Asianet Suvarna News Asianet Suvarna News

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ

ಮಹಾ ಅಬ್ಬರ: ಪ್ರಹಾದತ್ತ ಕೃಷ್ಣಾ ತೀರ| ಕೃಷ್ಣಾ ನದಿಗೆ ಬರುತ್ತಿದೆ 65 ಸಾವಿರ ಕ್ಯುಸೆಕ್‌| ಕೃಷ್ಣಾ ನದಿ ಹಾಗೂ ಅದರ ಉಪನದಿಗಳ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳ| ಪಂಪ್‌ಸೆಟ್‌ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದ ರೈತರು| ಮಲಪ್ರಭಾ ಜಲಾನಯನ ಪ್ರದೇಶದಲ್ಲಿಯೂ ಮುಂದುವರೆದ ಮಳೆ|

Specter of flooding in the Bank of Krishna River Due to Heavy Rain in Maharashtra
Author
Bengaluru, First Published Jun 20, 2020, 11:57 AM IST | Last Updated Jun 20, 2020, 12:15 PM IST

ಬೆಳಗಾವಿ(ಜೂ.20): ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಜಲಾನಯನ ಪ್ರದೇಶದಲ್ಲಿ ಶುಕ್ರವಾರವೂ ಮಳೆ ಅಬ್ಬರ ಮುಂದುವರಿದಿದ್ದು, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಕೆಳ ಹಂತದಲ್ಲಿನ ಐದು ಸೇತುವೆ ಜಲಾವೃತಗೊಂಡಿವೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿ ತೀರ ಪ್ರದೇಶದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ದೂಧಗಂಗಾ ನದಿಗೆ ನಿರ್ಮಿಸಿರುವ ಕಾರದಗಾ- ಭೋಜ ಗ್ರಾಮ ಸಂಪರ್ಕಿಸುವ ಸೇತುವೆ, ಭೋಜವಾಡಿ- ಕುನ್ನೂರ ಸಂಪರ್ಕಿಸುವ ಸೇತುವೆ, ಮಲಿಕವಾಡ-ದತ್ತವಾಡ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುನ್ನೂರ‰-ಬಾರವಾಡ ಸೇತುವೆ ಹಾಗೂ ಚಿಕ್ಕೋಡಿ ತಾಲೂಕಿನ ಯಡೂರ- ಕಲ್ಲೋಳ ಸೇತುವೆ ಜಲಾವೃತಗೊಂಡಿವೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗದ ಮೂಲಕ ರಸ್ತೆ ಸಂಚಾರದ ವ್ಯವಸ್ಥೆ ಇದೆ. ರಾಜಾಪುರ ಬ್ಯಾರೇಜ್‌ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಸುಮಾರು 65 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಕೃಷ್ಣಾ ನದಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದ್ದು, ಇದು ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಮೂಡಿಸಿದೆ.

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ

ಕೃಷ್ಣಾ ನದಿ ಹಾಗೂ ಅದರ ಉಪನದಿಗಳ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ಮಳೆ ಅಬ್ಬರ ತಗ್ಗಿದ್ದು, ಬೆಳಗಾವಿ ನಗರದಲ್ಲಿ ಸಂಜೆ ಹೊತ್ತಿಗೆ ಜಿಟಿ ಜಿಟಿ ಮಳೆ ಆಗಿದೆ. ಖಾನಾಪುರ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆ ಆಗಿದ್ದು, ಮಲಪ್ರಭಾ ಜಲಾನಯನ ಪ್ರದೇಶದಲ್ಲಿಯೂ ಮಳೆ ಮುಂದುವರೆದಿದೆ. ಮಲಪ್ರಭಾ ನದಿಯ ನೀರಿನ ಒಳಹರಿವು ಹೆಚ್ಚಳವಾಗುತ್ತಿದೆ.
 

Latest Videos
Follow Us:
Download App:
  • android
  • ios