ಮಂಗ್ಳೂರು ವಿವಿ ಕಾಲೇಜು ವಿವಾದ: ನೋಟಿಸ್‌ಗೆ ಉತ್ತರಿಸದ ಹಿಜಾಬ್ ವಿದ್ಯಾರ್ಥಿನಿಯರು
* ಕಾಲೇಜಿನ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ನೋಟಿಸ್
* ಉತ್ತರವೂ ಕೊಟ್ಟಿಲ್ಲ, ಕಾಲೇಜಿಗೂ ಬಂದಿಲ್ಲ
* ವಿದ್ಯಾರ್ಥಿನಿಯರಿಗೆ ಅಟೆಂಡೆನ್ಸ್ ಕೊರತೆ
ಮಂಗಳೂರು(ಜೂ.10): ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಶಿಸ್ತು ಉಲ್ಲಂಘಿಸಿದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೀಡಿದ ನೋಟಿಸ್‌ಗೆ ಉತ್ತರ ನೀಡಲು ಗುರುವಾರ ಕೊನೆ ದಿನವಾಗಿದ್ದರೂ ವಿದ್ಯಾರ್ಥಿನಿಯರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ.
ಕಾಲೇಜಿನಲ್ಲಿ ಹಿಜಾಬ್ ನಿಷೇಧದ ಕುರಿತಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಿ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಮೂವರು ವಿದ್ಯಾರ್ಥಿನಿಯರಿಗೆ ಪ್ರಾಂಶಪಾಲೆ ಡಾ.ಅನಸೂಯಾ ರೈ ಜೂ.6ರಂದು ನೋಟಿಸ್ ನೀಡಿದ್ದರು. ಒಬ್ಬರು ವಿದ್ಯಾರ್ಥಿನಿ ಕಾಲೇಜಿಗೆ ಆಗಮಿಸಿದಾಗ ಆಕೆಯ ಕೈಯಲ್ಲೇ ನೋಟಿಸ್ ನೀಡಿದ್ದು, ಉಳಿದ ಇಬ್ಬರಿಗೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗಿತ್ತು. ಮೂರು ದಿನದೊಳಗೆ ಉತ್ತರ ನೀಡಲು ಸೂಚಿಸಲಾಗಿದ್ದರೂ ಇನ್ನೂ ಉತ್ತರ ಸಿಕ್ಕಿಲ್ಲ. ಆ ಮೂವರು ವಿದ್ಯಾರ್ಥಿನಿಯರು ಗುರುವಾರ ಕಾಲೇಜಿಗೂ ಬಂದಿಲ್ಲ.
ಉತ್ತರ ನೀಡದೆ ಪ್ರವೇಶವಿಲ್ಲ:
ನೋಟಿಸ್ ಜಾರಿಯಾದ ವಿದ್ಯಾರ್ಥಿನಿಯರು ಮುಂದೆ ತರಗತಿಗೆ ಬರಬೇಕಾದರೆ ಉತ್ತರ ನೀಡಿಯೇ ಬರಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಹಿಜಾಬ್: 24 ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲೇಜಿಗೆ ನಿರ್ಬಂಧ
ಹಿಜಾಬ್ ಕುರಿತಾಗಿ ಹೊರಗಿನವರೊಂದಿಗೆ ಸೇರಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಲ್ಲದೆ, ತರಗತಿಗಳಿಗೂ ಹಾಜರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಯಾಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
ವಿದ್ಯಾರ್ಥಿನಿಯರಿಗೆ ಅಟೆಂಡೆನ್ಸ್ ಕೊರತೆ
ಮಂಗಳೂರು ವಿವಿ ಕಾಲೇಜಿನ 44 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 15ರಷ್ಟು ಮಂದಿ ಅನೇಕ ದಿನಗಳಿಂದ ನಿರಂತರವಾಗಿ ತರಗತಿಗೆ ಗೈರು ಹಾಜರಾಗುತ್ತಿದ್ದು, ಅಟೆಂಡೆನ್ಸ್ ಕೊರತೆಯಿಂದ ಪರೀಕ್ಷೆ ಬರೆಯಲು ಸಮಸ್ಯೆಯಾಗಲಿದೆ.
ಅನೇಕ ವಿದ್ಯಾರ್ಥಿನಿಯರು ಮೇ 17ರಿಂದಲೇ ತರಗತಿಗೆ ಹಾಜರಾಗುತ್ತಿಲ್ಲ. ಈಗಾಗಲೇ ಕೆಲವರಿಗೆ ಅಟೆಂಡೆನ್ಸ್ ಕೊರತೆಯಾಗಿರುವುದಾಗಿ ತಿಳಿದುಬಂದಿದೆ. ಇನ್ನೂ ತರಗತಿಗೆ ಬಾರದಿದ್ದರೆ 15 ಮಂದಿಯೂ ಪರೀಕ್ಷೆ ಬರೆಯಲು ಅಸಾಧ್ಯವಾಗಲಿದೆ. ಕಾಲೇಜಿನ ಶೈಕ್ಷಣಿಕ ವರ್ಷ ಮುಗಿಯಲು ಇನ್ನು ಒಂದೆರಡು ತಿಂಗಳಷ್ಟೆಬಾಕಿ ಇದೆ.