ಕೋಲಾರ,[ಡಿ.09]: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸೋತಿದ್ದು ನನಗೆ ತೀವ್ರ ನೋವುಂಟು ಮಾಡಿದ್ದು,  ನನ್ನ ಸಾವಿಗಿಂತ ಹೆಚ್ಚು ಬೇಸರ ತರಿಸಿದೆ ಎಂದು ರಾಜ್ಯ ಮೈತ್ರಿ ಸರ್ಕಾರದ ಸ್ಪೀಕರ್​ ರಮೇಶ್​ ಕುಮಾರ್​  ಕಣ್ಣೀರಿಟ್ಟರು.

ಕೋಲಾರ ಇಂದು [ಭಾನುವಾರ] ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ, ಹರಿಯೋ ನೀರು. ಆದರೂ ಸಿದ್ಧರಾಮಯ್ಯ ಅವರಿಗೆ ಮತ್ತೆ ಸರ್ಕಾರ ರಚನೆ ಮಾಡಲು ಅವಕಾಶ ತಪ್ಪಿಸಲಾಯಿತು ಎಂದು ರಮೇಶ್ ಕುಮಾರ್ ಭಾವೊದ್ವೇಗಕ್ಕೆ ಒಳಗಾದರು.

ಸತ್ಯ ಕಹಿಯಾಗಿರುತ್ತೆ, ಸತ್ಯ ಕಠಿಣವಾಗಿರುತ್ತೆ. ಆದರೆ ಸತ್ಯಕ್ಕೆ ಸಾವಿಲ್ಲ. ಕೊನೆಗೆ ಅದೇ ಗೆಲ್ಲುತ್ತೆ. ಬರಡು ಭೂಮಿಗೆ ನೀರು ಕೊಟ್ಟ ಭಗೀರಥ ಸಿದ್ಧರಾಮಯ್ಯ ಎಂದು ರಮೇಶ್ ಕುಮಾರ ಭಾವನಾತ್ಮಕವಾಗಿ ಮಾತನಾಡಿದರು.

ನಮ್ಮ ಜನ ಬಹಳ ಬೇಗ ಸೇವೆ ಮಾಡಿದವರನ್ನು ಮರೆಯುತ್ತಾರೆ. ಚುನಾವಣೆಯಲ್ಲಿ ಕೋಲಾರದಲ್ಲಿ ಸ್ಪರ್ಧಿಸಿದ್ದರೆ ಅವರ ಸೋಲು ಆಗುತ್ತಿಲ್ಲ. ಪರಿಪರಿಯಾಗಿ ಬೇಡಿದರು ಕೋಲಾರ ಕ್ಷೇತ್ರಕ್ಕೆ ಬರಲಿಲ್ಲ. ಅವರ ಸೂಲು ಮರೆಯಲಾರದು ಎಂದು ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಳಿಂದ ಸ್ಪರ್ಧಿಸಿದ್ದು, ಅದರಲ್ಲಿ ಚಾಮುಂಡೇಶ್ವರಿಯಲ್ಲಿ ಸೋಲು ಕಂಡರೆ, ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದರು.