ಬೆಂಗಳೂರು (ಸೆ.20): ತಮ್ಮ ಪುತ್ರ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆಯಾಗುವುದು ಅವರಿಗೆ ಬಿಟ್ಟವಿಚಾರ ಎಂದು ಅವರ ತಂದೆ ಹಾಗೂ ಬಿಜೆ​ಪಿ ಸಂಸದ ಬಿ.ಎನ್‌. ಬಚ್ಚೇಗೌಡ ಹೇಳಿ​ದ್ದಾ​ರೆ. ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ವಿಚಾರ ಸಂಬಂಧ ಪ್ರಶ್ನೆಗೆ ಉತ್ತ​ರಿ​ಸಿ​ದ​ರು.

‘ಕಾಂಗ್ರೆಸ್‌ಗೆ ಸೇರುವುದು, ಬಿಡುವುದು ಶರತ್‌ ಬಚ್ಚೇಗೌಡ ಅವರಿಗೆ ಸಂಬಂಧಿಸಿದ್ದಾಗಿದೆ. ನಾನು ಬಿಜೆಪಿ ಸಂಸದನಾಗಿದ್ದೇನೆ. ಶರತ್‌ ಸ್ವಾಭಿಯಾನಿಯಾಗಿ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಅವರು ಭವಿಷ್ಯದಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ಗೊತ್ತಿಲ್ಲ. ಶರತ್‌ಗೆ ಚುನಾವಣೆ ವೇಳೆ ಬೆಂಬಲ ನೀಡಿಲ್ಲ. ಎಂಎಲ್ಸಿ ಎಂ.ಟಿ.ಬಿ. ನಾಗರಾಜ್‌ ಹೇಳಿಕೆಗಳು ಸತ್ಯಕ್ಕೆ ದೂರವಾದುದು’ ಎಂದು ಸ್ಪಷ್ಪಪಡಿಸಿದರು.

ನನ್ನ ಸ್ಥಾನ ಡಿ.ಕೆ.ಶಿವಕುಮಾರ್ ತಪ್ಪಿಸಲ್ಲ : ಯೋಗೇಶ್ವರ್ ..

ಅಕ್ಟೋಬರ್‌ ತಿಂಗಳ ವಿಜಯದಶಮಿ ದಿನದಂದು ಶರತ್‌ ಬಚ್ಚೇಗೌಡ ಅವರು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂ.ಟಿ.ಬಿ. ನಾಗರಾಜ್‌ಗೆ ಟಿಕೆಟ್‌ ನೀಡಿದ್ದರಿಂದ ಶರತ್‌ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದ್ದವು. ಆದರೆ, ಬಿಜೆಪಿಗೆ ಸೇರಲಿಲ್ಲ. ಇದೀಗ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಶರತ್‌ ಬಚ್ಚೇಗೌಡ ಅವರು ಸಹ ಕಾಂಗ್ರೆಸ್‌ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.