ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳು ಅಕ್ಟೋಬರ್ 16 ಮತ್ತು 17 ರಂದು ಸಂಚರಿಸಲಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.
ಹುಬ್ಬಳ್ಳಿ (ಅ.7): ವಾರಾಂತ್ಯ ಹಾಗೂ ದಸರಾ ಹಬ್ಬ(Dasara festival)ದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು, ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಬೆಳಗಾವಿ ನಡುವೆ ಎರಡು ಮಾರ್ಗಗಳಲ್ಲಿ ತಲಾ ಒಂದು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ.
ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು
ರೈಲು ಸಂಖ್ಯೆ 06563 ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅ. 16ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ಸಂಜೆ 7ಕ್ಕೆ ಹೊರಟು, ಮರುದಿನ ಬೆಳಗ್ಗೆ 8.25 ಗಂಟೆಗೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದಲ್ಲಿ, ರೈಲು ಸಂಖ್ಯೆ 06564 ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅ. 17ರಂದು ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು, ಮರುದಿನ 5 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.
ಬೆಂಗಳೂರು-ಬೆಳಗಾವಿ ಟ್ರೈನ್ ಎಲ್ಲೆಲ್ಲಿ ನಿಲುಗಡೆ?
ಮಾರ್ಗ ಮಧ್ಯದಲ್ಲಿ ಈ ರೈಲು ಎರಡೂ ಮಾರ್ಗಗಳಲ್ಲಿ ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ವಿಶೇಷ ಎಕ್ಸ್‌ಪ್ರೆಸ್ ರೈಲು ಎಷ್ಟು ಬೋಗಿಗಳನ್ನ ಹೊಂದಿದೆ?
ಈ ರೈಲು 18 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 1 ಎಸಿ, 2-ಟೈರ್, 3 ಎಸಿ 3-ಟೈರ್, 8 ಸ್ಲೀಪರ್ ಕ್ಲಾಸ್, 4 ಜನರಲ್ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ದ್ವಿತೀಯ ದರ್ಜೆ ಲಗೇಜ್- ಕಮ್- ಬ್ರೇಕ್ ವ್ಯಾನ್‌ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.


