ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ..
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.09): ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ ಕೋರ್ಟ್ ಮೊರೆ ಹೋಗಿದ್ರೆ ಇತ್ತ ಬಿಜೆಪಿ ನೀವೇ ದೇವರ ಬಳಿ ಕೇಳ್ಕೊಂಡಿದ್ರಿ ಇಂದು ಅದೇ ಆಗಿದೆ ಅಂತಿದೆ. ಆದ್ರೆ, 2023ರಲ್ಲಿ ಮಾನ್ಯ ಆಗಿದ್ದ 225ರಲ್ಲಿ ಮತಗಳು 2026ರ ಮರುಎಣಿಕೆಯಲ್ಲಿ ಹೇಗೆ ಅಮಾನ್ಯವಾದವೂ ಅನ್ನೋದು ಎರಡೂ ಪಕ್ಷದ ಕಾರ್ಯಕರ್ತರಲ್ಲೂ ಮಿಲಿಯನ್ ಡಾಲರ್ ಪ್ರಶ್ನೆ ಮೂಡಿಸಿದೆ. ಈ ಮಧ್ಯೆ ಇಬ್ಬರು ಬಿಜೆಪಿ ಕಾರ್ಯಕರ್ತರ ನಡೆ ಕ್ಷೇತ್ರದ ಜನರಲ್ಲಿ ನಾನಾ ಪ್ರಶ್ನೆ ಮೂಡಿಸಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬಳಿಕ ಬಿಜೆಪಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ 201 ಮತಗಳ ಅಂತರದಿಂದ ಕೈ ಅಭ್ಯರ್ಥಿ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದು, 2026ರ ಮರು ಎಣಿಕೆಯಲ್ಲಿ 52 ಮತಗಳ ಅಂತರದಿಂದ ಅದೇ ರಾಜೇಗೌಡ ಸೋಲುಂಡಿದ್ದರು. ಇದೀಗ, ಮತಚೋರಿ ಆರೋಪ ಮಾಡಿದ್ದ ಮಾಜಿ ಶಾಸಕ ರಾಜೇಗೌಡ ಹಾಗೂ ಕೈ ಕಾರ್ಯಕರ್ತರು ಮತಚೋರಿ ಮಾಡಿದವರ ವಿರುದ್ಧ ದೇವರ ಮೊರೆ ಹೋಗಿದ್ದಾರೆ. ಇಂದು ಕೊಪ್ಪ ತಾಲೂಕಿನ ವೀರಭದ್ರ ಸ್ವಾಮಿ ದೇವಾಲಯದ ಹಾಗೂ ಗಬ್ಬಾನೆ ಭೂತರಾಯ ದೇಗುಲದಲ್ಲಿ ನೂರಾರು ಕಾರ್ಯಕರ್ತರ ಜೊತೆ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಸಂಕಲ್ಪ ಮಾಡಿದ್ದು ಮತಚೋರಿ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಕಲ್ಪ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಮತಚೋರಿ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಬೇಡಿಕೊಂಡಿದ್ದಾರೆ. ವೀರಭದ್ರ ಸ್ವಾಮಿ ಹಾಗೂ ಭೂತರಾಯನ ದೇಗುಲದ ಬಳಿಕ ಒಂದು ಚರ್ಚ್ ಹಾಗೂ ಒಂದು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಈಗಾಗಲೇ ಅಂಚೆ ಮತ ಮರು ಎಣಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ರಾಜೇಗೌಡ ಒಂದೆಡೆ ಕಾನೂನು ಮುಖಾಂತರವೂ ಹೋರಾಟ ಮಾಡುತ್ತಿದ್ದು ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ. 2023 ರಲ್ಲಿ ಮಾನ್ಯವಾಗಿದ್ದ 255 ಮತಗಳು 2026ರಲ್ಲಿ ಹೇಗೆ ಅಮಾನ್ಯವಾದವೂ ಎಂದು ಪ್ರಶ್ನಿಸಿದ್ದಾರೆ. ಇದು ವೋಟ್ ಚೋರಿ ಅಲ್ಲದೆ ಮತ್ತೇನೂ ಅಲ್ಲ ಎಂದು ಆರೋಪಿಸಿರೋ ರಾಜೇಗೌಡ ದೇವರು- ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಚರ್ಚೆಗೆ ಗ್ರಾಸ
ಈ ಮಧ್ಯೆ 2023ರ ಮತ ಎಣಿಕೆ ವೇಳೆ ಬಿಜೆಪಿಯ ಏಜೆಂಟ್ ಆಗಿದ್ದ ರಾಮಸ್ವಾಮಿ ಹಾಗೂ ಸತೀಶ್ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು. ಅಂದು ಯಾವುದೇ ಲೋಪ ಆಗಿರದ ಸಾಧ್ಯತೆ ಇದೆ ಎಂದು ಅದೇ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ನಿನ್ನೆ ವೀರಭದ್ರ ಸ್ವಾಮಿ ದೇಗುಲದಲ್ಲಿ ಪ್ರಮಾಣ ಮಾಡಿದ್ದ ಇಬ್ಬರು ಇಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿ, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪಾರದರ್ಶಕವಾಗಿತ್ತು ಎಂದು ಧರ್ಮಸ್ಥಳದಲ್ಲೂ ಕೂಡ ಪ್ರಮಾಣ ಮಾಡಿದ್ದಾರೆ. ಅತ್ತ ಕಾಂಗ್ರೆಸ್ ಕಾರ್ಯಕರ್ತರ ಆರೋಪ, ಇತ್ತ ಬಿಜೆಪಿ ಬೂತ್ ಏಜೆಂಟ್ ಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದ ಇತ್ತ ಶೃಂಗೇರಿ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದರೆ, ಅತ್ತ ಮರು ಎಣಿಕೆಯಲ್ಲಿ 255 ಮತ ಅಮಾನ್ಯವಾಗಿ ರಾಷ್ಟ್ರಮಟ್ಟದ ಗಮನವನ್ನೂ ಸೆಳೆದಿದ್ದರೆ, ಮೂರು ವರ್ಷ ಶಾಸಕರಾಗಿ ಅಧಿಕಾರ ಕಳೆದುಕೊಂಡ ಮಾಜಿ ಶಾಸಕ ರಾಜೇಗೌಡ ನ್ಯಾಯಕ್ಕಾಗಿ ದೇವಾಲಯ-ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಅಂತಿಮವಾಗಿ ಸತ್ಯ ಏನೆಂಬುದು ನಿಷ್ಪಕ್ಷಪಾತವಾದ ತನಿಕೆಯಿಂದ ಹೊರಬರಬೇಕಿದೆ.


