Hubballi: ಕಿಮ್ಸ್‌ನಲ್ಲಿ ಶೀಘ್ರ ತೆರೆದ ಹೃದಯ ಶಸ್ತ್ರಚಿಕಿತ್ಸೆ ಘಟಕ ಕಾರ್ಯಾರಂಭ
* ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುತ್ತಿದೆ ಕಾರ್ಡಿಯಾಲಜಿ ವಿಭಾಗ
* ಹತ್ತು ದಿನಗಳಲ್ಲಿ ಇಲ್ಲಿ ಚಿಕಿತ್ಸೆ ಪ್ರಾರಂಭ
* 3.50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಥ್ ಲ್ಯಾಬ್
ಮಯೂರ ಹೆಗಡೆ
ಹುಬ್ಬಳ್ಳಿ(ಮಾ.24): ಉತ್ತರ ಕರ್ನಾಟಕ(North Karnataka) ಭಾಗದ ಜನತೆಗೆ ಶುಭ ಸುದ್ದಿಯೊಂದಿದೆ. ಇಲ್ಲಿನ ಕಿಮ್ಸ್‌ನಲ್ಲಿ ಶೀಘ್ರ ‘ಓಪನ್ ಹಾರ್ಟ್ ಸರ್ಜರಿ’(Open Heart Surgery) ವಿಭಾಗ ಕಾರ್ಯಾರಂಭ ಮಾಡಲಿದ್ದು, ಬಡಜನತೆ ಬೆಂಗಳೂರು(Bengaluru) ಸೇರಿ ಇತರೆಡೆ ತೆರಳುವುದು ತಪ್ಪಲಿದೆ.
ಇಲ್ಲಿವರೆಗೆ ಕಿಮ್ಸ್‌ಗೆ(KIMS) ಬರುವಂತ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆಗಬೇಕಿದ್ದ ರೋಗಿಗಳನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಸೇರಿ ಇತರೆಡೆ ಕಳಿಸಿಕೊಡಲಾಗುತ್ತಿತ್ತು. ಬಡ, ಮಧ್ಯಮ ವರ್ಗದ ಜತೆಗೆ ಇದರಿಂದ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿತ್ತು. ಇದೀಗ ಬಜೆಟ್‌ನಲ್ಲಿ ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಆಸ್ಪತ್ರೆ ಘೋಷಣೆ ಆಗಿದೆ. ಅದರ ನಡುವೆ ಕಿಮ್ಸ್‌ನಲ್ಲಿಯೇ ಕಾರ್ಡಿಯಕ್ ಸರ್ಜರಿ ಸೌಲಭ್ಯ ದೊರಕುವಂತಾಗಿದ್ದು ಜನತೆಗೆ ಅನುಕೂಲವಾಗಿದೆ.
Hubballi KIMS: ಮೂಲೆಗುಂಪಾದ ಕಿಯೋಸ್ಕ್ ಮಷಿನ್: ಲಕ್ಷಾಂತರ ರೂಪಾಯಿ ಹಣ ನೀರಿನಲ್ಲಿ ಹೋಮ..!
ಇಲ್ಲಿವರೆಗೆ ಕಿಮ್ಸ್‌ನ ಹಳೆ ಕಟ್ಟಡದ ತಳಮಹಡಿಯಲ್ಲಿ ಕಾರ್ಡಿಯಾಲಜಿ ವಿಭಾಗ ಕಾರ್ಯನಿರ್ವಹಿಸುತ್ತಿತ್ತು. ಇದನ್ನೀಗ ಕಿಮ್ಸ್ ‘ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ ಪಕ್ಕದ ಹೊಸ ಕಟ್ಟಡಕ್ಕೆ ಹಂತ ಹಂತವಾಗಿ ಕಾರ್ಡಿಯಾಲಜಿ ಘಟಕ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೆ ಒಪಿಡಿ, ತೀವ್ರ ನಿಗಾ ಘಟಕ ನಡೆಯುತ್ತಿದೆ. ಇಲ್ಲಿಯೆ ಕಾರ್ಡಿಯಾಕ್ ಸರ್ಜರಿ ಘಟಕ ಕೂಡ ತೆರೆಯಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕಿಮ್ಸ್‌ನಲ್ಲಿ ಈವರೆಗೆ ಎಂಜಿಯಾಪ್ಲಾಸ್ಟಿ, ಎಂಜಿಯಾಗ್ರಫಿ, ಸ್ಟಂಟ್ ಅಳವಡಿಕೆ ಸೇರಿ ಇತರೆಲ್ಲ ಸೌಲಭ್ಯವಿತ್ತು. ಆದರೆ, ಕಾರ್ಡಿಯಾಕ್ ಸರ್ಜರಿ ಇರಲಿಲ್ಲ. ಇದಕ್ಕಾಗಿ ಜಯದೇವ ಆಸ್ಪತ್ರೆಯಿಂದ ಇಲ್ಲಿಗೆ ಡಾ. ಉಲ್ಲಾಸ ಬಿಸ್ಲೆರಿ ಅವರನ್ನು ಕರೆಸಿಕೊಂಡಿದ್ದೇವೆ. ಅಲ್ಲದೆ, ಹೊಸದಾಗಿ 8-10 ಸ್ಟಾಪ್ ನರ್ಸ್‌ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ವೈದ್ಯಕೀಯ ಸಿಬ್ಬಂದಿ ಅಗತ್ಯದಷ್ಟು ಇದ್ದಾರೆ ಎಂದರು.
ಹೊಸ ಕಟ್ಟಡದಲ್ಲಿನ ಕಾರ್ಡಿಯಾಲಜಿ ವಿಭಾಗಕ್ಕೆ 3.50ಕೋಟಿ ವೆಚ್ಚದಲ್ಲಿ ಹೊಸ ಕ್ಯಾಥ್‌ಲ್ಯಾಬ್(Cathlab)ರೂಪಿಸಿಕೊಳ್ಳಲಾಗಿದೆ. 13 ವರ್ಷದ ಬಳಿಕ ಲ್ಯಾಬ್ ನವೀಕರಣ ಆಗುತ್ತಿದೆ. ಸಿಎಂಸಿ ಸಂಸ್ಥೆ ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಕೆ ಮಾಡಿಕೊಡುತ್ತಿದೆ. ಒಟ್ಟಾರೆ ಇನ್ನು ಹತ್ತು ದಿನ ಅಥವಾ ಏಪ್ರಿಲ್ ಮೊದಲ ವಾರದಿಂದ ಈ ವಿಭಾಗ ಕಾರ್ಯ ಆರಂಭಿಸಲಿದೆ ಎಂದು ಡಾ. ಅಂಟರತಾನಿ ವಿವರಿಸಿದರು.
ಶುಷ್ರೂಶಕರಿಗೆ ಕೋವಿಡ್ ಪ್ರೋತ್ಸಾಹ ಧನ ಯಾವಾಗ?
ಕಿಮ್ಸ್ ಹೃದಯತಜ್ಞ ಡಾ. ರಾಜಕುಮಾರ ಹಿರೇಮಠ ಮಾತನಾಡಿ, ಸದ್ಯ ಕಿಮ್ಸ್ ಕಾರ್ಡಿಯಾಲಜಿ ವಿಭಾಗದ ಒಪಿಡಿ ದಿನಕ್ಕೆ ಸರಾಸರಿ 30 ರೋಗಿಗಳನ್ನು ಅಟೆಂಡ್ ಮಾಡುತ್ತಿದೆ. ಎಂಜಿಯಾಪ್ಲಾಸ್ಟಿ, ಎಂಜಿಯೊಗ್ರಫಿ ಚಿಕಿತ್ಸೆಯನ್ನು ಕನಿಷ್ಠ 10 ಜನರು ಪಡೆಯುತ್ತಿದ್ದಾರೆ. ಹೊಸ ಕಟ್ಟಡದಲ್ಲಿ ಕಾರ್ಡಿಯಾಸರ್ಜರಿ ವಿಭಾಗವೂ ಆರಂಭ ಆಗುವುದರಿಂದ ಮತ್ತಷ್ಟುರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಸತ್ತೂರು ಹಾರ್ಟ್‌ಕೇರ್‌ನ ಡಾ. ಅಮಿತ್ ಸತ್ತೂರು ಮಾತನಾಡಿ, ಖಾಸಗಿ ವಲಯದಲ್ಲಿ ನೋಡುವುದಾದರೆ ಹುಬ್ಬಳ್ಳಿಯಲ್ಲಿ ಹೃದಯ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಆಧುನಿಕ ಸೌಲಭ್ಯವಿದೆ. ಬೈಪಾಸ್ ಆಪರೇಶನ್‌ನಿಂದ ಹಿಡಿದು ಇಮ್ಯಾಜಿನ್ ಟೆಕ್ನಾಲಜಿ ವರೆಗೆ ಎಲ್ಲ ಸೌಕರ್ಯ ಇದೆ. ಅತ್ಯಾಧುನಿಕ ಎನ್ನಿಸಿಕೊಳ್ಳಿತ್ತಿರುವ ಒಸಿಟಿ (ಆಪ್ಟಿಲ್ ಕೊಹೆರೆನ್ಸ್ ಟೊಮೊಗ್ರಫಿ) ಕೂಡ ಒಂದು ಖಾಸಗಿ ಆಸ್ಪತ್ರೆಗೆ ಬರುತ್ತಿದೆ. ಕೆಎಲ್‌ಇ ಸುಚಿರಾಯು, ಎಸ್‌ಡಿಎಂ ನಾರಾಯಣ ಹೃದಯಾಲಯ ಕೂಡ ಚಿಕಿತ್ಸೆ ಒದಗಿಸುತ್ತಿವೆ. ಕಿಮ್ಸ್‌ನಲ್ಲಿ ಹೃದಯ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ಜಯದೇವ ಆಸ್ಪತ್ರೆ ಇಲ್ಲಿ ನಿರ್ಮಾಣ ಆಗುವುದರಿಂದ ಬಡ, ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದರು.
ಕಿಮ್ಸ್ ಹೊಸ ಕಟ್ಟಡಕ್ಕೆ ಕಾರ್ಡಿಯಾಲಜಿ ವಿಭಾಗ ಸ್ಥಳಾಂತರ ಆಗುತ್ತಿದೆ. ಹೊಸ ಕ್ಯಾಥ್‌ಲ್ಯಾಬ್ ಜೋಡಣಾ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಹತ್ತು ದಿನದಲ್ಲಿ ಇಲ್ಲಿ ಓಪನ್ ಹಾರ್ಟ್ ಸರ್ಜರಿ ವಿಭಾಗ ಕೂಡ ತೆರೆಯಲಿದೆ ಅಂತ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.