ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.26): ಕೊರೋನಾ ಹಬ್ಬಬಾರದೆಂಬ ಉದ್ದೇಶದಿಂದ ಅಂತರ್‌ ಜಿಲ್ಲಾ ಹಾಗೂ ಅಂತಾರಾಜ್ಯ ವಾಹನಗಳ ಪ್ರವೇಶ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಾಹನ ಪ್ರವೇಶ ತಡೆಗೆ ಧಾರವಾಡ ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನೇ ಸ್ಥಾಪಿಸಿಲ್ಲ. ಇದರಿಂದಾಗಿ ಬೇರೆ ಜಿಲ್ಲೆಗಳಿಂದ ಅವ್ಯಾಹತವಾಗಿ ವಾಹನಗಳ ಸಂಚಾರ ನಡೆದಿದೆ. ಇದು ಜನತೆಯಲ್ಲಿ ಆತಂಕ ಉಂಟುಮಾಡಿದೆ.

ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಲೆ ಇದೆ. ಸೆಮಿ ಲಾಕ್‌ಡೌನ್‌ ಘೋಷಿಸುವ ವೇಳೆಯೇ ಅಂತರ್‌ ಜಿಲ್ಲಾ ಹಾಗೂ ಅಂತಾರಾಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶಿಸಿದೆ. ತುರ್ತು ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಬೇರೆ ಯಾವ ವಾಹನ ಅನ್ಯ ಜಿಲ್ಲೆ ಪ್ರವೇಶಿಸುವಂತಿಲ್ಲ. ಇವುಗಳನ್ನು ತಡೆಗಟ್ಟಲು ಜಿಲ್ಲಾ ಗಡಿಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ತಪಾಸಣೆ ಮಾಡಬೇಕು. ತುರ್ತು ಅಗತ್ಯ ಅಂದರೆ ತರಕಾರಿ, ಆಸ್ಪತ್ರೆಗೆ ತೆರಳಲು ಸಕಲ ದಾಖಲೆಗಳಿದ್ದರೆ ಮಾತ್ರ ಅವಕಾಶ ಕೊಡಬೇಕು ಇಲ್ಲದಿದ್ದಲ್ಲಿ ಅವುಗಳನ್ನು ವಾಪಸ್‌ ಕಳುಹಿಸಬೇಕು ಎಂಬುದು ನಿಯಮ.

"

ಧಾರವಾಡ ಜಿಲ್ಲೆಗೆ ಹಾವೇರಿ, ಗದಗ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಂದ ಪ್ರವೇಶಿಸಲು ಹತ್ತಾರು ದಾರಿಗಳಿವೆ. ಈ ಎಲ್ಲ ಕಡೆಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ತಪಾಸಣೆ, ದಾಖಲೆಗಳ ಪರಿಶೀಲನೆ ನಡೆಸಬೇಕು. ಅದರಂತೆ ಈ ನಾಲ್ಕು ಜಿಲ್ಲೆಗಳು ತಮ್ಮ ತಮ್ಮ ಜಿಲ್ಲೆಗಳ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ಮಾಡಿಕೊಂಡು ತಮ್ಮ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ತಪಾಸಣೆ ಮಾಡುತ್ತಿವೆ. ತುರ್ತು ಅಗತ್ಯ ವಾಹನವಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶಕೊಟ್ಟು, ಉಳಿದ ವಾಹನಗಳನ್ನು ವಾಪಸ್‌ ಕಳುಹಿಸುವ ಕೆಲಸ ನೆರೆ ಜಿಲ್ಲೆಗಳ ಚೆಕ್‌ಪೋಸ್ಟ್‌ ಸಿಬ್ಬಂದಿ ಮಾಡುತ್ತಿದ್ದಾರೆ. ಆದರೆ ಧಾರವಾಡ ಜಿಲ್ಲಾ ಪೊಲೀಸ್‌ ಇಲಾಖೆ ಮಾತ್ರ ಲಾಕ್‌ಡೌನ್‌ ಪ್ರಾರಂಭವಾಗಿ 15 ದಿನಗಳೇ ಕಳೆದರೂ ಚೆಕ್‌ಪೋಸ್ಟ್‌ಗಳನ್ನು ಮಾಡಿಯೇ ಇಲ್ಲ.

ಕೊರೋನಾ ಭೀತಿ: 'ಕೋವಿಡ್‌ ಸೋಂಕಿತ ಮಕ್ಕಳ ಚಿಕಿ​ತ್ಸೆಗೆ ಪ್ರತ್ಯೇಕ ವಾರ್ಡ್‌'

ಎಲ್ಲೆಲ್ಲಿ ಆಗಬೇಕಿತ್ತು?

ಹಾವೇರಿ ಜಿಲ್ಲೆಯ ಆಗಮಿಸುವ ವಾಹನಗಳ ತಡೆಗೆ ತಡಸ ಬಳಿ, ಉತ್ತರ ಕನ್ನಡ ಜಿಲ್ಲೆಯಿಂದ ಪ್ರವೇಶಿಸಲು ಅವಕಾಶವಿರುವ ಮುಂಡಗೋಡ ರಸ್ತೆ, ಕಲಘಟಗಿ ಬಳಿ, ಬೆಳಗಾವಿ ಜಿಲ್ಲೆಯಿಂದ ಪ್ರವೇಶಿಸುವ ಸವದತ್ತಿ ರಸ್ತೆ, ಪಿಬಿ ರಸ್ತೆ 4ರಲ್ಲಿ, ಉಪ್ಪಿನಬೆಟಗೇರಿ ಬಳಿ ಚೆಕ್‌ಪೋಸ್ಟ್‌ ಸ್ಥಾಪಿಸಬೇಕು. ಗದಗ ಜಿಲ್ಲೆಯಿಂದ ಆಗಮಿಸುವ ವಾಹನ ತಡೆಗೆ ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ ಸರಹದ್ದಿನ ಬಳಿ ಚೆಕ್‌ಪೋಸ್ಟ್‌ ಸ್ಥಾಪನೆಯಾಗಬೇಕಿತ್ತು. ಒಟ್ಟು 12-15ರಷ್ಟುಚೆಕ್‌ಪೋಸ್ಟ್‌ ಸ್ಥಾಪಿಸಬೇಕಿತ್ತು. ಕಳೆದ ವರ್ಷ ಲಾಕ್‌ಡೌನ್‌ ವೇಳೆ ಸ್ಥಾಪಿಸಲಾಗಿತ್ತು. ಆದರೆ ಈ ವರ್ಷ ಎಲ್ಲೂ ಚೆಕ್‌ಪೋಸ್ಟ್‌ಗಳೇ ಇಲ್ಲ. ಹೀಗಾಗಿ ಬೇಕಾಬಿಟ್ಟಿಯಾಗಿ ವಾಹನಗಳು ಪ್ರವೇಶಿಸುತ್ತಿವೆ. ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಇನ್ನು ಅಳ್ನಾವರದ ಮಾರ್ಗವಾಗಿ ಗೋವಾದಿಂದ ನೇರವಾಗಿ ಪ್ರವೇಶಿಸಲು ಅವಕಾಶವುಂಟು. ಇಲ್ಲೂ ಯಾವುದೇ ಚೆಕ್‌ಪೋಸ್ಟ್‌ ಸ್ಥಾಪಿಸಿಲ್ಲ.

ಏಕೆ ಮಾಡಿಲ್ಲ ?: 

ಏಕೆ ಚೆಕ್‌ಪೋಸ್ಟ್‌ ಮಾಡಿಲ್ಲ? ಎಂಬ ಪ್ರಶ್ನೆಗೆ, ಗಡಿ ಭಾಗದಲ್ಲೇನೂ ಚೆಕ್‌ಪೋಸ್ಟ್‌ ಮಾಡಿಲ್ಲ. ಆದರೆ ನಗರ ಪ್ರವೇಶಿಸುವ ಮುನ್ನವೇ ಚೆಕ್‌ಪೋಸ್ಟ್‌ ಮಾಡಿದ್ದೇವೆ. ಇಲ್ಲೇ ಹಿಡಿದು ತಪಾಸಣೆ ಮಾಡುತ್ತೇವೆ ಎಂದು ಸಬೂಬು ಜಿಲ್ಲಾ ಪೊಲೀಸರು ನೀಡುತ್ತಾರೆ. ಆದರೆ ಒಂದೊಮ್ಮೆ ನಗರ ಪ್ರವೇಶಿಸುವ ವಾಹನಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಏನಾದರೂ ಕಾರಣ ನೀಡಿ ವಾಹನ ಚಾಲಕರು ಜಾರಿಗೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲವೆ ನಗರಕ್ಕೆ ಪ್ರವೇಶಿಸಿದ ಬಳಿಕ ಒಳದಾರಿಗಳ ಮೂಲಕ ತಾವು ತಲುಪಬೇಕಾದ ಗಮ್ಯ ತಲುಪುತ್ತಾರೆ. ಹೀಗಾಗಿ ಅಂತರ್‌ ಜಿಲ್ಲೆಗಳ ವಾಹನಗಳ ಓಡಾಟ ಸರಾಗವಾಗಿಯೇ ಇದೆ ಎಂಬುದು ಪ್ರಜ್ಞಾವಂತರ ಆರೋಪ. ಇನ್ನಾದರೂ ಅಂತರ್‌ ಜಿಲ್ಲಾ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.

ಲಾಕ್‌ಡೌನ್‌ ಇರುವುದರಿಂದ ಬೇರೆ ಜಿಲ್ಲೆಗಳಿಗೆ ಪ್ರವೇಶಿಸಲು ಅನುಮತಿಯನ್ನೇ ನೀಡುತ್ತಿಲ್ಲ. ಜೊತೆಗೆ ಅಲ್ಲಲ್ಲಿ ನಮ್ಮ ಪೊಲೀಸರು ತಪಾಸಣೆ ಮಾಡುತ್ತಾರೆ. ಆದರೆ ಚೆಕ್‌ಪೋಸ್ಟ್‌ ಮಾಡಿಲ್ಲ. ನಗರದಲ್ಲೇ ಚೆಕ್‌ಪೋಸ್ಟ್‌ ಮಾಡಿ ಅನ್ಯ ಜಿಲ್ಲೆಗಳ ವಾಹನಗಳ ತಡೆಯುತ್ತಿದ್ದೇವೆ. ಲಾಕ್‌ಡೌನ್‌ ನಿಯಮದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಿಳಿಸಿದ್ದಾರೆ. 

ಹಾವೇರಿ ಸೇರಿದಂತೆ ಎಲ್ಲ ಜಿಲ್ಲಾಡಳಿತಗಳು ತಮ್ಮ ಜಿಲ್ಲಾ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆದು ತಮ್ಮ ಜಿಲ್ಲೆಯನ್ನು ಬಂದೋಬಸ್ತ್‌ ಮಾಡಿಕೊಂಡಿವೆ. ಆದರೆ ಧಾರವಾಡ ಜಿಲ್ಲೆ ಗಡಿಯಲ್ಲಿ ಮಾತ್ರ ಚೆಕ್‌ಪೋಸ್ಟ್‌ ಇಲ್ಲದ ಕಾರಣ ಬೇಕಾಬಿಟ್ಟಿಯಾಗಿ ವಾಹನಗಳು ಪ್ರವೇಶವಾಗುತ್ತಿವೆ. ಧಾರವಾಡ ಜಿಲ್ಲಾ ಪೊಲೀಸ್‌ ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದೆ. ಇನ್ನಾದರೂ ಚೆಕ್‌ಪೋಸ್ಟ್‌ ಮಾಡಿ ಜಿಲ್ಲಾ ಗಡಿಗಳನ್ನು ಬಂದೋಬಸ್ತ್‌ ಮಾಡಿಕೊಳ್ಳಬೇಕು ಎಂದು ನಾಗರಿಕ ಮಂಜುನಾಥ ಪಾಟೀಲ ಹೇಳಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona