ಮಯೂರ ಹೆಗಡೆ

ಹುಬ್ಬಳ್ಳಿ(ಮೇ.26): ಕಠಿಣ ಲಾಕ್‌ಡೌನ್‌ನಿಂದ ಅಕ್ಷರಶಃ ಬೀದಿಗೆ ಬಿದ್ದಿರುವ ಬೀದಿ ಬದಿ ವ್ಯಾಪಾರಸ್ಥರು ಈಗ ಪರಿಹಾರದ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪಿಎಂ ಸ್ವಯಂ ನಿಧಿಯಡಿ ಸಾಲ ಪಡೆದವರು ಬಾಕಿ ಇರಿಸಿಕೊಂಡ ಕಂತಿಗೆ 2 ಸಾವಿರ ರು. ಪರಿಹಾರ ಚುಕ್ತಾ ಆಗುವ ಆತಂಕ ಕಾಡುತ್ತಿದೆ.

ಜನತಾ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಇದೀಗ ಜಾರಿಯಲ್ಲಿರುವ ಲಾಕ್‌ಡೌನ್‌ ಕಾರಣದಿಂದ ಕಳೆದ ಒಂದು ತಿಂಗಳಿಂದ ಬೀದಿಬದಿ ವ್ಯಾಪಾರಸ್ಥರು ಕಷ್ಟಕ್ಕೆ ಸಿಲುಕಿದ್ದಾರೆ. ತಳ್ಳುಗಾಡಿಯಲ್ಲಿ ತರಕಾರಿ ಮಾರಲು ಅವಕಾಶವಿದ್ದರೂ ಎಲ್ಲರಿಗೂ ಇದು ಸಾಧ್ಯವಾಗಿಲ್ಲ. ಒಪ್ಪತ್ತಿನ ಊಟಕ್ಕೆ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಇಂತಹ ವೇಳೆ ಲಾಕ್‌ಡೌನ್‌ ಪರಿಹಾರವೆಂದು ಬೀದಿ ಬದಿ ವ್ಯಾಪಾರಸ್ಥರಿಗೆ ಕಳೆದ ವಾರ ರಾಜ್ಯ ಸರ್ಕಾರ 2 ಸಾವಿರ ರು. ಘೋಷಿಸಿದೆ.

"

ಹುಬ್ಬಳ್ಳಿ -ಧಾರವಾಡ ಮಹಾನಗರದಲ್ಲಿ ಪಿಎಂ ಸ್ವಯಂ ನಿಧಿಯಡಿ ಸಾಲಕ್ಕೆ ಬೀದಿಬದಿ ವ್ಯಾಪಾರದ ಲೈಸನ್ಸ್‌ ಹೊಂದಿರುವ 6875 ವ್ಯಾಪಾರಿಗಳು ಸೇರಿ ಒಟ್ಟಾರೆ 10584 ಅರ್ಜಿಗಳು ಬಂದಿದ್ದವು. ಈ ಪೈಕಿ ಇಲ್ಲಿವರೆಗೆ 5283 ಜನರಿಗೆ 5.27 ಕೋಟಿ ರು. ಸಾಲ ಮಂಜೂರಾಗಿದೆ. ಅದರಲ್ಲಿ 4824 ವ್ಯಾಪಾರಿಗಳಿಗೆ 4.82 ಕೋಟಿ ರು. ಸಾಲ ವಿತರಣೆಯಾಗಿದೆ. ಸಾಲ ಪಡೆದವರೆಲ್ಲ ಡಿಜಿಟಲ್‌ ವಹಿವಾಟು ನಡೆಸುತ್ತಿರುವ ಕಾರಣ ಈವರೆಗೆ 8625 ರು. ಕ್ಯಾಶ್‌ಬ್ಯಾಕ್‌ ದೊರೆತಿದೆ. ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಿರುವವರ ಖಾತೆಗೆ ವಾರ್ಷಿಕ ಶೇ.7 ಬಡ್ಡಿ ಸಹಾಯಧನ ಒಟ್ಟಾರೆ 2 ಲಕ್ಷ ರು. ಪಾವತಿಯಾಗಿದೆ ಎಂದು ಡೇ ನಲ್ಮ್‌ ಯೋಜನೆ ಸಮುದಾಯ ಸಂಘಟಕ ಅಧಿಕಾರಿ ರಮೇಶ ನೂಲ್ವಿ ತಿಳಿಸಿದರು.

ಕೊರೋನಾ ಪ್ರವೇಶಕ್ಕೆ ರಹದಾರಿ: ಧಾರವಾಡದಲ್ಲಿ ಅಂತರ್‌ ಜಿಲ್ಲಾ ಗಡಿ ಚೆಕ್‌ಪೋಸ್ಟೇ ಇಲ್ಲ!

ಸಾಲ ಪಡೆದವರು ಒಂದು ವರ್ಷದ ಅವಧಿವರೆಗೆ ಪ್ರತಿ ತಿಂಗಳು ಸಾಲದ ಕಂತನ್ನು ತುಂಬಬೇಕು. ಆದರೆ, ಹು-ಧಾ ಹಲವು ಬೀದಿ ವ್ಯಾಪಾರಸ್ಥರು ಪ್ರತಿ ತಿಂಗಳು ಸಾಲ ತೀರಿಸಲಾಗದೆ, ಎರಡು-ಮೂರು ಕಂತುಗಳನ್ನು ಬಾಕಿ ಇರಿಸಿಕೊಂಡಿದ್ದಾರೆ. ಇಂತವರಿಗೀಗ ಪರಿಹಾರ ಧನ 2 ಸಾವಿರ ರು. ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಪರಿಹಾರದ ಮೊತ್ತ ನೇರವಾಗಿ ಖಾತೆಗಳಿಗೆ ಜಮಾ ಆಗುವುದರಿಂದ ಬ್ಯಾಂಕ್‌ನಲ್ಲಿ ಆಟೋಮೆಟಿಕ್‌ ಡೆಬಿಟ್‌ ಸಿಸ್ಟಮ್‌ ಕಾರಣದಿಂದ ಸಾಲದ ಕಂತಿಗೆ ಮೊತ್ತ ಚುಕ್ತಾ ಆಗುವ ಸಾಧ್ಯತೆ ಹೆಚ್ಚು.

ಪತ್ರ ಚಳವಳಿ:

ಹೀಗೆ ಸಾಲದ ಮರುಪಾವತಿ ಬಾಕಿ ಕಂತಿಗೆ ಹಣ ಜಮೆ ಮಾಡಿಕೊಳ್ಳದಂತೆ ಬೀದಿ ಬದಿ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದಾರೆ. ಬ್ಯಾಂಕ್‌ನವರಿಗೆ ಈ ಕುರಿತು ಸೂಕ್ತ ನಿರ್ದೇಶನವನ್ನು ಸರ್ಕಾರ ನೀಡಬೇಕು. ಪರಿಹಾರದ ಮೊತ್ತ ಸಂಕಷ್ಟದಲ್ಲಿರುವ ನಮಗೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕಾಗಿ ಪತ್ರ ನಡೆಸಲು ಕರ್ನಾಟಕ ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಒಕ್ಕೂಟದಿಂದ ನಿರ್ದರಿಸಿದ್ದೇವೆ ಎಂದು ಸಂಘದ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಜಾಫರ್‌ ಎಂ.ಕೆ. ತಿಳಿಸಿದರು.

ಲಾಕ್‌ಡೌನ್‌ ಪರಿಹಾರವಾಗಿ ಘೋಷಿಸಲಾದ 2 ಸಾವಿರ ರು. ಪಿಎಂ ಸ್ವಯಂನಿಧಿ ಸಾಲದ ಕಂತಿಗೆ ಜಮೆಯಾಗುವ ಆತಂಕವಿದ್ದು, ಬ್ಯಾಂಕ್‌ಗಳಿಗೆ ಸರ್ಕಾರ ಜಮೆ ಮಾಡಿಕೊಳ್ಳದಂತೆ ಸೂಚಿಸಬೇಕು. ಇಲ್ಲವೆ ವ್ಯಾಪಾರಿಗಳಿಗೆ ಚೆಕ್‌ ರೂಪದಲ್ಲಿ ಪರಿಹಾರ ಒದಗಿಸಬೇಕು ಎಂದು ಹು-ಧಾ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಪ್ರತಿನಿಧಿ ಜಾಫರ್‌ ಎಂ.ಕೆ. ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona