ಇಡದೆ ಸಮವಸ್ತ್ರ ಧರಿಸಿಕೊಂಡು ಬರುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರು ಉಡುಪಿಯಲ್ಲಿ ಪ್ರಯೋಗಶಾಲೆ ಮಾಡಿದ್ದಾರೆ: ಸೊರಕೆ
ಈ ಮಧ್ಯೆ, ನೊಂದ ವಿದ್ಯಾರ್ಥಿನಿ ಎಂಬ ಹೆಸರಿನಲ್ಲಿ ‘ತಮ್ಮ ಹಿಜಾಬ್ ಬೇಡಿಕೆಗಾಗಿ ಮಾಡಿದ ಹೋರಾಟಕ್ಕೆ ಸಮಾಜದ ಮುಖಂಡರ ಬೆಂಬಲ ದೊರೆಯದಿರುವುದನ್ನು ದೇವರು ಕ್ಷಮಿಸನು’ ಎಂದು ಹತಾಶೆಯಿಂದ ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿರುವುದು ಬೆಳಕಿಗೆ ಬಂದಿದೆ. ಇದೊಂದು ವಿದ್ಯಾರ್ಥಿನಿಯರನ್ನು ಹೋರಾಟಕ್ಕೆ ಪ್ರಚೋದಿಸಿದ ಕಾಣದ ಕೈಗಳ ಷಡ್ಯಂತ್ರ ಎನ್ನಲಾಗಿದೆ