Asianet Suvarna News Asianet Suvarna News

ವಾಹನ ತಗೋಬೇಕೇ? ಪಾರ್ಕಿಂಗ್‌ ಕಡ್ಡಾಯ..!

ವಸತಿ ಪ್ರದೇಶದಲ್ಲೂ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಬೇಕೆಂದರೆ ಅನುಮತಿ ಬೇಕು| ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಪಾರ್ಕಿಂಗ್‌ ನಿರ್ಬಂಧ| ಪಾರ್ಕಿಂಗ್‌ ನೀತಿ 2.0’ ಜಾರಿಗೆ ಮುಂದಾದ ಸರ್ಕಾರ| ನೀತಿ ಪರಾಮರ್ಶಿಸಿ ಸಂಪುಟದ ಮುಂದೆ ಇಡಲು ಸಿಎಂ ಯಡಿಯೂರಪ್ಪ ಸೂಚನೆ| 
 

Authentication about Owning  Vehicle is Mandatory in Bengaluru grg
Author
Bengaluru, First Published Dec 2, 2020, 7:28 AM IST

ಬೆಂಗಳೂರು(ಡಿ. 02): ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ವಾಹನ ಖರೀದಿಗೆ ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಕಡ್ಡಾಯ, ವಸತಿ ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರವಾನಿಗೆ ವ್ಯವಸ್ಥೆ, ಸಂಚಾರ ಆಧಾರಿತ ಅಭಿವೃದ್ಧಿ ಪ್ರದೇಶದಲ್ಲಿ ಪಾರ್ಕಿಂಗ್‌ ಮಾನದಂಡ ಸಡಿಲೀಕರಣ, ಸಾರಿಗೆ ಕೇಂದ್ರ ಮತ್ತು ಬಹು ಮಹಡಿ ಪಾರ್ಕಿಂಗ್‌ ವ್ಯವಸ್ಥೆ ಇರುವ, ಹೆಚ್ಚಿನ ವಾಹನ ದಟ್ಟಣೆ ಹಾಗೂ ನಗರ ಸಾರಿಗೆ ಸಂಚಾರಿ ರಸ್ತೆಗಳಲ್ಲಿ ಪಾರ್ಕಿಂಗ್‌ ನಿರ್ಬಂಧ ವಿಧಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ನೂತನ ‘ಪಾರ್ಕಿಂಗ್‌ ನೀತಿ 2.0’ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ನೀತಿ ಜಾರಿ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ನೀತಿ ಕುರಿತು ಅಧಿಕಾರಿಗಳು ವಿವರಿಸಿದರು. ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ನೀತಿ ಪರಾಮರ್ಶಿಸಿ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ಸೂಚಿಸಿದರು.

ಬೆಂಗಳೂರು ನಗರದಲ್ಲಿ ಸದ್ಯ 84.6 ಲಕ್ಷ ವಾಹನಗಳಿವೆ. ಪ್ರತಿವರ್ಷ ಸರಾಸರಿ 750ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಅಡ್ಡಾದಿಡ್ಡಿ ರಸ್ತೆ ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ನಿಯಂತ್ರಿತ, ತಂತ್ರಜ್ಞಾನ ಆಧಾರಿತ ಪಾರ್ಕಿಂಗ್‌ ವ್ಯವಸ್ಥೆ ರೂಪಿಸಲು ಪಾರ್ಕಿಂಗ್‌ ನೀತಿ 2.0 ರೂಪಿಸಲಾಗಿದೆ.

ಬೆಂಗಳೂರಿನ 10 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್

ನಗರಾಭಿವೃದ್ಧಿ ಸಚಿವ ಬಸವರಾಜ್‌, ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸಂಚಾರಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪಾರ್ಕಿಂಗ್‌ ನೀತಿ 2.0 ಅಂಶಗಳು

* ಹೆಚ್ಚಿನ ದಟ್ಟಣೆ, ಬಸ್‌ ಸಂಚಾರ ಇರುವ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ
* ಉಚಿತ ಬದಲು ಶುಲ್ಕ ಆಧಾರಿತ ಪಾರ್ಕಿಂಗ್‌ ವ್ಯವಸ್ಥೆ ಜಾರಿ
* ಬಸ್‌, ಮೆಟ್ರೋ ನಿಲ್ದಾಣ, ಬಹು ಮಹಡಿ ಪಾರ್ಕಿಂಗ್‌ ಸುತ್ತಲೂ ಪಾರ್ಕಿಂಗ್‌ ನಿಷೇಧ
* ವಸತಿ ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರವಾನಗಿ ಕಡ್ಡಾಯ
* ಹೊಸ ವಾಹನ ಖರೀದಿಗೆ ಪಾರ್ಕಿಂಗ್‌ ಸ್ಥಳಾವಕಾಶ ಪ್ರಮಾಣಪತ್ರ
* ಸಂಚಾರ ಆಧಾರಿತ ಅಭಿವೃದ್ಧಿ ಪ್ರದೇಶದಲ್ಲಿ ಪಾರ್ಕಿಂಗ್‌ ಮಾನದಂಡ ಸಡಿಲೀಕರಣ
* ಕೈಗಾರಿಕೆ ವಲಯ, ಐಟಿ ಪಾರ್ಕ್ಗಳಲ್ಲಿ ಬಸ್‌-ಬೇ ಕಡ್ಡಾಯ
* ಸಾರ್ವಜನಿಕ ಸಹಭಾಗಿತ್ವದಲ್ಲಿ ಬಹು ಮಹಡಿ ಪಾರ್ಕಿಂಗ್‌ ವ್ಯವಸ್ಥೆ
* ಖಾಸಗಿ ನಿವೇಶನ ಪಡೆದು ಪಾರ್ಕಿಂಗ್‌ ವ್ಯವಸ್ಥೆ
* ಮಾರ್ಗಸೂಚಿ ದರ ಆಧಾರಿಸಿ ಪಾರ್ಕಿಂಗ್‌ ಶುಲ್ಕ ನಿಗದಿ

300 ಕೋಟಿ ರು. ಆದಾಯ

ನಗರದಲ್ಲಿ ಪಾರ್ಕಿಂಗ್‌ ಶುಲ್ಕ ನಿಗದಿಯಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 300 ಕೋಟಿ ರು. ಆದಾಯ ಬರಲಿದೆ. ಇದರಿಂದ ವ್ಯವಸ್ಥಿತ ಪಾರ್ಕಿಂಗ್‌ ಸೌಲಭ್ಯ ಒದಗಿಸಬಹುದು. ನಗರದಲ್ಲಿರುವ ವಾಹನಗಳ ಪೈಕಿ 42.3 ಲಕ್ಷ ವಾಹನಗಳಿಗೆ ಸಾರ್ವಜನಿಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲು 13,000 ಎಕರೆ ಪ್ರದೇಶ ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನ 7 ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್‌ ಪಾರ್ಕಿಂಗ್‌: ಮೇಯರ್‌ ಗೌತಮ್‌ ಕುಮಾರ್‌

ಹೊಸ ನೀತಿ ಪ್ರಕಾರ ನಗರದ ಪ್ರತಿ 4 ಚದರ ಕಿ.ಮೀ ಒಂದರಂತೆ ಪಾರ್ಕಿಂಗ್‌ ತಾಣಬೇಕು. ಅದರಂತೆ ಯಲಹಂಕ ವಲಯದಲ್ಲಿ 20, ಮಹದೇವಪುರದಲ್ಲಿ 34, ಆರ್‌.ಆರ್‌.ನಗರದಲ್ಲಿ 22, ದಾಸರಹಳ್ಳಿಯಲ್ಲಿ 6, ಪೂರ್ವ-18, ಪಶ್ಚಿಮ-10, ದಕ್ಷಿಣ-12 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 19 ತಾಣಬೇಕಿದೆ.

ನಗರದೆಲ್ಲೆಡೆ ಸ್ಮಾರ್ಟ್‌ ಪಾರ್ಕಿಂಗ್‌

ನಗರದಲ್ಲಿ ನೂತನ ಪಾರ್ಕಿಂಗ್‌ ನೀತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ನಗರದಲ್ಲಿ ಪ್ರಸ್ತುತ 80-85 ಸ್ಥಳಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ನಗರದ ಎಲ್ಲ ಕಡೆ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸುವ ಅನಿವಾರ್ಯತೆ ಇದೆ. ಹಣ ಪಾವತಿಸಿ ವಾಹನ ನಿಲ್ಲಿಸುವ ವ್ಯವಸ್ಥೆ ಉತ್ತೇಜಿಸುವುದು. ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಡಿ.5ರಂದು ಅಧಿಕಾರಿಗಳ ಸಭೆ

ಬೆಂಗಳೂರು ನಗರದ ಪಾರ್ಕಿಂಗ್‌ ನೀತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚನೆ ಮಾಡಲಾದ ಸಮಿತಿಯ ಮೊದಲ ಸಭೆಯನ್ನು ಡಿ.5 ರ ಶನಿವಾರ ಸಂಜೆ 4.30ಕ್ಕೆ ನಡೆಯಲಿದೆ

ಗಂಟೆಯಿಂದ ಗಂಟೆಗೆ ಪಾರ್ಕಿಂಗ್‌ ಶುಲ್ಕ ಹೆಚ್ಚಳ

ಸದ್ಯಕ್ಕೆ ರಸ್ತೆಬದಿ, ಪಾರ್ಕಿಂಗ್‌ ಸ್ಥಳಗಳಲ್ಲಿ ದ್ವಿಚಕ್ರ (ಬೈಕ್‌) ವಾಹನ ನಿಲುಗಡೆಗೆ ಒಂದು ಗಂಟೆಗೆ 30 ರು. ಶುಲ್ಕ ನಿಗದಿ ಮಾಡಲಾಗಿದೆ. ಹೊಸ ನೀತಿ ಜಾರಿ ಬಳಿಕ ಈ ಮೊತ್ತ ಗಂಟೆಯಿಂದ ಗಂಟೆಗೆ ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಳ ವಾಗುತ್ತಾ ಸಾಗುತ್ತದೆ. ಇದರನ್ವಯ 8 ತಾಸಿಗೆ 750 ರು. ಶುಲ್ಕ ಪಾವತಿಸಬೇಕಾಗಲಿದೆ. ಇನ್ನು ನಾಲ್ಕು ಚಕ್ರ ವಾಹನ (ಕಾರು) ಒಂದು ಗಂಟೆಗೆ 60 ರು. ನಿಗದಿ ಮಾಡಲಾಗಿದ್ದು, ಎಂಟು ತಾಸಿಗೆ 1,500 ರು. ಶುಲ್ಕ ಪಾವತಿಸಬೇಕಾಗುತ್ತದೆ.
 

Follow Us:
Download App:
  • android
  • ios