ಮಂಗಳೂರು(ಜ.08): ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳು, ಗಾಯಾಳು ಸಂತ್ರಸ್ತರು ಸೇರಿದಂತೆ ಸಾರ್ವಜನಿಕರ ಹೇಳಿಕೆಗಳು, ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸತ್ಯಶೋಧನಾ ತಂಡ ತಿಳಿಸಿದೆ.

ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕಲಾಗಿದೆ. ಇನ್ನು 15 ದಿನದೊಳಗೆ ವರದಿ ಸಿದ್ಧಪಡಿಸಿ ಜನರ ಮುಂದಿಡಲಾಗುವುದು. ಅದಕ್ಕೂ ಮೊದಲು ವರದಿಯ ಸಾರಾಂಶವನ್ನು ತಿಳಿಸಲಾಗುವುದು ಎಂದು ಗೋಲಿಬಾರ್‌ ಸಂಬಂಧಿಸಿದಂತೆ ಸತ್ಯಾಂಶದ ವರದಿ ಮಾಡಲು ಆಗಮಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸತ್ಯಶೋಧನಾ ತಂಡ ತಿಳಿಸಿದೆ.

ಮಂಗಳೂರು ಗೋಲಿಬಾರ್: ಘಟನೆ ನೋಡಿದ್ರೆ ನೀವೂ ಸಾಕ್ಷಿ ಹೇಳಬಹುದು..!

ಆಯೋಗದ ಸದಸ್ಯರಾದ ಸುಗತ ಶ್ರೀನಿವಾಸರಾಜು ಮತ್ತು ವೆಂಕಟೇಶ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಲು 8-10 ಹೊಟೇಲ್‌ಗಳನ್ನು ಸಂಪರ್ಕಿಸಿದರೂ ಪೊಲೀಸ್‌ ಇಲಾಖೆಯು ಹೊಟೇಲ್‌ ಮುಖ್ಯಸ್ಥರ ಮೂಲಕ ಒತ್ತಡ ಹೇರಿ ಅವಕಾಶ ನಿರಾಕರಿಸಿದೆ ಎಂದು ಪೀಪಲ್ಸ್‌ ಟ್ರಿಬ್ಯೂನಲ್‌ ನಿಯೋಗದ ಸದಸ್ಯ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಖೇದ ವ್ಯಕ್ತಪಡಿಸಿದ್ದಾರೆ.