ಬಂಟ್ವಾಳದ ಪಾಣೆಮಂಗಳೂರು ಬಳಿ ತಲವಾರು ಝಳಪಿಸಿ ₹8.35 ಲಕ್ಷ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹2.01 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಕ್ಷಿಣ ಕನ್ನಡ: ಅಂಗಡಿಗಳಿಂದ ಸಂಸ್ಥೆಯ ವ್ಯವಹಾರದ ಹಣ ಸಂಗ್ರಹಿಸಿಕೊಂಡು ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಲವಾರು ತೋರಿಸಿ ಬೆದರಿಸಿ ₹8.35 ಲಕ್ಷ ನಗದು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾಣೆಮಂಗಳೂರು ಬಳಿ ನಡೆದಿದ್ದ ದರೋಡೆ
ಮಂಗಳೂರಿನ ಕಣ್ಣೂರಿನಲ್ಲಿರುವ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಯ್ಯದಿ (40) ಅವರು ಸಂಸ್ಥೆಯ ವ್ಯವಹಾರದ ಹಣವನ್ನು ವಿವಿಧ ಅಂಗಡಿಗಳಿಂದ ಸಂಗ್ರಹಿಸಿಕೊಂಡು ಬರಲು 2026ರ ಆಗಸ್ಟ್ 20ರಂದು ಬೈಕ್ನಲ್ಲಿ ತೆರಳಿದ್ದರು. ಹಲವು ಅಂಗಡಿಗಳಿಂದ ನಗದು ಸಂಗ್ರಹಿಸಿಕೊಂಡು ಕಕ್ಕೆಪದವಿನಿಂದ ಪಾಣೆಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1 ಗಂಟೆಗೆ ಬಂಟ್ವಾಳದ ಮಣಿನಾಲ್ಕೂರು ಮುಲ್ಕಾಜೆ ಮಾಡ್ ಎಂಬಲ್ಲಿ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಅಪರಿಚಿತರು ತಲವಾರು ತೋರಿಸಿ ಬೆದರಿಸಿ ಅವರ ಬಳಿಯಿದ್ದ ₹8,35,000 ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳು
ತನಿಖೆ ನಡೆಸಿದ ಪೊಲೀಸರು ಮಂಗಳೂರು ಶಕ್ತಿನಗರ ನಿವಾಸಿ ಪ್ರವಿತ್ ಶೆಟ್ಟಿ, ಉಳ್ಳಾಲ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಉಳ್ಳಾಲ ಹರೇಕಳ ನಿವಾಸಿ ಶಾಕೀರ್ ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆರೋಪಿಗಳಿಂದ ₹2,01,000 ನಗದು ಹಣ ವಶಪಡಿಸಿಕೊಂಡಿದ್ದಾರೆ. ಬಳಿಕ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












