ಕಾವೇರಿ ನದಿ ವ್ಯಾಪ್ತಿಯ ಬಲಮುರಿ- ಎಡಮುರಿ, ಕಾರೇಕುರ ಪ್ರವಾಸಿ ತಾಣಗಳಲ್ಲಿ ತಾಲೂಕು ಆಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ನಡುವೆಯೂ ನಿತ್ಯ ಸಾವಿರಾರು ಪ್ರವಾಸಿಗರು ನದಿಯಲ್ಲಿ ಮಿಂದೇಳುತ್ತಿದ್ದಾರೆ.

ಶ್ರೀರಂಗಪಟ್ಟಣ (ಮೇ.03): ಕಾವೇರಿ ನದಿ ವ್ಯಾಪ್ತಿಯ ಬಲಮುರಿ- ಎಡಮುರಿ, ಕಾರೇಕುರ ಪ್ರವಾಸಿ ತಾಣಗಳಲ್ಲಿ ತಾಲೂಕು ಆಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ನಡುವೆಯೂ ನಿತ್ಯ ಸಾವಿರಾರು ಪ್ರವಾಸಿಗರು ನದಿಯಲ್ಲಿ ಮಿಂದೇಳುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಕೆಆರ್‌ಎಸ್ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ಕಳೆದ 12 ವರ್ಷಗಳಲ್ಲಿ ಕಾವೇರಿ ನದಿಯಲ್ಲಿ ಮುಳುಗಿ 79 ಮಂದಿ ಸಾವನ್ನಪ್ಪಿರುವ ದುರ್ಘಟನೆಗಳು ನಡೆದಿದ್ದರೂ ಪ್ರವಾಸಿಗರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ತಮ್ಮ ಮೋಜು- ಮಸ್ತಿ ಹಾಗೂ ಕ್ಷಣಿಕ ಮನರಂಜನೆಗಾಗಿ ತಮ್ಮ ಜೀವವನ್ನು ಪಣಕ್ಕಿಟ್ಟು, ಅಪಾಯದ ಕಾವೇರಿ ನದಿಯಲ್ಲಿ ನಿತ್ಯ ಸಾವಿರಾರು ಮಂದಿ ಬೆಳಗ್ಗಿನಿಂದ ಸಂಜೆವರೆಗೂ ಕಾಲ ಕಳೆಯುತ್ತಿದ್ದಾರೆ.

Add Asianetnews Kannada as a Preferred SourcegooglePreferred

ತಾಲೂಕಿನ ಬಲಮುರಿ- ಎಡಮುರಿ ಹಾಗೂ ಕಾರೇಕುರ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ಮುಳುಗಿ ಹಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಏ.16ರಂದು ತಾಲೂಕು ದಂಡಾಧಿಕಾರಿ ಚೇತನಾ ಯಾದವ್ ರವರು ಪ್ರವಾಸಿತಾಣಗಳು ಸೇರಿದಂತೆ ಕಾವೇರಿ ನದಿ ಪ್ರದೇಶಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ, ನದಿಗಿಳಿಯುವ ಪ್ರವಾಸಿಗರು ಹಾಗೂ ಸಾರ್ವಜನಿಕರು ತಡೆದು ಹಿಂದಿರುಗಿ ಕಳುಹಿಸಬೇಕಾದ ಕೆಆರ್‌ಎಸ್ ಪೊಲೀಸರು ಮೌನ ವಹಿಸಿದ್ದಾರೆ. ಆದೇಶ ಜಾರಿ ಮಾಡಿದ ಮೂರ್‍ನಾಲ್ಕು ದಿನ ಮಾತ್ರ ಭಾರೀ ಕಟ್ಟೆಚ್ಚರ ವಹಿಸಿದ್ದ ಕೆಆರ್‌ಎಸ್ ಪೊಲೀಸರು, ಇದೀಗ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದಾರೆ.

ಬಲಮುರಿ ಹಾಗೂ ಎಡಮುರಿ ಕಾವೇರಿ ನದಿ ಬಳಿ ತೆರೆದಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಹಾಗೂ ಇಲ್ಲಿಗೆ ಬರುವ ವಾಹನಗಳ ಪ್ರವೇಶಾತಿ ಶುಲ್ಕ ಪಡೆಯುತ್ತಿರುವ ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಪೊಲೀಸರು ಯಾವುದೇ ಕ್ರಮವಹಿಸದೆ ಮೌನ ವಹಿಸಿರುವುದಾಗಿ ಸ್ಥಳೀಯರಿಂದ ಆರೋಪಗಳು ಕೇಳಿ ಬರುತ್ತಿವೆ. ಕಟ್ಟುನಿಟ್ಟಿನ ಆದೇಶವಿದ್ದರೂ ಸಹ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಅಲ್ಲದೆ ಸರ್ಕಾರಿ ರಜೆ ಹಾಗೂ ವಾರದ ಕೊನೆ ದಿನಗಳಂತೂ ಕಾಲಿಡಲು ಸ್ಥಳವಿಲ್ಲದಷ್ಟು ಮಂದಿ ನದಿಗಿಳಿದು ಆಳ, ಸುಳಿ ಹಾಗೂ ನೆಲದಲ್ಲಿರುವ ಬಂಡೆಗಳ ಅರಿವಿಲ್ಲದೆ ನೀರಿನಲ್ಲಿ ಆಟವಾಡುತ್ತಿದ್ದಾರೆ.

ಹಲವರು ಅಪಾಯದ ಅರಿವಿಲ್ಲದೆ ಜಾರು ಬಂಡೆಗಳ ಮೇಲೆ ನಿಂತು ನೀರಿಗೆ ಜಿಗಿಯುತ್ತಿದ್ದಾರೆ. ನೀರಿನ ಅಪಾಯದ ಕುರಿತು ಸ್ಥಳೀಯರು ಮಾಹಿತಿ ನೀಡಿದರೂ ಪ್ರವಾಸಿಗರು ಕ್ಯಾರೆ ಎನ್ನುತ್ತಿಲ್ಲ. ಮತ್ತಷ್ಟು ಸಾವು, ನೋವು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಇತ್ತ ಗಮನ ಹರಿಸುವಂತೆ ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಾರ್ ಆಗಿ ಬದಲಾದ ತೆಂಗಿನ ತೋಟ

ಎಡಮುರಿ ಬಳಿಯ ಕಾವೇರಿ ನದಿಯಲ್ಲಿ ಮೋಜು- ಮಸ್ತಿಗಾಗಿ ಬರುವ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ತೆಂಗಿನ ತೋಟವನ್ನೇ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಿ ಬದಲಾಯಿಸಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಎಡಮುರಿ ಜಲಾಶಯದ ಮುಂಭಾಗದಲ್ಲಿ ತೆಂಗಿನ ತೋಟದಲ್ಲಿ ಪ್ಲಾಸ್ಟಿಕ್ ಛೇರ್ ಹಾಗೂ ಟೇಬಲ್‌ಗಳನ್ನು ಹಾಕಿ, ಪ್ರವಾಸಿಗರು ಕುರ್ಚಿಯಲ್ಲಿ ಕುಳಿತು ಮದ್ಯ ಸಮೇತ ಆಹಾರ ಸೇವನೆ ಮಾಡುತ್ತಿದ್ದಾರೆ. ವಾಹನ ಪಾರ್ಕಿಂಗ್ ಜಾಗವನ್ನು ಪರದೆಯಿಂದ ಮರೆ ಮಾಡಿ, ಅಕ್ರವಾಗಿ ಮದ್ಯ ಸೇವನೆಗೆ ಅವಕಾಶ ಕೊಟ್ಟವರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.