ಸೆ.2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ: ಎಸ್‌ಪಿಜಿ ತಂಡದಿಂದ ಪರಿಶೀಲನೆ
ಸ್ಥಳೀಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಎಸ್‌ಪಿಜಿ ತಂಡ, ಇಡೀ ಮೈದಾನ ಸುಪರ್ದಿಗೆ ತೆಗೆದುಕೊಳ್ಳಲಿರುವ ಎಸ್‌ಪಿಜಿ
ಮಂಗಳೂರು(ಆ.30): ಮಂಗಳೂರಿನಲ್ಲಿ ಸೆ.2ರಂದು ಪ್ರಧಾನಿ ಮೋದಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಎಸ್‌ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ತಂಡ ಸೋಮವಾರ ಮಂಗಳೂರಿಗೆ ಆಗಮಿಸಿ, ಸ್ಥಳ ಪರಿಶೀಲನೆ ಕಾರ್ಯ ಕೈಗೊಂಡಿದೆ.
ಸೋಮವಾರ ಮಧ್ಯಾಹ್ನ ಎಸ್ಪಿಜಿಯ ಹಿರಿಯ ಅಧಿಕಾರಿಗಳು, ಪ್ರಧಾನಿ ಕಾರ್ಯಕ್ರಮಕ್ಕೆ ನಿಯೋಜಿಸಲ್ಪಟ್ಟ ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಆಂತರಿಕ ಸಭೆ ನಡೆಸಿದ್ದಾರೆ. ಬಳಿಕ ಸಮಾವೇಶ ನಡೆಯಲಿರುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಭೇಟಿ ನೀಡಿದ ಎಸ್‌ಪಿಜಿ ತಂಡ ಪ್ರಧಾನ ವೇದಿಕೆ, ತಾತ್ಕಾಲಿಕ ಹೆಲಿಪ್ಯಾಡ್, ಸಂಚಾರ ವ್ಯವಸ್ಥೆ, ಪ್ರಧಾನಿ ಸಂಚರಿಸುವ ಮಾರ್ಗಗಳು.. ಹೀಗೆ ಪ್ರತಿಯೊಂದು ಆಯಾಮಗಳನ್ನೂ ಪರಿಶೀಲಿಸಿದೆ. ಸಮಾವೇಶ ನಡೆಯುವ ಸೆ.2ರವರೆಗೂ ಈ ಭದ್ರತಾ ಪಡೆ ಮಂಗಳೂರಿನಲ್ಲೇ ಬೀಡು ಬಿಡಲಿದೆ.
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆ: ವಿವರ ಇಲ್ಲಿದೆ..
2 ದಿನದಲ್ಲಿ ತಯಾರಿ ಪೂರ್ಣ:
ಪ್ರಧಾನಿ ಮೋದಿ ಆಗಮಿಸಲು ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿವೆ. ಸಮಾವೇಶ ನಡೆಯಲಿರುವ 25-30 ಎಕರೆ ವಿಶಾಲ ಮೈದಾನದಲ್ಲಿ ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್ ಅಳವಡಿಸುವುದು, ಬೃಹತ್ ವೇದಿಕೆ ನಿರ್ಮಾಣ, ಕುರ್ಚಿಗಳನ್ನು ಹಾಕುವುದು ಇತ್ಯಾದಿ ಎಲ್ಲ ತಯಾರಿಗಳು ಇನ್ನೆರಡು ದಿನದೊಳಗೆ ಪೂರ್ಣಗೊಳ್ಳಬೇಕಿದೆ. ಅದರ ಬಳಿಕ ಎಸ್ಪಿಜಿಯು ಇಡೀ ಪ್ರದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದ್ದು, ಸಮಾವೇಶ ಮುಕ್ತಾಯಗೊಳ್ಳುವವರೆಗೆ ತೀವ್ರ ಕಣ್ಗಾವಲು ಇರಿಸಲಿದೆ. ಇದರ ಜತೆಗೆ ಭಾರೀ ಸಂಖ್ಯೆಯ ಪೊಲೀಸರು ಭದ್ರತೆ, ಸಂಚಾರ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ.