ಯುಗಾದಿಗೂ ಮುನ್ನ ರಾಯಚೂರಿನಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿಗೆ ತಂಪೆರೆದಿದೆ. ಆದರೆ, ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಮಂಜುನಾಥ್ ಎಂಬ 23 ವರ್ಷದ ಕುರಿಗಾಹಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ರಾಯಚೂರು (ಮಾ.18): ಯುಗಾದಿಗೂ ಮುನ್ನವೇ ರಾಯಚೂರಿನಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದೆ. ಬಿಸಿಲ ಬೇಗೆಯಿಂದ ಬೆಂದ ಇಳೆಗೆ ವರುಣ ಸಿಂಚನವಾಗಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಇನ್ನೊಂದೆಡೆ ಸಿಡಿಲು ಬಡಿದು ಕುರಿಗಾಹಿ ದಾರುಣವಾಗಿ ಮೃತಪಟ್ಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಸಿಡಿಲು ಬಡಿದು ಕುರಿಗಾಹಿ ದಾರುಣ ಸಾವು

ಒಂದೆಡೆ ಮಳೆಯ ಸಂತಸವಿದ್ದರೆ, ಇನ್ನೊಂದೆಡೆ ಸಿಡಿಲು ಬಡಿದು ಕುರಿಗಾಹಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಸಂಭವಿಸಿದೆ. ಮಂಜುನಾಥ್ (23) ಮೃತಪಟ್ಟ ದುರ್ದೈವಿ ಕುರಿಗಾಹಿ.

ಜಮೀನಿನಲ್ಲಿ ಕುರಿಗಳ ಜೊತೆ ಇದ್ದಾಗ ಬಡಿದ ಸಿಡಿಲು!

ಮೃತ ಮಂಜುನಾಥ್ ನಿನ್ನೆ ಎಂದಿನಂತೆ ಕುರಿಗಳನ್ನು ಮೇಯಿಸಿಕೊಂಡು ಹೋಗಿ, ರಾತ್ರಿ ವೇಳೆ ಜಮೀನಿನಲ್ಲಿ ಕುರಿಗಳ ಜೊತೆಯಲ್ಲೇ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಅಂದರೆ ರಾತ್ರಿ ಸುಮಾರು 9:30ರ ಹೊತ್ತಿಗೆ ಇದ್ದಕ್ಕಿದ್ದಂತೆ ಗುಡುಗು ಮಿಂಚಿನ ಮಳೆ ಶುರುವಾದ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ಮಂಜುನಾಥ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ಸಿಂಧನೂರು ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ

ಸದ್ಯ ಮೃತದೇಹವನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಎಳೆಯ ವಯಸ್ಸಿನ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಮಳೆಯ ಸಂಭ್ರಮದ ನಡುವೆಯೇ ಶೋಕದ ಛಾಯೆ ಆವರಿಸಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.