ಶುಷ್ರೂಶಕರಿಗೆ ಕೋವಿಡ್‌ ಪ್ರೋತ್ಸಾಹ ಧನ ಯಾವಾಗ?

* ಮೊದಲನೆಯದೇ ಬಂದಿಲ್ಲ, ಎರಡನೇದೂ ಖಚಿತವಿಲ್ಲ
* ಪ್ರೋತ್ಸಾಹ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಕಿಮ್ಸ್‌ ನರ್ಸ್‌ಗಳು
* ಸರ್ಕಾರ ಪ್ರೋತ್ಸಾಹಧನ ಘೋಷಿಸಿ ಬಿಡುಗಡೆ ಮಾಡದಿರುವುದು ಬೇಸರ 

KIMS Nurses Upset for Government Not Yet Give Covid Incentives grg

ಹುಬ್ಬಳ್ಳಿ(ಜು.21): ಮೊದಲ ಅಲೆಯ ಪ್ರೋತ್ಸಾಹಧನವೂ ಕೈ ಸೇರಿಲ್ಲ, ಎರಡನೇ ಅಲೆಯದ್ದೂ ಕೊಟ್ಟಿಲ್ಲ, ಮೂರನೇ ಅಲೆಗೆ ಸಿದ್ಧವಾಗ್ತಿದ್ದೇವೆ! ಕೋವಿಡ್‌ ವೇಳೆ ಹಗಲು ರಾತ್ರಿ ಪ್ರಾಣ ಒತ್ತೆ ಇಟ್ಟು ದುಡಿದ ಕಿಮ್ಸ್‌ನ ಶುಷ್ರೂಶಕ ಸಿಬ್ಬಂದಿ ಬೇಸರದಿಂದ ವ್ಯಂಗ್ಯದಿಂದ ಹೇಳುತ್ತಿರುವ ಮಾತಿದು. ಮೊದಲ ಹಾಗೂ ಎರಡನೇ ಅಲೆಯ ಪ್ರೋತ್ಸಾಹ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಹ ಪರಿಸ್ಥಿತಿ ಇವರದ್ದಾಗಿದೆ.

ಮೊದಲ ಅಲೆಯ ವೇಳೆ ತಿಂಗಳಿಗೆ 5 ಸಾವಿರ ಹಾಗೂ ಎರಡನೇ ಅಲೆಯಲ್ಲಿ ತಿಂಗಳಿಗೆ .8 ಸಾವಿರದಂತೆ ಆರು ತಿಂಗಳ ಕಾಲ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಸರ್ಕಾರದಿಂದ ಕಿಮ್ಸ್‌ಗೆ ಈವರೆಗೆ ಪ್ರೋತ್ಸಾಹಧನದ ಅನುದಾನ ಬಂದಿಲ್ಲ. ಅದರಲ್ಲೂ 2ನೇ ಅಲೆಯಲ್ಲಿ ಪಿಪಿಇ ಕಿಟ್‌ ಧರಿಸಿ ಸೇವೆ ಸಲ್ಲಿಸಿದವರಿಗೆ ಮಾತ್ರ ಪ್ರೋತ್ಸಾಹ ಧನ ನೀಡುತ್ತೇವೆ ಎಂದಿರುವ ಸರ್ಕಾರದ ಘೋಷಣೆ ಸಾಕಷ್ಟುಗೊಂದಲಕ್ಕೂ ಕಾರಣವಾಗಿದೆ.

ಕಿಮ್ಸ್‌ನಲ್ಲಿ ವೈದ್ಯಕೀಯ ಇಲಾಖೆಯಿಂದ ನೇಮಕವಾದ 150 ನರ್ಸಿಂಗ್‌ ಅಧಿಕಾರಿಗಳು, ಕಿಮ್ಸ್‌ ನೇರವಾಗಿ ಗುತ್ತಿಗೆ ಪಡೆದ 78 ಹಾಗೂ ಪಿಎಂಎಸ್‌ಎಸ್‌ವೈ ಅಡಿ 82 ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 39 ಹಾಗೂ ಇತರೆ ಸೇರಿ ಸಮಾರು 370 ಶುಷ್ರೂಶಕ ಸಿಬ್ಬಂದಿ ಕೆಲಸದಲ್ಲಿದ್ದಾರೆ. ಇವರಲ್ಲಿ ಪಿಎಂಎಸ್‌ಎಸ್‌ವೈ ಯೋಜನೆಯ ಸಿಬ್ಬಂದಿಗೆ ಸುಮಾರು 3 ತಿಂಗಳಿನ ಪ್ರೋತ್ಸಾಹ ಧನ ದೊರೆತಿದ್ದು, ಉಳಿದವರಿಗೆ ಸಿಕ್ಕಿಲ್ಲ.

ಈಚೆಗೆ ಹುಬ್ಬಳ್ಳಿಗೆ ಆರೋಗ್ಯ ಸಚಿವ ಸುಧಾಕರ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಂದಾಗ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದೇವೆ. ಮೇಲಧಿಕಾರಿಗಳು ಶೀಘ್ರವೆ ಹಣ ಬಿಡುಗಡೆ ಆಗುವುದಾಗಿ ತಿಳಿಸುತ್ತಲೆ ಇದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ನರ್ಸಿಂಗ್‌ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಕೊರೋನಾ ಯೋಧರಿಗೆ ಇನ್ನೂ 6 ತಿಂಗಳು ರಿಸ್ಕ್‌ ಭತ್ಯೆ: ಸಚಿವ ಸುಧಾಕರ್‌

ಕೋವಿಡ್‌ ಮೊದಲ ಅವಧಿಯಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದವರಿಗೆ ಭತ್ಯೆ ನೀಡಲಾಗಿದೆ. ಎರಡನೇ ಅವಧಿಯಲ್ಲೂ ನೇಮಕವಾದವರಿಗೆ ಭತ್ಯೆ ಕೊಡಲಾಗಿದೆ. ಆದರೆ, ನಮಗೆ ಮಾತ್ರ ಪ್ರೋತ್ಸಾಹ ಧನ ನೀಡಲಾಗಿಲ್ಲ. ಗುತ್ತಿಗೆ ನೌಕರರನ್ನು ಕಿಮ್ಸ್‌ನಲ್ಲಿ ವಿಲೀನ ಮಾಡಿಕೊಳ್ಳುವಂತೆ ಮನವಿ ನೀಡಿದರೆ ಅದೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ 15-20 ವರ್ಷಗಳಿಂದ ಕಿಮ್ಸ್‌ನಲ್ಲಿ ದುಡಿಯುತ್ತಿದ್ದರೂ ಉದ್ಯೋಗ ಭದ್ರತೆಯೂ ಇಲ್ಲದಂತಾಗಿದೆ ಎಂದು ಗುತ್ತಿಗೆ ನೌಕರರು ಬೇಸರ ವ್ಯಕ್ತಪಡಿಸಿದರು.

ಕಿಮ್ಸ್‌ನಲ್ಲಿ ಈಗ ಹೆಚ್ಚಾಗಿ ಯಾವುದೆ ನರ್ಸಿಂಗ್‌ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ ಕೆಲಸ ನಿರ್ವಹಿಸುತ್ತಿಲ್ಲ. ಈಚೆಗೆ ಎಮರ್ಜೆನ್ಸಿ, ಜನರಲ್‌ ವಾರ್ಡ್‌ಗಳಲ್ಲಿ ದಾಖಲಾಗಿದ್ದವರಿಗೆ ಹೆಚ್ಚಿನ ಚಿಕಿತ್ಸೆ ವೇಳೆ ಕೋವಿಡ್‌ ದೃಢಪಟ್ಟಿದೆ. ಹೀಗಾಗಿ ಈಗಲೂ ನಮಗೆ ಕೋವಿಡ್‌ ಹಾಗೂ ಅದಕ್ಕಿಂತ ಹೆಚ್ಚಾಗಿ ಬ್ಲ್ಯಾಕ್‌ ಫಂಗಸ್‌ ಭಯವಿದೆ. ಇಷ್ಟು ಆತಂಕದ ನಡುವೆಯೂ ಸರ್ಕಾರ ಪ್ರೋತ್ಸಾಹಧನ ಘೋಷಿಸಿ ಬಿಡುಗಡೆ ಮಾಡದಿರುವುದು ಬೇಸರ ಮೂಡಿಸಿದೆ. ಮೂರನೆ ಅಲೆ ಬಂದ ಮೇಲಾದರೂ ನಮಗೆ ಹಣ ಕೊಡುತ್ತಾರಾ ನೋಡಬೇಕು ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಿದ್ದಾರೆ.
 

Latest Videos
Follow Us:
Download App:
  • android
  • ios