- Home
- Karnataka Districts
- ಬಾಗೇಪಲ್ಲಿ ಹೆದ್ದಾರಿಯಲ್ಲಿ ಥಾರ್, ಆಟೋ, ಕಂಟೇನರ್ ನಡುವೆ ಸರಣಿ ಅಫಘಾತ: ಐವರು ದುರ್ಮರಣ, ಮೂವರ ಸ್ಥಿತಿ ಗಂಭೀರ!
ಬಾಗೇಪಲ್ಲಿ ಹೆದ್ದಾರಿಯಲ್ಲಿ ಥಾರ್, ಆಟೋ, ಕಂಟೇನರ್ ನಡುವೆ ಸರಣಿ ಅಫಘಾತ: ಐವರು ದುರ್ಮರಣ, ಮೂವರ ಸ್ಥಿತಿ ಗಂಭೀರ!
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್, ಆಟೋ ಮತ್ತು ಕಂಟೈನರ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಟೋ ಕಂಟೈನರ್‌ಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಚಿಕ್ಕಬಳ್ಳಾಪುರ (ಮೇ 31): ರಾಷ್ಟ್ರೀಯ ಹೆದ್ದಾರಿಯಲ್ಲಿ (Chikkaballapura National Highway) ವೇಗವಾಗಿ ಬಂದ ಥಾರ್ ಕಾರು, ಆಟೋ ಮತ್ತು ಕಂಟೈನರ್ ನಡುವೆ ನಡೆದ ಸರಣಿ ಅಪಘಾತದಲ್ಲಿ (Thar, Auto and container horrific series of accidents) ಐವರು ಸ್ಥಳದಲ್ಲೇ ಮೃತಪಟ್ಟಿರುವ (five spot dead) ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ.
ಈ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ (Bagepalli) ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಪ್ಯಾಸೆಂಜರ್ ಆಟೋ ಚಾಲಕ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದಂತೆ ಐವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ನಡೆದಿದ್ದೇನು?
ಪೆರೇಸಂದ್ರದಿಂದ ಬಾಗೇಪಲ್ಲಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋಗೆ, ಹಿಂಬದಿಯಿಂದ ಅತಿ ವೇಗವಾಗಿ ಬಂದ 'ಮಹೀಂದ್ರಾ ಥಾರ್' ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಆಟೋ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ (ಅಥವಾ ನಿಂತಿದ್ದ ಎನ್ನಲಾದ) ಬೃಹತ್ ಕಂಟೈನರ್ ವಾಹನದ ಹಿಂಭಾಗಕ್ಕೆ ಅಪ್ಪಳಿಸಿದೆ. ಎರಡು ಬಲಿಷ್ಠ ವಾಹನಗಳ ನಡುವೆ ಸಿಲುಕಿದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಬ್ಬಿಣದ ಉಂಡೆಯಂತಾಗಿದೆ.
ಸ್ಥಳದಲ್ಲೇ ಐವರ ಸಾವು:
ಅಪಘಾತದ ಸಮಯದಲ್ಲಿ ಆಟೋದಲ್ಲಿ ಚಾಲಕ ಸೇರಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಆಟೋದಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ದೇಹಗಳು ಆಟೋದೊಳಗೆ ಸಿಲುಕಿಕೊಂಡಿದ್ದು, ನೋಡುಗರ ಕಣ್ಣಾಲಿಗಳು ಒದ್ದೆಯಾಗುವಂತಿತ್ತು. ಸದ್ಯಕ್ಕೆ ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.
ಮೂವರ ಸ್ಥಿತಿ ಗಂಭೀರ:
ಆಟೋದಲ್ಲಿದ್ದ ಉಳಿದ ಮೂವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಥಾರ್ ಕಾರಿನ ಚಾಲಕನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಪೊಲೀಸರ ಭೇಟಿ:
ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಥಾರ್ ಕಾರಿನ ಅತಿ ವೇಗವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ರೇನ್ ಸಹಾಯದಿಂದ ನಜ್ಜುಗುಜ್ಜಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

