*    ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್‌ ತಾಕೀತು*   ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಗಣಿಗಾರಿಕೆಯ ಅಕ್ರಮಗಳು ಕೇಳಿಬರುತ್ತಿರುವುದು ಏಕೆ?*   ರಾಜ ಮಾರ್ಗದಲ್ಲಿ ಗಣಿಗಾರಿಕೆ ನಡೆದರೆ ಜಿಲ್ಲೆಯಲ್ಲಿ ಆದಾಯ ಹೆಚ್ಚಳ 

ಹಾವೇರಿ(ಜು.14): ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತಂತೆ ವ್ಯಾಪಕ ದೂರುಗಳಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮಗಳನ್ನು ತಡೆಯುವಂತೆ ಅಧಿಕಾರಿಗಳಿಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹಾಲಪ್ಪ ತಾಕೀತು ಮಾಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಹಾವೇರಿಯಲ್ಲಿ ಗಣಿಗಾರಿಕೆಯ ಅಕ್ರಮಗಳು ಕೇಳಿಬರುತ್ತಿರುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾಜ ಮಾರ್ಗದಲ್ಲಿ ಗಣಿಗಾರಿಕೆ ನಡೆದರೆ ಜಿಲ್ಲೆಯಲ್ಲಿ ಆದಾಯ ಹೆಚ್ಚಳವಾಗುತ್ತದೆ. ಜಿಲ್ಲೆಗೆ ಒಳ್ಳೆಯ ಹೆಸರು ಬರುತ್ತದೆ. ರಾಜಧನವು ಹೆಚ್ಚಳವಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಗಣಿ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ನೆರವು ಪಡೆದು ವಾಮ ಮಾರ್ಗದಲ್ಲಿ ಮರಳು ಹಾಗೂ ಕಲ್ಲು ಗಣಿಗಾರಿಕೆ ತಡೆಯುವಂತೆ ತಾಕೀತು ಮಾಡಿದರು.

HAVERI: ಕೃಷಿ ಸಚಿವರ ಜಿಲ್ಲೆಯ ಹಲವೆಡೆ ಗೊಬ್ಬರಕ್ಕಾಗಿ ಹಾಹಾಕಾರ: ರೈತರ ಪರದಾಟ

ಜಿಲ್ಲೆಯಲ್ಲಿ ಎಲ್ಲೆಲ್ಲಿ ಸರ್ಕಾರಿ ಬ್ಲಾಕ್‌ಗಳಿವೆ, ಎಲ್ಲೆಲ್ಲಿ ಖಾಸಗಿ ಬ್ಲಾಕ್‌ಗಳಿವೆ ಎಂದು ಪರಿಶೀಲನೆ ನಡೆಸಿ, ಬ್ಲಾಕ್‌ಗಳು ಅಲಾಟ್‌ ಆಗದೇ ಅಕ್ರಮವಾಗಿ ಕಲ್ಲುಗಾಣಿಕೆ ಮಾಡುವವರ ಕುರಿತಂತೆ ತನಿಖೆ ಮಾಡಿ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದೇಕೆ? ಶೀಘ್ರವೇ ಮಾಹಿತಿ ಕಲೆಹಾಕಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಮುಂದೆ ಗಣಿಗಾರಿಕೆಗೆ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಅರ್ಜಿ ಬಂದ 7 ದಿನದೊಳಗೆ ಎನ್‌.ಒ.ಸಿ. ಕೊಡಬೇಕು. ಒಂದೊಮ್ಮೆ ನಿಯಮಾನುಸಾರ ಎನ್‌.ಒ.ಸಿ. ಕೊಡಲು ಸಾಧ್ಯವಾಗದಿದ್ದರೆ ಹಿಂಬರಹ ನೀಡಬೇಕು ಎಂದು ಸೂಚನೆ ನೀಡಿದರು.

ಅನಧಿಕೃತವಾಗಿ ಮರಳು ಸಾಗಾಣಿಕೆ ಸಂದರ್ಭದಲ್ಲಿ ವಶಪಡಿಸಕೊಂಡ ಮರಳನ್ನು, ಹರಾಜು ಮೂಲಕ ವಿಲೇವಾರಿಗೊಳಿಸುವಂತೆ ಗಣಿ ಇಲಾಖೆ ಪ್ರಾಧಾನ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಹಟ್ಟಿಗಣಿಗೆ ನೀಡಿರುವ ಮರಳು ಬ್ಲಾಕ್‌ಗಳಿಗೆ ತ್ವರಿತವಾಗಿ ಫಾರೆಸ್ಟ್‌ ಕ್ಲಿಯರೆನ್ಸ್‌ ಸೇರಿದಂತೆ ಇತರೆ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ತ್ವರಿತವಾಗಿ ಗಣಿಗಾರಿಕೆ ಆರಂಭಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮಾತನಾಡಿ, ಅಕ್ರಮ ಮರಳು ಹಾಗೂ ಗಣಿಗಾರಿಕೆ ತಡೆಗೆ ಕೈಗೊಂಡಿರುವ ಕ್ರಮಗಳು, ಪಾರದರ್ಶಕವಾಗಿ ಸಾರ್ವಜನಿಕರಿಗೆ ಮರಳು ದೊರಕುವ ಕ್ರಮವಾಗಿ ಹಟ್ಟಿಗಣಿ ಕಂಪನಿಗೆ ಜಿಲ್ಲೆಯಲ್ಲಿ 8 ಮರಳು ಬ್ಲಾಕ್‌ಗಳನ್ನು ವಹಿಸಿರುವ ಕುರಿತಂತೆ ಮಾಹಿತಿ ನೀಡಿದರು. ಅಕ್ರಮ ಗಣಿಗಾರಿಕೆ ತಡೆಗೆ ಪೊಲೀಸ್‌ ಮತ್ತು ಕಂದಾಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರಿಸಿದರು. ಹೆಚ್ಚಿನ ಬಿಗಿ ಕ್ರಮಕೈಗೊಳ್ಳಲು ಚೆಕ್‌ಪೋಸ್ಟ್‌ ಆರಂಭಿಸಲು ಹಾಗೂ ಅಗತ್ಯ ಸಿಬ್ಬಂದಿ ನೇಮಿಸಲು ಡಿ.ಎಂ.ಎಫ್‌. ಅನುದಾನದ ಕೊರತೆ ಇದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ. ರೇಜು ಟಿ.ಎಂ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಗಣಿ ಇಲಾಖೆ ಜಂಟಿ ನಿರ್ದೇಶಕ ಮಹೇಶ್ವರ ಉಪಸ್ಥಿತರಿದ್ದರು.

ಮಕ್ಕಳಿಗೆ ಕಳಪೆ ಆಹಾರ ಪೂರೈಕೆಯಾಗದಂತೆ ಎಚ್ಚರ ವಹಿಸಿ

ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗುತ್ತಿರುವ ಕುರಿತಂತೆ ವ್ಯಾಪಕ ದೂರುಗಳಿವೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕರು ಎಚ್ಚರ ವಹಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವ ಬದಲು ತಮ್ಮ ವ್ಯಾಪ್ತಿಯ ಪ್ರತಿ ಅಂಗನವಾಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ, ವೀಕ್ಷಣೆ ಮಾಡಬೇಕು. ಅಲ್ಲಿಯ ನ್ಯೂನತೆಗಳ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆಯಬೇಕು ಎಂದು ಸೂಚನೆ ನೀಡಿದರು.

ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿ ಯಾವುದೇ ವಂಚನೆಯಾಗಬಾರದು. ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹಾಲು, ಮೊಟ್ಟೆನೀಡುವ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಅವರಲ್ಲಿರುವ ನ್ಯೂನತೆಗಳನ್ನು ಹೊಗಲಾಡಿಸಿ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಶ್ರಮಿಸಬೇಕು. ಅಂಗನವಾಡಿ ಪರಿಸರವನ್ನು ಸ್ವಚ್ಛತೆಗೊಳಿಸಿ ಮಕ್ಕಳ ಆಕರ್ಷಣೀಯ ಕೇಂದ್ರಗಳಾಗಿ ರೂಪಿಸಬೇಕು. ಇಲ್ಲಿನ ಮೂಲ ಸೌಕರ್ಯಗಳ ಕೊರತೆಗಳು ಇದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ಕೋವಿಡ್‌ ಪೂರ್ವದಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯಕೀಯ ಮತ್ತು ಪೌಷ್ಟಿಕ ಆಹಾರ ಪೂರೈಕೆಗಾಗಿ ಪ್ರತಿ ತಿಂಗಳು ಪ್ರತಿ ಮಗುವಿಗೆ .2 ಸಾವಿರ ನೀಡುವ ಕುರಿತಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ತಾಲೂಕು ಹಂತದಲ್ಲಿ ಮೊಟ್ಟೆಖರೀದಿಗೆ ಟೆಂಡರ್‌ ಕರೆಯಲು ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು.

ಮಾತೃಪೂರ್ಣ, ಮಾತೃ ವಂದನೆ ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿರುವ ತಾಲೂಕುಗಳಲ್ಲಿ ವಿಶೇಷ ಐ.ಇ.ಸಿ. ಚುಟುವಟಿಕೆಗಳನ್ನು ಹಮ್ಮಿಕೊಂಡು ತಾಯಂದಿರ ಮನವೊಲಿಸಿ ಅಂಗನವಾಡಿಯಲ್ಲೇ ಆಹಾರ ಸೇವಿಸಲು ಕ್ರಮ ಕೈಗೊಳ್ಳಿ. ಬಡವರಿಗಾಗಿ ರೂಪಿಸಿರುವ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು. ನಿವೇಶನ ಇಲ್ಲದ ಅಂಗನವಾಡಿ ಕಟ್ಟಡಗಳಿಗೆ ತ್ವರಿತವಾಗಿ ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು ಅಥವಾ ಬಳಕೆಯಾಗದ ಸರ್ಕಾರಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು. 75ನೇ ಅಮೃತಮಹೋತ್ಸವದ ಅಂಗವಾಗಿ ಜಿಲ್ಲೆಗೆ 25 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಆ.15 ರೊಳಗಾಗಿ ಎಲ್ಲ ಕಟ್ಟಡಗಳನ್ನು ಪೂರ್ಣಗೊಳಿಸಬೇಕು. ಆ.15 ರಂದು ರಾಜ್ಯಾದ್ಯಂತ ಅಮೃತ ಅಂಗನವಾಡಿ ಕೇಂದ್ರಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ನಿವೃತ್ತಿ ಇತರ ಕಾರಣಗಳಿಂದ ತೆರವಾಗುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಹುದ್ದೆಗಳನ್ನು ತಕ್ಷಣವೇ ಭರ್ತಿಮಾಡಲು ಕ್ರಮ ವಹಿಸಬೇಕು. ವಯೋನಿವೃತ್ತಿ ಹೊಂದುವ ಅಂಗನವಾಡಿ ಕಾರ್ಯಕರ್ತೆಯರನ್ನು ಗುರುತಿಸಿ ಮೂರು ತಿಂಗಳ ಪೂರ್ವದಲ್ಲೇ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಈ ಕಾರ್ಯಕರ್ತೆಯರು ನಿವೃತ್ತಿಯಾಗುವ ದಿನದಂದೆ ನೇಮಕಾತಿ ಹೊಂದಿದವರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದರು.

ಅಮೃತ ಸ್ವಸಹಾಯ ಕಿರು ಉದ್ಯಮ ಯೋಜನೆಯಡಿ ಆಯ್ಕೆಯಾದ ಸ್ವ ಸಹಾಯ ಗುಂಪುಗಳಿಗೆ ಆಗಸ್ಟ್‌ 15ರೊಳಗೆ ಅನುದಾನ ಬಿಡುಗಡೆಗೊಳಿಸಬೇಕು. ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ, ಕಿರು ಸಾಲ ಸೇರಿದಂತೆ ವಿವಿಧ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿನಿಂದ ತ್ವರಿತವಾಗಿ ಸಾಲ ನೀಡಲು ಸೂಚನೆ ನೀಡಿದರು.

Haveri: ಜೀವದ ಹಂಗು ತೊರೆದು ಬಸ್ ಪ್ರಯಾಣ: ಸಾರಿಗೆ ಇಲಾಖೆ‌ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ

ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆಯಲ್ಲಿ ವಿಳಂಬ ಕುರಿತಂತೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ 1195 ಹೆಣ್ಣು ಮಕ್ಕಳಿಗೆ ಪಾಸ್‌ ಪುಸ್ತಕ ವಿತರಣೆ ಬಾಕಿ ಉಳಿದಿದೆ. ಯಾವ ದಾಖಲೆಯ ಕೊರತೆಯಿಂದ ಬಾಕಿ ಉಳಿದಿವೆ ಎಂಬುದನ್ನು ಗುರುತಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ವಿಶೇಷ ಅಭಿಯಾನ:

ಅಂಗವಿಕಲರಿಗೆ ವಿಶೇಷ ವಿಶಿಷ್ಟಗುರುತಿನ ಚೀಟಿ ನೀಡುವ ಯೋಜನೆಯಡಿ ಮೆಡಿಕಲ್‌ ಬೋರ್ಡ್‌ನಲ್ಲಿ 11,452 ಅರ್ಜಿಗಳು ಬಾಕಿ ಉಳಿದಿವೆ. ವಿಶೇಷ ಅಭಿಯಾನ ಹಮ್ಮಿಕೊಂಡು ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಹೊಂದಿದ ಅಭ್ಯರ್ಥಿಗಳಿಗೆ ಯುಡಿಐಡಿ ಕಾರ್ಡ್‌ಗಳನ್ನು ವಿತರಿಸುವಂತೆ ತಾಕೀತು ಮಾಡಿದರು.

ಪಿ.ಎಂ. ಕೇರ್‌ ಫಾರ್‌ ಚಿಲ​ರ್‍ಸ್ ಯೋಜನೆಯಡಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಜಿಲ್ಲೆಯ ನಾಲ್ಕು ಮಕ್ಕಳಿಗೆ ಕಿಟ್‌ ವಿತರಿಸಲಾಯಿತು. ಸಭೆಯಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖಾ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ. ರೇಜು ಟಿ.ಎಂ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಉಪಸ್ಥಿತರಿದ್ದರು.