ಸಾಗರದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಫೆಬ್ರವರಿ 3 ರಿಂದ 11 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆಯ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ನಟ ಡಾ. ಶಿವರಾಜಕುಮಾರ್ ಭಾಗವಹಿಸಲಿದ್ದಾರೆ.

ಸಾಗರ: ಪಟ್ಟಣದ ಆರಾಧ್ಯ ದೈವವಾಗಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಫೆ.3ರಿಂದ 11ರವರೆಗೆ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಮಂಗಳವಾರ ಬೆಳಗಿನ ಜಾವ ಮಾರಿಕಾಂಬಾ ತವರು ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಇಡೀ ದಿನ ಜನರು ಶ್ರೀದೇವಿಗೆ ಉಡಿ ತುಂಬಲಿದ್ದಾರೆ. ರಾತ್ರಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಗಂಡನಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

 ಈ ಬಾರಿಯ ಜಾತ್ರೆಯಲ್ಲಿ ಹಲವು ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮ

ಜಾತ್ರೆ ಹಿನ್ನೆಲೆಯಲ್ಲಿ ಫೆ.4ರಿಂದ 11ರವರೆಗೆ ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.6ರಿಂದ 8ರವರೆಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಪಟ್ಟಣದ ಕಾನ್ವೆಂಟ್ ಶಾಲೆ ಎದುರಿನ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಹೇಳಿದರು.

ವಿಶೇಷ ಅತಿಥಿಯಾಗಿ ಶಿವರಾಜ್‌ ಕುಮಾರ್ ಭಾಗಿ

ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್ ಮಾತನಾಡಿ, ಫೆ.5ರಂದು ಜಾತ್ರೋತ್ಸವವನ್ನು ಸಂಜೆ 7ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಚಲನಚಿತ್ರ ನಟ ಡಾ.ಶಿವರಾಜಕುಮಾರ್ ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಫೆ. 3ರಂದು ಸಂಜೆ 5ಕ್ಕೆ ವಸ್ತುಪ್ರದರ್ಶನವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ. ಫೆ.6ರಂದು ನಡೆಯಲಿರುವ ಕುಸ್ತಿ ಪಂದ್ಯಾವಳಿಯನ್ನು ಮಧ್ಯಾಹ್ನ 3ಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು, ತಹಸೀಲ್ದಾರ್ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಉಪಾಧ್ಯಕ್ಷ ಸುಂದರ ಸಿಂಗ್ ಮಾತನಾಡಿ, ಫೆ.3ರಂದು ರಾತ್ರಿ 9ಕ್ಕೆ ಅಮ್ಮನವರ ಉತ್ಸವಮೂರ್ತಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ನಂತರ ಗಂಡನಮನೆ ಎದುರಿನ ಭವ್ಯ ಗದ್ದುಗೆಯಲ್ಲಿ ಅಮ್ಮನವರ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳಿಗೆ ಪ್ರತಿದಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ಫೆ. 11ರಂದು ರಾತ್ರಿ ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ ಇರುತ್ತದೆ ಎಂದು ಹೇಳಿದರು.

ಪ್ರಮುಖರಾದ ರವಿನಾಯ್ಡು, ಲೋಕೇಶಕುಮಾರ್, ಎಸ್.ವಿ.ಕೃಷ್ಣಮೂರ್ತಿ, ನಾಗೇಂದ್ರ ಕುಮಟಾ, ಪುರುಷೋತ್ತಮ, ಗಂಗಾಧರ ಜಂಬಿಗೆ, ಚಂದ್ರು ಆರ್. ಸೋಮಶೇಖರ ಅರಮನೆಕೇರಿ ಇತರರು ಹಾಜರಿದ್ದರು.