ಬೆಂಗಳೂರು(ಫೆ.12): ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ರಸ್ತೆ ಬದಿ ವಾಹನ ನಿಲುಗಡೆ ಮಾಡುವವರಿಗೆ ದುಬಾರಿ ಪಾರ್ಕಿಂಗ್‌ ಶುಲ್ಕ, ಮನೆ ಎದುರಿನ (ವಸತಿ ಪ್ರದೇಶ) ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಬೇಕಾದರೂ ಕಡ್ಡಾಯ ಪರವಾನಗಿ ಹಾಗೂ ಹೊಸ ವಾಹನ ಖರೀದಿಗೆ ಪಾರ್ಕಿಂಗ್‌ ಸ್ಥಳಾವಕಾಶದ ದೃಢೀಕರಣ ಪತ್ರ ನೀಡುವುದು ಕಡ್ಡಾಯ ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಒಳಗೊಂಡ ‘ಪಾರ್ಕಿಂಗ್‌ ನೀತಿ 2.0’ಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಅಲ್ಲದೆ, ನೂತನ ಪಾರ್ಕಿಂಗ್‌ ನೀತಿ ಅನುಷ್ಠಾನದ ಜವಾಬ್ದಾರಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಹಾಗೂ ಬಿಬಿಎಂಪಿಗೆ ವಹಿಸಲಾಗಿದೆ. ಎಂಟೂ ವಲಯಗಳಿಗೂ ಪ್ರತ್ಯೇಕ ಪಾರ್ಕಿಂಗ್‌ ದರ ಸೇರಿದಂತೆ ಪ್ರತ್ಯೇಕ ಅನುಷ್ಠಾನ ಯೋಜನೆಯನ್ನು ಬಿಬಿಎಂಪಿ ಹಾಗೂ ಡಲ್ಟ್‌ ಅಧಿಕಾರಿಗಳು ರೂಪಿಸುತ್ತಿದ್ದಾರೆ.

ನೂತನ ಪಾರ್ಕಿಂಗ್‌ ನೀತಿಯಿಂದ ಈವರೆಗೆ ಬಿಬಿಎಂಪಿ ವ್ಯಾಪ್ತಿಯ ನಿರ್ದಿಷ್ಟರಸ್ತೆಗಳಲ್ಲಿ ಉಚಿತ ವಾಹನ ನಿಲುಗಡೆಗೆ ಇದ್ದ ಅವಕಾಶ ರದ್ದಾಗಲಿದೆ. ಪಾರ್ಕಿಂಗ್‌ ಅವಕಾಶ ನೀಡಿರುವ ಯಾವುದೇ ರಸ್ತೆಯಲ್ಲಿ ಕಡ್ಡಾಯವಾಗಿ ಶುಲ್ಕ ಪಾವತಿ ಮಾಡಿಯೇ ವಾಹನ ನಿಲುಗಡೆ ಮಾಡಬೇಕು. ಅಲ್ಲದೆ, ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ), ವಾಣಿಜ್ಯ ಪ್ರದೇಶ ಹಾಗೂ ವಸತಿ ಪ್ರದೇಶಗಳಲ್ಲಿನ ರಸ್ತೆಗಳ ಪಾರ್ಕಿಂಗ್‌ ದರದಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳಲಾಗಿದೆ. ಇನ್ನು ಪಾರ್ಕಿಂಗ್‌ಗೆ ಅವಕಾಶ ಇಲ್ಲದ ಕಡೆಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ. ಹೀಗಾಗಿ ಉಚಿತವಾಗಿ ವಾಹನಗಳ ಪಾರ್ಕಿಂಗ್‌ ಮಾಡುತ್ತಿದ್ದ ಸಾರ್ವಜನಿಕರು ಇನ್ನು ಮುಂದೆ ದುಬಾರಿ ದರ ತೆತ್ತಬೇಕಾಗಿದೆ.

ವಾಹನ ತಗೋಬೇಕೇ? ಪಾರ್ಕಿಂಗ್‌ ಕಡ್ಡಾಯ..!

ಪ್ರಸ್ತುತ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಗಂಟೆಗೆ 30 ರು. ದರ ನಿಗದಿ ಪಡಿಸಲಾಗಿದೆ. ನಿಲುಗಡೆ ಅವಧಿ ಹೆಚ್ಚಾದಂತೆ ಶುಲ್ಕ ಪ್ರಮಾಣ ಹೆಚ್ಚಾಗಲಿದ್ದು, ಎಂಟು ತಾಸಿಗೆ 750 ರು. ಶುಲ್ಕ ಪಾವತಿಸಬೇಕಾಗಲಿದೆ. ಇನ್ನು ನಾಲ್ಕು ಚಕ್ರ ವಾಹನ (ಕಾರು) ಒಂದು ಗಂಟೆಗೆ 60 ರು. ಎಂಟು ತಾಸಿಗೆ 1,500 ರು. ಶುಲ್ಕ ನಿಗದಿಪಡಿಸಲಾಗಿದೆ. ವಲಯವಾರು ಈ ಪಾರ್ಕಿಂಗ್‌ ಶುಲ್ಕದಲ್ಲಿ ಸ್ವಲ್ಪ ದರ ವ್ಯತ್ಯಾಸ ಉಂಟಾದರೂ, ಸರಾಸರಿ ಇದೇ ದರಗಳು ಅನ್ವಯವಾಗಲಿವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಸತಿ ಪ್ರದೇಶದ ಪಾರ್ಕಿಂಗ್‌ಗೂ ಪರವಾನಗಿ!

ಮನೆಯ ಆವರಣದಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲದ ವಾಹನ ಮಾಲೀಕರು ವಸತಿ ಪ್ರದೇಶದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಪರವಾನಗಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಪರವಾನಗಿ ವಿತರಣೆ ಕುರಿತು ಇನ್ನಷ್ಟೇ ನಿಯಮಾವಳಿ ರೂಪಿಸಬೇಕಾಗಿದ್ದು, ವಸತಿ ಪ್ರದೇಶದ ವಾಹನ ನಿಲುಗಡೆ ಪರವಾನಗಿ ಮನೆ ಎದುರಿನ ರಸ್ತೆಗೆ ಮಾತ್ರವೇ ಅನ್ವಯವಾಗುತ್ತದೆಯೇ ಅಥವಾ ಪಕ್ಕದ ರಸ್ತೆಗಳು, ಬೇರೆ ವಸತಿ ಪ್ರದೇಶಗಳಲ್ಲಿನ ಪಾರ್ಕಿಂಗ್‌ಗೂ ಅನ್ವಯವಾಗುತ್ತದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಪಾರ್ಕಿಂಗ್‌ ಸ್ಥಳ ತೋರಿಸಿ ಹೊಸ ವಾಹನ ಖರೀದಿಸಿ:

ಇನ್ನು ವಾಹನ ಪಾರ್ಕಿಂಗ್‌ ಸ್ಥಳಾವಕಾಶವಿಲ್ಲದೆ ಮನೆಗೆ 3-4 ವಾಹನಗಳನ್ನು ಖರೀದಿಸುವವರಿಗೆ ಬ್ರೇಕ್‌ ಹಾಕಲು ಇನ್ನು ಮುಂದೆ ಹೊಸ ವಾಹನ ಖರೀದಿಸಲು ಪಾರ್ಕಿಂಗ್‌ ಸ್ಥಳಾವಕಾಶದ ಬಗ್ಗೆ ದೃಢೀಕರಣ ಪತ್ರ ನೀಡಬೇಕು ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ. ದೃಢೀಕರಣ ಪತ್ರ ಯಾರಿಂದ ಪಡೆಯಬೇಕು ಎಂಬಿತ್ಯಾದಿ ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಾಗಿದೆ. ರಾತ್ರಿ ವೇಳೆ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಲು ಈ ನಿಯಮ ರೂಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?

ಇನ್ನು ಮೆಟ್ರೋ, ಬಸ್ಸು ನಿಲ್ದಾಣ, ಪಾರ್ಕಿಂಗ್‌ ಕಾಂಪ್ಲೆಕ್ಸ್‌ಗಳ ಸುತ್ತಲೂ ರಸ್ತೆ ಬದಿ ಪಾರ್ಕಿಂಗ್‌ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹೀಗಾಗಿ ಮೆಟ್ರೋ, ಬಸ್ಸು ನಿಲ್ದಾಣ ಹಾಗೂ ಪಾರ್ಕಿಂಗ್‌ ಕಾಂಪ್ಲೆಕ್ಸ್‌ನಲ್ಲಿ ಪಾರ್ಕಿಂಗ್‌ಗಾಗಿ ಮೀಸಲಿಟ್ಟಪ್ರದೇಶದಲ್ಲೇ ವಾಹನಗಳ ನಿಲುಗಡೆ ಮಾಡಬೇಕು ಎಂದು ಹೇಳಿದೆ.

ಪ್ರದೇಶವಾರು ಶುಲ್ಕ ವ್ಯತ್ಯಾಸ:

ಈ ಬಗ್ಗೆ ‘ಕನ್ನಡಪ್ರಭಕ್ಕೆ’ ಮಾಹಿತಿ ನೀಡಿರುವ ಡಲ್ಟ್‌ ಆಯುಕ್ತೆ ಮಂಜುಳಾ, ಹೊಸ ಪಾರ್ಕಿಂಗ್‌ ನೀತಿ ಪ್ರಕಾರ, ವಾಣಿಜ್ಯ ಪ್ರದೇಶ, ವಸತಿ ಪ್ರದೇಶ, ನಗರ ಕೇಂದ್ರ ವಾಣಿಜ್ಯ ಪ್ರದೇಶ ಹಾಗೂ ಹೊರ ವಲಯಗಳಲ್ಲಿ ಪ್ರದೇಶವಾರು ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗುತ್ತದೆ. ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ರಚನೆ ಮಾಡಿದ ಸಮಿತಿಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಚರ್ಚೆ ಪೂರ್ಣಗೊಂಡಿದೆ. ಶೀಘ್ರದಲ್ಲಿ ವಲಯವಾರು ಪಾರ್ಕಿಂಗ್‌ ಯೋಜನೆ ಸಿದ್ಧಪಡಿಸುವ ಕಾರ್ಯ ಆರಂಭಗೊಳ್ಳಲಿದೆ.

ಈಗಾಗಲೇ ನಗರದ 80ಕ್ಕೂ ಹೆಚ್ಚು ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ದಿನದಲ್ಲಿ ಮತ್ತಷ್ಟುರಸ್ತೆ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ನೀತಿ ಅನುಷ್ಠಾನ ಮಾಡಲಾಗುವುದು. ಇಡೀ ನಗರದಲ್ಲಿ ಏಕ ಕಾಲಕ್ಕೆ ನೀತಿ ಅನುಷ್ಠಾನ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೊದಲು ವಾಣಿಜ್ಯ ಪ್ರದೇಶದಲ್ಲಿ ಜಾರಿ

ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶ ಎರಡೂ ಕಡೆ ಪಾರ್ಕಿಂಗ್‌ ನೀತಿ ಅನುಷ್ಠಾನಗೊಳಿಸಬೇಕಾಗಿದೆ. ಆದರೆ, ಮೊದಲ ಹಂತದಲ್ಲಿ ನಗರದ ವಾಣಿಜ್ಯ ಪ್ರದೇಶಗಳಾದ ಮಾರುಕಟ್ಟೆ, ಮುಖ್ಯ ರಸ್ತೆಗಳು ಹಾಗೂ ಜನದಟ್ಟಣೆ ಇರುವ ಸ್ಥಳ, ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುವುದು. ನಂತರ ವಸತಿ ಪ್ರದೇಶ ಸೇರಿದಂತೆ ಇನ್ನಿತರ ಕಡೆ ಜಾರಿಗೊಳಿಸಲಾಗುವುದು. ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಮಂಜುಳಾ ತಿಳಿಸಿದರು.

ವಲಯವಾರು ಪಾರ್ಕಿಂಗ್‌ ಸ್ಥಳ

ಹೊಸ ನೀತಿ ಪ್ರಕಾರ ಬಿಬಿಎಂಪಿಯ ವಲಯವಾರು ಪಾರ್ಕಿಂಗ್‌ ಸ್ಥಳಗಳು ಬೇಕು. ಅದರಂತೆ ಯಲಹಂಕ ವಲಯದಲ್ಲಿ 20, ಮಹದೇವಪುರ 34, ಆರ್‌.ಆರ್‌.ನಗರ 22, ದಾಸರಹಳ್ಳಿ 6, ಪೂರ್ವ 18, ಪಶ್ಚಿಮ 10, ದಕ್ಷಿಣ 12 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 19 ಪಾರ್ಕಿಂಗ್‌ ಸ್ಥಳಗಳನ್ನು ನಿರ್ಮಿಸಬೇಕಾಗಲಿದೆ.