Asianet Suvarna News Asianet Suvarna News

ಯಾದಗಿರಿ: ವಸತಿ ಶಾಲೆಯ 350ಕ್ಕೂ ಹೆಚ್ಚು ಮಕ್ಕಳಿಗೆ ವಿಚಿತ್ರ ಚರ್ಮರೋಗ, ಕಾರಣ ನಿಗೂಢ?

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾಗ ಈ ವಸತಿ ಶಾಲೆ ಮಕ್ಕಳಿಗೆ ಕಾಡುತ್ತಿರುವ ಈ ಚರ್ಮವ್ಯಾಧಿ ವಿಚಾರ ಬೆಳಕಿಗೆ ಬಂದಿದೆ.

Strange Skin Disease to More than 350 Children in Yadgir grg
Author
First Published Nov 29, 2023, 4:26 AM IST

ಯಾದಗಿರಿ(ನ.29):  ಗುರುಮಠಕಲ್‌ ತಾಲೂಕಿನ ಸೈದಾಪುರ ಸಮೀಪದ ಬಾಲಛೇಡದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಮಾದರಿ ವಸತಿ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಿತ್ರ ಚರ್ಮವ್ಯಾಧಿಯಿಂದ ಬಳಲುತ್ತಿದ್ದಾರೆ. ದೇಹದಾದ್ಯಂತ ತುರಿಕೆ, ಗುಳ್ಳೆಗಳು, ಸುಕ್ಕುಗಟ್ಟಿದಂಥ ವಿಚಿತ್ರ ಚರ್ಮ ಸಮಸ್ಯೆಯಿಂದ ಮಕ್ಕಳು ನರಳುತ್ತಿದ್ದು, ನಿತ್ಯ ಇದೇ ಕಾರಣಕ್ಕೆ15ರಿಂದ 20 ಮಕ್ಕಳು ಶಾಲೆಗೆ ಗೈರಾಗುತ್ತಿದ್ದಾರೆ. ಕಲುಷಿತ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕೊರತೆಯೇ ಚರ್ಮ ರೋಗಕ್ಕೆ ಮೂಲ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಅವರು ಯಾದಗಿರಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾಗ ಈ ವಸತಿ ಶಾಲೆ ಮಕ್ಕಳಿಗೆ ಕಾಡುತ್ತಿರುವ ಈ ಚರ್ಮವ್ಯಾಧಿ ವಿಚಾರ ಬೆಳಕಿಗೆ ಬಂದಿದೆ.

ಯಾದಗಿರಿಯ ಈ ಬಾಲಕಿ ವೈದ್ಯಕೀಯ ಲೋಕಕ್ಕೆ ಸವಾಲು; 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸಿ ಬದುಕಿದ ಬಾಲೆ!

ಒಟ್ಟು 506 ಮಕ್ಕಳ ಹಾಜರಾತಿ ಹೊಂದಿರುವ ಈ ವಸತಿ ಶಾಲೆಗೆ ಶಶಿಧರ್ ಕೋಸಂಬೆ ಸೋಮವಾರ ಭೇಟಿದ್ದು, ಈ ವೇಳೆ ಅಲ್ಲಿ ಅನೇಕ ಸಮಸ್ಯೆಗಳು ಕಂಡಿವೆ. ಕುಡಿಯುವ ನೀರು, ಪೌಷ್ಟಿಕ ಆಹಾರದ ಅಲಭ್ಯತೆ, ಸ್ವಚ್ಛತೆ ಕೊರತೆ, ಊಟದಲ್ಲಿ ಹುಳು ಹೀಗೆ ಹತ್ತು ಹಲವು ವಿಚಾರಗಳನ್ನು ಕಂಡು ಅವರು ಕಿಡಿಕಾರಿದ್ದಾರೆ. ಇದೇ ವೇಳೆ ಅಲ್ಲಿನ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ವಿದ್ಯಾರ್ಥಿಗಳು ತಮಗೆ ಕಾಡುತ್ತಿರುವ ಚರ್ಮರೋಗದ ಕುರಿತು ಅಳಲು ತೋಡಿಕೊಂಡಿದ್ದಾರೆ ಎಂದು ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಚರ್ಮರೋಗದ ಕಾರಣಕ್ಕೇ ದಿನಂಪ್ರತಿ ಏನಿಲ್ಲವೆಂದರೂ 15-20 ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ, ತುಸು ಚೇತರಿಸಿಕೊಳ್ಳುವವರೆಗೂ ಮನೆಯಲ್ಲೇ ಉಳಿಯುತ್ತಾರೆ. ವಿಚಾರಣೆ ವೇಳೆ ಮಕ್ಕಳಿಂದಲೇ ಈ ವಿಚಾರ ಬಯಲಾಯಿತು. ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಕುಡಿಯುವ ಹಾಗೂ ಬಳಸುವ ನೀರಿನ ಸಂಪ್‌ನಲ್ಲಿ ಸಾಕಷ್ಟು ತ್ಯಾಜ್ಯ ಬೆರೆತಿರುವುದು ಕಂಡುಬಂದಿದೆ. ಬಹುತೇಕ ಈ ನೀರು ಕುಡಿಯಲೇ ಅಯೋಗ್ಯ ಎಂಬಂಥ ಸ್ಥಿತಿಯಲ್ಲಿತ್ತು. ಇದೇ ಮಕ್ಕಳ ಚರ್ಮರೋಗಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಿರುವ ಅವರು, ಎಲ್ಲರ ಆರೋಗ್ಯ ತಪಾಸಣೆಗೂ ಆಗ್ರಹಿಸಿದರು.

ತಾವು ಭೇಟಿ ನೀಡಿದ ವೇಳೆ ಅಲ್ಲಿ ಪ್ರಾಂಶುಪಾಲರಾಗಲಿ, ವಾರ್ಡನ್‌ಗಳಾಗಲಿ ಯಾರೂ ಇರಲಿಲ್ಲ, ಮಕ್ಕಳ ಸುರಕ್ಷತೆಗೆ ಅಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಿಡಿಕಾರಿದ ಅವರು, ನರ್ಸ್‌ವೊಬ್ಬರು ಬಂದು ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಹೋಗುತ್ತಿದ್ದು, ಆ ಮಾತ್ರೆಯಿಂದಲೂ ಹಲವು ಮಕ್ಕಳಿಗೆ ಒಂದಷ್ಟು ಅಡ್ಡಪರಿಣಾಮ ಆದ ಆರೋಪಗಳು ಕೇಳಿಬಂದಿವೆ ಎಂದು ಮಾಹಿತಿ ನೀಡಿದರು.

ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕೋಸಂಬೆ, ಕೂಡಲೇ ಅಲ್ಲಿಗೆ ವೈದ್ಯರ ತಂಡ ಧಾವಿಸಿ ಚರ್ಮವ್ಯಾಧಿಗೆ ಚಿಕಿತ್ಸೆ ನೀಡಿ ಎಂದು ಸೂಚಿಸಿದರು.

ಯಾದಗಿರಿ ಶ್ರೀಗಂಧ ಕಳವು: ಶಿವಮೊಗ್ಗ, ಕೇರಳದ ನಂಟು

ಮಕ್ಕಳ ಆರೋಗ್ಯ ತಪಾಸಣೆಯನ್ನೇ ನಡೆಸಿಲ್ಲ. ನರ್ಸ್‌ವೊಬ್ಬರು ಬಂದು ಮಾತ್ರೆ ಕೊಟ್ಟು ಹೋಗುತ್ತಾರೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆ ಮಾತ್ರೆಗಳು ಸಹ ವ್ಯತಿರಿಕ್ತ ಪರಿಣಾಮ ಬೀರಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ತಿಳಿಸಿದ್ದಾರೆ. 

ಕಾರಣ ನಿಗೂಢ?

ತುರಿಕೆ, ಗುಳ್ಳೆ, ಸುಕ್ಕುಗಟ್ಟಿದ ಚರ್ಮದಿಂದ ಬಳಲುವ ಮಕ್ಕಳು
- ಯಾದಗಿರಿ ಬಾಲಛೇಡದ ಶಾಲೆಗೆ ಅಧಿಕಾರಿ ಭೇಟಿ ವೇಳೆ ಪತ್ತೆ
- ಎಪಿಜೆ ಅಬ್ದುಲ್‌ ಕಲಾಂ ಮಾದರಿ ವಸತಿ ಶಾಲೆ ಮಕ್ಕಳಿಗೆ ವಿಚಿತ್ರ ಬಾಧೆ
- ವಸತಿ ಶಾಲೆಯ 500 ಮಕ್ಕಳ ಪೈಕಿ 350ಕ್ಕೂ ಹೆಚ್ಚು ಮಕ್ಕಳಿಗೆ ಸಮಸ್ಯೆ
- ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಭೇಟಿ ವೇಳೆ ಬಯಲು
- ನಿತ್ಯ ಚರ್ಮವ್ಯಾಧಿಯಿಂದ 15-20 ಮಕ್ಕಳು ಶಾಲೆಗೆ ಗೈರು, ಕೆಲವರು ಮನೆಗೆ
- ಕಲುಷಿತ ಕುಡಿವ ನೀರು, ನೈರ್ಮಲ್ಯ ಸಮಸ್ಯೆಯಿಂದ ಕಾಯಿಲೆ ಬಂದಿರುವ ಶಂಕೆ

Follow Us:
Download App:
  • android
  • ios