Asianet Suvarna News Asianet Suvarna News

ಮದುವೆ ಆಸೆ ತೋರಿಸಿ ರೇಪ್‌: ಕೋರ್ಟ್‌ಲ್ಲಿ ವಿಚಿತ್ರ ಕೇಸ್‌ ರದ್ದು

ಪ್ರಿಯತಮೆಯಿಂದ ಅತ್ಯಾಚಾರದ ದೂರು, ನಂತರ ಆರೋಪಿಯನ್ನೇ ಗಂಡನೆಂದು ಘೋಷಿಸಲು ಅರ್ಜಿ

Strange Case Canceled in Karnataka High Court grg
Author
Bengaluru, First Published Aug 10, 2022, 7:55 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು(ಆ.10):  ಯುವತಿ ಅನುಸರಿಸಿದ ಭಿನ್ನ ಕಾನೂನು ಕ್ರಮ ಹಾಗೂ ಆಕೆಯ ನಡವಳಿಕೆಯ ಅಂಶಗಳನ್ನು ಪರಿಗಣಿಸಿ ಆಕೆ ತನ್ನ ಪ್ರಿಯತಮನ ವಿರುದ್ಧ ದಾಖಲಿಸಿದ್ದ ಅತ್ಯಾಚಾರದ ದೂರನ್ನು ಹೈಕೋರ್ಟ್‌ ರದ್ದುಪಡಿಸಿದೆ. ಪ್ರಕರಣದ ಮತ್ತೊಂದು ವಿಶೇಷವೆಂದರೆ, ಪ್ರಿಯತಮನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆಯು ಒಂದು ವರ್ಷದ ನಂತರ ಅದೇ ಆರೋಪಿಯನ್ನು ತನ್ನ ಪತಿಯೆಂದು ಘೋಷಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿದ್ದಳು. ಆ ದೂರು ರದ್ದು ಪಡಿಸಬೇಕೆಂದು ಪ್ರಿಯತಮ ಯಾವಾಗ ಹೈಕೋರ್ಟ್‌ ಮೆಟ್ಟಿಲೇರಿದರೋ, ಅದು ವಿಚಾರಣೆಯ ಹಂತದಲ್ಲಿರುವಾಗಲೇ ಕೌಟುಂಬಿಕ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ಮಹಿಳೆ ಹಿಂಪಡೆದಿದ್ದಳು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್‌ ಅತ್ಯಾಚಾರ ಪ್ರಕರಣದಿಂದ ಪ್ರಿಯತಮನನ್ನು ಪಾರು ಮಾಡಿದೆ.

ರಶ್ಮಿ ಎಂಬಾಕೆ ತನ್ನ ವಿರುದ್ಧ ದಾಖಲಿಸಿರುವ ಅತ್ಯಾಚಾರ, ಜಾತಿ ಹೆಸರಿನಲ್ಲಿ ನಡೆಸಿದ ದೌರ್ಜನ್ಯ, ಬಲವಂತವಾಗಿ ಗರ್ಭಪಾತ ಮಾಡಿಸಿದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸೂರ್ಯ ಎಂಬಾತ (ಇಬ್ಬರ ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌ ಈ ಆದೇಶ ಮಾಡಿದೆ.

ಚುನಾವಣೆ ಆಯುಕ್ತರನ್ನು ಕೋರ್ಟ್‌ಗೆ ಕರೆಸುವುದು ಸರಿಯಲ್ಲ: ಹೈಕೋರ್ಟ್‌

ಪ್ರಕರಣದ ವಿವರ:

2016ರಲ್ಲಿ ನಾನು ಮತ್ತು ಸೂರ್ಯ ಸ್ನೇಹಿತರಾಗಿ, ನಂತರ ಪ್ರೇಮಿಗಳಾದೆವು. ಸೂರ್ಯ ಆಗಾಗ ನನ್ನನ್ನು ಸಿನಿಮಾ, ಉದ್ಯಾನ ಮತ್ತು ಹೋಟೆಲ್‌ಗೆ ಕರೆದೊಯ್ಯುತ್ತಿದ್ದ. ಮದುವೆಯಾಗುವುದಾಗಿ ಭರವಸೆ ನೀಡಿ ಒಂದು ದಿನ ಸ್ನೇಹಿತನ ಮನೆಗೆ ಕರೆದು ಲೈಂಗಿಕ ಸಂಪರ್ಕ ಬೆಳೆಸಿದ್ದ. ನಂತರ ಈ ವಿಚಾರ ಬೇರೆಯವರಿಗೆ ತಿಳಿಸದಂತೆ ನಾಲ್ಕೈದು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ ಕಾರಣ ನಾನು ಗರ್ಭ ಧರಿಸಿದ್ದೆ. ಆದರೆ, ಬಲವಂತವಾಗಿ ಗರ್ಭ ತೆಗೆಸಿ ನನ್ನನ್ನು ಅಲಕ್ಷ್ಯ ಮಾಡತೊಡಗಿದ. ಅಂತಿಮವಾಗಿ ಮದುವೆಯಾಗದೆ ವಂಚಿಸಿದ್ದಾನೆ ಎಂದು ಆರೋಪಿಸಿ ರಶ್ಮಿ 2017ರ ಅ.10ರಂದು ಪೊಲೀಸರಿಗೆ ದೂರು ನೀಡಿದ್ದಳು.

ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ವಂಚನೆ, ಅತ್ಯಾಚಾರ, ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡಿಸಿದ, ಜೀವ ಬೆದರಿಕೆ ಹಾಕಿದ ಮತ್ತು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಮಹಿಳೆ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ ಆರೋಪ ಸಂಬಂಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣವನ್ನು ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

ಅರ್ಹರು ಸಿಗದಿದ್ದರೆ ಸ್ತ್ರೀ ಮೀಸಲು ಹುದ್ದೆ ಪುರುಷರಿಗೆ: ಹೈಕೋರ್ಟ್‌

ಈ ಮಧ್ಯೆ 2018ರ ಏ.13ರಂದು ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಹೋದ ರಶ್ಮಿ, ಸೂರ್ಯನಿಗೆ ಸಂಬಂಧಿಕರ ಯುವತಿಯೊಂದಿಗೆ ಮದುವೆ ಮಾಡಲು ಪೋಷಕರು ಸಿದ್ಧವಾಗಿದ್ದಾರೆ. ಹೀಗಾಗಿ, ಸೂರ್ಯ ನನ್ನ ಗಂಡ ಎಂಬುದಾಗಿ ಘೋಷಿಸಬೇಕು. ಬೇರೊಂದು ಮದುವೆಯಾಗದಂತೆ ಆತನಿಗೆ ಆದೇಶಿಸಬೇಕು ಎಂದು ಕೋರಿದ್ದಳು. ಆದರೆ, 2018ರ ಮೇ ತಿಂಗಳಲ್ಲಿ ಸೂರ್ಯ ಹೈಕೋರ್ಟ್‌ ಮೆಟ್ಟಿಲೇರಿ ತನ್ನ ವಿರುದ್ಧದ ದೂರು ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದ. ಈ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 2020ರ ಜ.17ರಂದು ರಶ್ಮಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಿಸಿದ್ದ ಮೂಲ ದಾವೆ ಹಿಂಪಡೆದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಯುವತಿಯು ಅನುಸರಿಸಿದ ಕಾನೂನು ಕ್ರಮ, ನಡವಳಿಕೆಯ ಅಂಶಗಳನ್ನು ಪರಿಗಣಿಸುವ ಜೊತೆಗೆ ಆರೋಪಿಯು ದೂರುದಾರೆ ಮೇಲೆ ಜಾತಿ ಹೆಸರಿನಲ್ಲಿ ದೌರ್ಜನ್ಯ ನಡೆಸಿದ್ದಾರೆ ಎಂಬುದನ್ನು ದೋಷಾರೋಪ ಪಟ್ಟಿಯ ಸಾಕ್ಷ್ಯಗಳು ಸಾಬೀತುಪಡಿಸಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ. ಆರೋಪಿ ಪರ ವಕೀಲ ಡಿ.ಮೋಹನ ಕುಮಾರ್‌ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.
 

Follow Us:
Download App:
  • android
  • ios