ಶನಿವಾರ ರಾತ್ರಿ ಸುರಿದ ಧಾರಾಕಾರ ಕೃತ್ತಿಕಾ ಮಳೆಗೆ ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಈ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಸಜ್ಜೆ ಮತ್ತು ಜೋಳ ಬಿತ್ತನೆಗೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಜಲಾಶಯದ ಗೇಟ್ ಬಳಿ ಉಳಿದಿರುವ ಮಣ್ಣು ಆತಂಕಕ್ಕೆ ಕಾರಣವಾಗಿದೆ.
ವಿಜಯನಗರ: ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದ ಸಿಡಿಲಬ್ಬರದ ಕೃತ್ತಿಕಾ ಮಳೆಗೆ ತಾಲೂಕಿನ ಹಗರಿಬೊಮ್ಮನಹಳ್ಳಿ ಜಲಾಶಯ ಜೀವಕಳೆ ಪಡೆದಿದೆ. ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವರ್ಷದ ಮೊದಲ ಮಳೆಗೆ ತಾಲೂಕಿನ ಬಹುತೇಕ ಹಳ್ಳ- ಕೊಳ್ಳಗಳು ತುಂಬಿ ಹರಿದಿವೆ. ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ರೆಕ್ಕೆಪುಕ್ಕ ಮೂಡಿವೆ. ಬಿಸಿಲಿನ ಬೇಗೆಗೆ ದಣಿದಿದ್ದ ಜನತೆಗೆ ತಂಪಿನ ಸಿಂಚನವಾಗಿದೆ.

ಇಟಗಿಯ ಕುಪ್ಪಿ ಹಳ್ಳ ಮತ್ತು ಮಾಲವಿ ಗ್ರಾಮದ ಬಳಿ ಇರುವ ರಾಮನಹಳ್ಳ ತುಂಬಿ ಹರಿದ ಪರಿಣಾಮವಾಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದೆ. ಸೋಮವಾರದಿಂದ ಪ್ರಾರಂಭವಾಗುವ ರೋಹಿಣಿ ಮಳೆ ಹೀಗೆಯೇ ಸುರಿದರೆ ಜಲಾಶಯ ಯಾವುದೇ ಕ್ಷಣದಲ್ಲಾದರೂ ಭರ್ತಿಯಾಗುತ್ತದೆ ಎಂದು ಅಚ್ಚುಕಟ್ಟು ಪ್ರದೇಶದ ರೈತರು ಅಭಿಪ್ರಾಯಪಡುತ್ತಾರೆ.
ಜಲಾಶಯದಲ್ಲಿ ಸಂಗ್ರಹವಾಗುತ್ತಿರುವ ನೀರು
ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ಯುವಕರು ಸೆಲ್ಫಿಯೊಂದಿಗೆ ಸಂಭ್ರಮಿಸುತ್ತಿದ್ದಾರೆ. ಮಳೆಯಿಂದಾಗಿ ಸಜ್ಜೆ ಮತ್ತು ಜೋಳದ ಬಿತ್ತನೆಗೆ ಸಜ್ಜಾಗಿರುವ ರೈತರು ಭೂಮಿಯನ್ನು ಹದ ಮಾಡಿಕೊಳ್ಳುತ್ತಿರುವುದು ತಾಲೂಕಿನಾದ್ಯಂತ ಸಾಮಾನ್ಯವಾಗಿದೆ.
ಜಲಾಶಯದ ನೂತನ ಕ್ರಸ್ಟಗೇಟ್ ಅಳವಡಿಕೆ ಕಾಮಗಾರಿ ಇತ್ತೀಚಿಗೆ ಮುಗಿದಿದ್ದು, ಆದರೆ, ಕಾಮಗಾರಿ ವೇಳೆಯಲ್ಲಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿಗೆ ಪೂರಕವಾಗಿ ಗೇಟ್ ಬಳಿ ಹಾಕಲಾಗಿದ್ದ ಗರಸು ಮಣ್ಣನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಜಲಾಶಯದಲ್ಲಿ ಎರಡು ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಉಲವತ್ತಿಯ ಪ್ರಗತಿಪರ ಕೃಷಿಕ ಕರಡಿ ರಾಮಣ್ಣ ಆತಂಕ ವ್ಯಕ್ತಪಡಿಸುತ್ತಾರೆ.
ಎಲ್ಲಿ, ಎಷ್ಟು ಮಳೆಯಾಗಿದೆ?
ಮಾಲವಿ ಮಳೆ ಮಾಪನ ಕೇಂದ್ರದಲ್ಲಿ ಗರಿಷ್ಠ 79.2ಮಿ.ಮೀ., ಹಗರಿಬೊಮ್ಮನಹಳ್ಳಿ ಕೇಂದ್ರದಲ್ಲಿ 76.6 ಮಿ.ಮೀ., ಹಂಪಸಾಗರ ಕೇಂದ್ರದಲ್ಲಿ 23.2 ಮಿ.ಮೀ., ತಂಬ್ರಹಳ್ಳಿ ಕೇಂದ್ರದಲ್ಲಿ ಕನಿಷ್ಠ 14.6 ಮಿ.ಮೀ. ಮಳೆ ದಾಖಲಾಗಿದೆ.
ಮಳೆಯಿಂದಾಗಿ ಚೀಲಗೋಡು ಗ್ರಾಮದಲ್ಲಿ ಉತ್ತಂಗಿ ಶಿವರಾಜ ಅವರಿಗೆ ಸೇರಿರುವ ಒಂದು ಆಕಳು ಸಿಡಿಲಿನಿಂದ ಮೃತ ಹೊಂದಿರುತ್ತದೆ ಮತ್ತು ಮಾಲವಿ ಗ್ರಾಮದಲ್ಲಿ ಕೆ. ಎಂ. ಈರಮ್ಮನವರಿಗೆ ಸೇರಿರುವ ಮನೆಗೆ ಭಾಗಶ ಹಾನಿಯಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.


