Asianet Suvarna News Asianet Suvarna News

ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?

2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

Special Investigation Team to investigate mangalore golibar
Author
Bangalore, First Published Jan 29, 2020, 9:01 AM IST

ಬೆಂಗಳೂರು(ಜ.29): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ದಿನದಲ್ಲಿ ಬಯಲಾಗುತ್ತೆ ಮಂಗಳೂರು ಗಲಭೆ ಸತ್ಯಾಂಶ..!

ಕೆಲ ಕಾಲ ವಾದ ಆಲಿಸಿದ ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ ಅರ್ಜಿಗೆ ಫೆ.4ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ, ಘಟನೆ ನಡೆದ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ಮಂಗಳೂರು ಗೋಲಿಬಾರ್: ಘಟನೆ ನೋಡಿದ್ರೆ ನೀವೂ ಸಾಕ್ಷಿ ಹೇಳಬಹುದು..!

ಘಟನೆಯ ತನಿಖೆ ನಡೆಸಲು ಎಡಿಜಿಪಿ ದರ್ಜೆ ಹಿರಿಯ ಪೊಲೀಸ್‌ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಘಟನೆಯಲ್ಲಿ ಗಾಯಗೊಂಡವರು ಹಾಗೂ ಮೃತರ ಕುಟುಂಬದವರು ನೀಡಿರುವ ಎಲ್ಲಾ ದೂರುಗಳಿಗೆ ಎಫ್‌ಐಆರ್‌ ದಾಖಲಿಸಿಕೊಳ್ಳಬೇಕು. ಘಟನೆ ನಡೆದ 2019ರ ಡಿ.19ರ ಬೆಳಿಗ್ಗೆ 10 ಗಂಟೆಯಿಂದ ಡಿ.20ರ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ಖಾಸಗಿ ಅಂಗಡಿ ಮಾಲಿಕರು ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Follow Us:
Download App:
  • android
  • ios