ಅರ್ಹರು ಸಿಗದಿದ್ದರೆ ಸ್ತ್ರೀ ಮೀಸಲು ಹುದ್ದೆ ಪುರುಷರಿಗೆ: ಹೈಕೋರ್ಟ್‌

ಅರ್ಹರು ಸಿಗದಿದ್ದರೆ ಸ್ತ್ರೀ ಮೀಸಲು ಹುದ್ದೆ ಪುರುಷರಿಗೆ ಎಂದು ಹೈಕೋರ್ಟ್‌ ಆದೇಶಿಸಿದೆ. ಬ್ಯಾಕ್‌ಲಾಗ್‌ ಹುದ್ದೆಗೆ ಸ್ತ್ರೀಯರು ಸಿಗದಿದ್ದರೆ ಅದೇ ಪ್ರವರ್ಗದ ಪುರುಷರ ನೇಮಿಸಬಹುದು ಎಂದಿದೆ.

Backlog Of Unfilled Women Seats for Male Candidates says high court gow

ಬೆಂಗಳೂರು (ಆ.1): ಬ್ಯಾಕ್‌ಲಾಗ್‌ ಮಹಿಳಾ ಮೀಸಲು ಹುದ್ದೆಗೆ ಅರ್ಹರು ಲಭ್ಯವಿಲ್ಲದಿದ್ದಾಗ ಆ ಹುದ್ದೆಗಳಿಗೆ ಅದೇ ಪ್ರವರ್ಗದ ಅರ್ಹ ಪುರುಷರನ್ನು ನೇಮಕ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‌ಟಿ ಮಹಿಳಾ ವರ್ಗಕ್ಕೆ ಮೀಸಲಾದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ನೇಮಕ ಮಾಡುವಂತೆ ದ್ಯಾವಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸುನಿಲ್‌ದತ್‌ ಯಾದವ್‌ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ರಾಜ್ಯ 2002ರ ನ.22ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಬೆಂಗಳೂರು ವಿವಿಯು ವಾಸ್ತುಶಿಲ್ಪ ವಿಭಾಗದಲ್ಲಿ ಎಸ್‌ಟಿ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಪ್ರಕ್ರಿಯೆ ಮೂರು ತಿಂಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ. ಬೆಂಗಳೂರು ವಿಶ್ವ ವಿದ್ಯಾಲಯ 2011ರ ಮಾ.21ರಂದು ಮುಕ್ತ ಕೆಟಗರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ, ಎಸ್ಟಿಮಹಿಳೆಯರ ವರ್ಗದಲ್ಲಿ ಯಾವ ಅಭ್ಯರ್ಥಿಯ ಆಯ್ಕೆ ಸಲ್ಲಿಸದ ಕಾರಣ ಆ ಹುದ್ದೆ ಭರ್ತಿಯಾಗಿರಲಿಲ್ಲ. ಆ ವಿಷಯ ತಿಳಿದ ಅರ್ಜಿದಾರರು, ಎಸ್‌ಟಿ ಮಹಿಳಾ ವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದರು. 2002 ನ.22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲೇಖಿಸಿದ್ದರು. ಅವರ ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಎ.ಜಿ. ಶಿವಣ್ಣ ವಾದ ಮಂಡಿಸಿ, ಬೆಂಗಳೂರು ವಿವಿಯಲ್ಲಿ ಖಾಲಿಯಿದ್ದ ಆ ಹುದ್ದೆಯನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿಲ್ಲ. 2021ರ ಸರ್ಕಾರದ ಅಧಿಸೂಚನೆಯಂತೆ ಅರ್ಜಿದಾರರ ಮನವಿಯನ್ನೂ ಪರಿಗಣಿಸಿಲ್ಲ. ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯದ ಕಾಯ್ದೆ ಸೆಕ್ಷನ್‌ 53(1)ರಡಿಯಲ್ಲಿ ಕಾಲಕಾಲಕ್ಕೆ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿದ್ದರೂ, ಆ ನಿಯಮವನ್ನು ಪಾಲನೆ ಮಾಡಿಲ್ಲ.

ಕರ್ನಾಟಕ ನಾಗರಿಕ ಸೇವಾ ನಿಯಮ (ಸಾಮಾನ್ಯ ನೇಮಕ)-ಅಧಿನಿಯಮ-1977ರ ನಿಯಮ 9(1ಬಿ) ಅಡಿಯಲ್ಲಿ ಜನರಲ್‌ ಮೆರಿಟ್‌, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ವರ್ಗದ ಹುದ್ದೆಗಳಲ್ಲಿ ಶೇ.20ರಷ್ಟುಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು. ಒಂದು ವೇಳೆ ಆರ್ಹ ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಅದೇ ವರ್ಗದ ಪುರುಷರು ಲಭ್ಯವಿದ್ದಾಗ ಅವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಭರ್ತಿ ಮಾಡುವ ಅವಕಾಶವಿದೆ. ಆದ್ದರಿಂದ ಅರ್ಜಿದಾರ ಮನವಿ ಪರಿಗಣಿಸುವಂತೆ ಬೆಂಗಳೂರು ವಿವಿ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

Latest Videos
Follow Us:
Download App:
  • android
  • ios