ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 'ಯಥಾಸ್ಥಿತಿ' ಕಾಯ್ದುಕೊಳ್ಳಲು ಆದೇಶಿಸಿದೆ. ಈ ಆದೇಶದಿಂದಾಗಿ, ಟಿ.ಡಿ. ರಾಜೇಗೌಡ ಅವರು ಶಾಸಕರಾಗಿ ಮುಂದುವರಿಯಲಿದ್ದು, ಇತ್ತೀಚೆಗೆ ಗೆದ್ದಿದ್ದ ಡಿ.ಎನ್. ಜೀವರಾಜ್ ಶಾಸಕ ಸ್ಥಾನಕ್ಕೆ ಹಿನ್ನಡೆಯಾಗಿದೆ.
ನವದೆಹಲಿ/ಚಿಕ್ಕಮಗಳೂರು (ಮೇ 11): ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಹತ್ವದ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ 'ಯಥಾಸ್ಥಿತಿ' (Status Quo) ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ಒಂದೇ ವಾರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವಂತಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಾದ-ಪ್ರತಿವಾದ
ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ರಾಜೇಗೌಡರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಪ್ರಬಲವಾದ ಮಂಡಿಸಿದರು. ಚುನಾವಣಾ ಆಯೋಗದ ನಡವಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮರುಎಣಿಕೆಯ ಸಂದರ್ಭದಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ವಾದಿಸಿದರು.
ಅರ್ಜಿಯಲ್ಲಿನ ಪ್ರಮುಖ ಆಂಶಗಳು:
ರಾಜೇಗೌಡ ಅವರು ತಮ್ಮ ಅರ್ಜಿಯಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ:
ಸೀಲ್ ಇಲ್ಲದ ಸ್ಟ್ರಾಂಗ್ ರೂಂ: ಸ್ಟ್ರಾಂಗ್ ರೂಂಗಳಿಗೆ ಸರಿಯಾದ ಸೀಲ್ ಇರಲಿಲ್ಲ ಮತ್ತು ಬ್ಯಾಲೆಟ್ ಟ್ರಂಕ್‌ಗಳು ಮೊದಲೇ ತೆರೆದಿದ್ದವು. ಇದರಿಂದ ಮತ ಚೋರಿ ಅಥವಾ ಅಕ್ರಮ ಎಸಗುವ ಸಾಧ್ಯತೆ ಇತ್ತು.
ಅಸಿಂಧು ಮತಗಳ ಪ್ರಶ್ನೆ: 2023ರ ಚುನಾವಣಾ ಎಣಿಕೆಯ ಸಮಯದಲ್ಲಿ 'ಸಿಂಧು' (Valid) ಎಂದು ಪರಿಗಣಿಸಲ್ಪಟ್ಟ ಮತಗಳು, 2026ರ ಮರುಎಣಿಕೆಯಲ್ಲಿ ಹೇಗೆ 'ಅಸಿಂಧು' (Invalid) ಆದವು?
ತರಾತುರಿಯ ಫಲಿತಾಂಶ: ಚುನಾವಣಾ ಆಯೋಗವು ಟ್ರಂಕ್‌ಗಳು ಓಪನ್ ಆಗಿದ್ದ ವಿಷಯವನ್ನು ಹೈಕೋರ್ಟ್ ಗಮನಕ್ಕೆ ತರಬೇಕಿತ್ತು. ಆದರೆ, ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗಿದೆ.
ಕಾಂಗ್ರೆಸ್‌ಗೆ ತಾತ್ಕಾಲಿಕ ಜಯ, ಬಿಜೆಪಿಗೆ ಹಿನ್ನಡೆ
ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವುದರಿಂದ, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ. ಇತ್ತೀಚೆಗಷ್ಟೇ ಅಂಚೆ ಮತಗಳ ಮರುಎಣಿಕೆಯಲ್ಲಿ ಜಯಗಳಿಸಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಡಿ.ಎನ್. ಜೀವರಾಜ್ ಅವರಿಗೆ ಇದು ಭಾರಿ ಹಿನ್ನಡೆಯಾಗಿದೆ.
ಕ್ಷೇತ್ರದಲ್ಲಿ ಮುಂದುವರಿದ ಹಗ್ಗಜಗ್ಗಾಟ
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೋಸ್ಟಲ್ ಬ್ಯಾಲೆಟ್ ವಿಚಾರವಾಗಿ ದೊಡ್ಡ ಮಟ್ಟದ ರಾಜಕೀಯ ಸಮರ ನಡೆಯುತ್ತಿದೆ. ಬಿಜೆಪಿ ಏಜೆಂಟ್‌ಗಳೇ ಮರುಎಣಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿರುವುದು ಒಂದೆಡೆಯಾದರೆ, ಈಗ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ರಾಜೇಗೌಡ ಬೆಂಬಲಿಗರಲ್ಲಿ ಹೊಸ ಉತ್ಸಾಹ ತುಂಬಿದೆ. ಮೇ 31ರಂದು ನಡೆಯಲಿರುವ ಮುಂದಿನ ವಿಚಾರಣೆಯು ಶೃಂಗೇರಿ ಕ್ಷೇತ್ರದ ಅಂತಿಮ ಶಾಸಕರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ.


