ಮಂಗಳೂರಿನ ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದ ಮೇಲೆ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕರು ನೀಡಿದ ದೂರಿನ ಅನ್ವಯ ಕ್ರಮ.

ಉಳ್ಳಾಲ (ಮೇ.14): ಮಂಗಳೂರು ಸಮೀಪದ ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದಲ್ಲಿ ಮದನಿ ನಗರದ ಜುನೈದ್ ಹಾಗೂ ಹತ್ತು ಮಂದಿ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Add Asianetnews Kannada as a Preferred SourcegooglePreferred

ಖಾದರ್ ಅಂಗರಕ್ಷಕ ಸಿಬ್ಬಂದಿ ದೂರು; 11 ಮಂದಿ ವಿರುದ್ಧ ಕೇಸ್

ಖಾದರ್ ಅವರ ಅಂಗರಕ್ಷಕ ಹಾಗೂ ಸಿಎಸ್‌ಆರ್ ಘಟಕದ ಸಿಬ್ಬಂದಿ ಮೊಹಮ್ಮದ್ ಯಾಸೀನ್‌ ನೀಡಿದ ದೂರಿನ ಆಧಾರದ ಮೇಲೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 7ರಂದು ರಾತ್ರಿ ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್‌ನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಜುನೈದ್ ಹಾಗೂ ಇತರರು ಸ್ಪೀಕರ್ ಅವರನ್ನು ಭೇಟಿಯಾಗಲು ಮುಂದಾಗಿದ್ದರು. ಈ ವೇಳೆ, ಭದ್ರತಾ ಸಿಬ್ಬಂದಿ ಭೇಟಿಗೆ ಅವಕಾಶ ನಿರಾಕರಿಸಿದ್ದರು. ಆದರೆ, ಆರೋಪಿಗಳು ಅಂಗರಕ್ಷಕನನ್ನು ತಳ್ಳಿ ಮುಂದೆ ನುಗ್ಗಿ, ಖಾದರ್ ಅವರಿಗೆ ಘೇರಾವ್ ಹಾಕಿದ್ದರು.

ಕಿ ಕುತ್ತಾರು ಕೊರಗಜ್ಜನ ವೃತ್ತದ ವಿಚಾರವಾಗಿ ಏರುಧ್ವನಿಯಲ್ಲಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಘಟನೆಯ ವಿಡಿಯೋವನ್ನು ಆಕ್ಷೇಪಾರ್ಹ ಬರಹಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಮೇಲಾಧಿಕಾರಿಗಳ ಸೂಚನೆಯಂತೆ ಮೇ 9ರಂದು ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ.

ಕೊರಗಜ್ಜ ವೃತ್ತ ವಿವಾದ ಹಿನ್ನೆಲೆ:

ಕುತ್ತಾರು ಕೊರಗಜ್ಜ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ಸ್ಥಳೀಯ ಬಜರಂಗದಳ ಸಂಘಟನೆ ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ಮುಟ್ಟಾಳೆ ಹಾಗೂ ದಂಟೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತ ನಿರ್ಮಿಸಿತ್ತು. ಇದೀಗ ಆ ವೃತ್ತ ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಿಂದ ನೂತನ ವೃತ್ತ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ನಡುವೆ ‘ಕೊರಗಜ್ಜನ ಹೆಸರಿನಲ್ಲಿ ವೃತ್ತ ನಿರ್ಮಾಣವಾಗಬಾರದು’ ಎಂದು ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಖಾದರ್ ಅವರನ್ನು ಘೇರಾವ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

- ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ್ಕೆ ಆಕ್ಷೇಪ ಆರೋಪ