ಚುನಾವಣೆ ಆಯುಕ್ತರನ್ನು ಕೋರ್ಟ್‌ಗೆ ಕರೆಸುವುದು ಸರಿಯಲ್ಲ: ಹೈಕೋರ್ಟ್
ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಗಳನ್ನು ಸಾಕ್ಷಿ ಹೇಳಲು ಕೋರ್ಟ್‌ಗೆ ಕರೆಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ
ಬೆಂಗಳೂರು(ಆ.06): ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಗಳನ್ನು ಸಾಕ್ಷಿ ಹೇಳಲು ಕೋರ್ಟ್‌ಗೆ ಕರೆಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕಮಟಳ್ಳಿ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಸಂಬಂಧ ಸಾಕ್ಷ್ಯ ನುಡಿಯಲು ವಿಚಾರಣೆಗೆ ಖುದ್ದು ಹಾಜರಾಗಲು ಸೂಚಿಸಿ ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಸುನಿಲ್ ಅರೋರಾ ಅವರಿಗೆ ಸಮನ್ಸ್ ಜಾರಿ ಮಾಡಿದ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿದೆ. ಸಾಮಾನ್ಯವಾಗಿ ಸಿವಿಲ್ ವ್ಯಾಜ್ಯಗಳಲ್ಲಿ ಸಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಕೋರ್ಚ್‌ಗೆ ಹಾಜರಾಗುವಂತೆ ಆದೇಶಿಸುವುದಿಲ್ಲ ಎಂದಿದೆ.
ಪ್ರಕರಣವೇನು?
ಅಥಣಿ ವಿಧಾನಸಭಾ ಕ್ಷೇತ್ರಕ್ಕೆ 2019ರಲ್ಲಿ ಉಪ ಚುನಾವಣೆ ನಡೆದಿತ್ತು. ನಿಗದಿಯಾಗಿದ್ದ ಚುನಾವಣೆ ಮುಂದೂಡಿ ಮತ್ತು ನಾಮಪತ್ರ ಸಲ್ಲಿಕೆ ನಿಗದಿಪಡಿಸಿದ್ದ ಸಮಯವನ್ನು ವಿಸ್ತರಿಸಿ 2019ರ ಸೆ.27ರಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿತ್ತು. ನಂತರ ಡಿ.12ರಂದು ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಆಯ್ಕೆಯಾಗಿದ್ದರು. ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ ಹೈಕೋರ್ಚ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ, ನ್ಯಾಯಾಂಗ ಅಧಿಕಾರಿಗಳಿಗೆ ರಕ್ಷಣೆ ಅಗತ್ಯ: ಹೈಕೋರ್ಟ್ ನ್ಯಾಯಮೂರ್ತಿ
ಇದರಿಂದ ಚುನಾವಣೆ ಮುಂದೂಡುವುದಕ್ಕೆ ಕಾರಣ ವಿವರಿಸಿ ಸಾಕ್ಷ್ಯ ನುಡಿಯಲು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿ ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಸುನಿಲ್ ಅರೋರಾ ಅವರಿಗೆ ಏಕ ಸದಸ್ಯ ನ್ಯಾಯಪೀಠ ಸಮನ್ಸ್ ಜಾರಿ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೇಂದ್ರ ಚುನಾವಣಾ ಆಯೋಗವು ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಮೇಲ್ಮನವಿ ಸಂಬಂಧ ವಾದ-ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಪೀಠ, ಸಾಮಾನ್ಯವಾಗಿ ಸಿವಿಲ್ ವ್ಯಾಜ್ಯಗಳಲ್ಲಿ ಸಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಕೋರ್ಚ್‌ಗೆ ಹಾಜರಾಗುವಂತೆ ಆದೇಶಿಸುವುದಿಲ್ಲ. ಸಾಂವಿಧಾನಿಕ ಸಂಸ್ಥೆಯ ಮಾಜಿ ಮುಖ್ಯಸ್ಥರನ್ನು ಕರೆಸುವುದು, ಅವರಿಗೆ ದಾಖಲೆ ತರುವಂತೆ ಸೂಚಿಸುವುದು ಸರಿಯಲ್ಲ. ಆದರೆ, ನ್ಯಾಯಾಲಯಗಳು ಭಾರತೀಯ ಚುನಾವಣಾ ಆಯೋಗದಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಅಥವಾ ನಿವೃತ್ತ ಅಧಿಕಾರಿಗಳನ್ನು ಸುಮ್ಮನೆ ಕೆಲವು ಪ್ರಶ್ನೆ ಕೇಳಲು ಸಮನ್ಸ್ ಜಾರಿಗೊಳಿಸುವುದು ಸಮಂಜಸವಲ್ಲ ಎಂದು ಹೇಳಿದೆ. ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಗಳನ್ನು ಸಾಕ್ಷಿ ಹೇಳಲು ಕೋರ್ಟ್‌ಗೆ ಕರೆಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ