ಗ್ರಾಮೀಣ ಕುಡಿಯುವ ನೀರು ಸಮಸ್ಯೆ ಬಗೆಹರಿಸಿ: ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ತಾಕೀತು
ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ತಾಲೂಕುಗಳಲ್ಲಿ ಹೋಬಳಿವಾರು ನೀರಿನ ಸಮಸ್ಯೆ ಇರುವ ಹಳ್ಳಿಗಳ ಪಟ್ಟಿಮಾಡಿ ಸಮಸ್ಯೆಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಾಕೀತು ಮಾಡಿದರು.
ಶಿವಮೊಗ್ಗ (ಜೂ.04): ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದು, ತಾಲೂಕುಗಳಲ್ಲಿ ಹೋಬಳಿವಾರು ನೀರಿನ ಸಮಸ್ಯೆ ಇರುವ ಹಳ್ಳಿಗಳ ಪಟ್ಟಿಮಾಡಿ ಸಮಸ್ಯೆಯನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಾಕೀತು ಮಾಡಿದರು. ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಪಂ ಸಿಇಒ ಅವರು ಸಮಸ್ಯಾತ್ಮಕ ಹಳ್ಳಿಗಳ ವರದಿ ಸಿದ್ಧಪಡಿಸಿ ಕುಡಿಯುವ ನೀರಿಗೆ ಕಿಂಚಿತ್ತೂ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮಳೆ ಹಾನಿ ಸಂಭವಿಸಿ ಮನೆ- ಜಾನುವಾರು- ಜೀವ ಹಾನಿ ಆದಾಗ ಅಧಿಕಾರಿಗಳು ಮಹಜರು ಮಾಡುವ ಸಂದರ್ಭ ಮಾನವೀಯತೆ ತೋರಬೇಕು. ಹಾನಿ ಸಮರ್ಪಕವಾಗಿ ನಿರ್ಣಯಿಸಿ ಸೂಕ್ತ ಪರಿಹಾರ ನೀಡಬೇಕು. ಕುಡಿಯುವ ನೀರು, ಮಳೆ ಅಥವಾ ಬೆಳೆ ಹಾನಿಗೆ ಸೂಕ್ತ ಪರಿಹಾರ, ಶಾಲಾ ಮಕ್ಕಳ ಕೊಠಡಿಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ಸೇರಿದಂತೆ ಜನರಿಗೆ ಅತಿ ಅವಶ್ಯಕವಾಗಿ ಬೇಕಾದ ಸೌಲಭ್ಯಗಳು, ಪರಿಹಾರ ಕುರಿತು ಹೆಚ್ಚಿನ ಗಮನಹರಿಸಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳಲ್ಲಿ ಅಗತ್ಯ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪಟ್ಟಿಮಾಡಿ ವರದಿ ನೀಡಬೇಕು. ಗ್ಯಾರಂಟಿ ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಹಲವು ಸವಾಲುಗಳು!
ಎಂಜಿನಿಯರ್‌ಗಳ ತನಿಖೆ ಮಾಡಿ: ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಸುಮಾರು .250 ಕೋಟಿ ಕಾಮಗಾರಿ ಕೈಗೊಳ್ಳಲಾಗಿದ್ದರೂ ಇದುವರೆಗೆ ಒಂದು ಹನಿ ನೀರು ಬಂದಿಲ್ಲ. ಈ ಕುರಿತು ಸಂಬಂಧಿಸಿದ ಎಂಜಿನಿಯರ್, ಅಧಿಕಾರಿಗಳ ವಿರುದ್ದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಅಂಬ್ಲಿಗೊಳ ಜಲಾಶಯದಲ್ಲಿ ಡೆಡ್ ಸ್ಟೋರೇಜ್‌ಗಿಂತ ಕಡಿಮೆ ನೀರು ಇದೆ. ಕುಡಿಯುವ ನೀರು ಬಿಟ್ಟು ಬೇರೆ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ. ಆದರೂ ಮುಳಗಡೆ ಕ್ಷೇತ್ರವಾದ ಸಾಗರಕ್ಕೆ ನೀರು ಕೊಡದೇ ಶಿಕಾರಿಪುರಕ್ಕೆ ನೀರು ನೀಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಡಯಾಲಿಸಿಸ್ ಮೆಷಿನ್ ಕೊಡಿ: ಸಾಗರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 8 ಡಯಾಲಿಸಿಸ್ ಮಷೀನ್ ಕೆಲಸ ಮಾಡುತ್ತಿಲ್ಲ. ಅನುದಾನವಿದ್ದರೂ ಬಳಕೆ ಆಗುತ್ತಿಲ್ಲ. ಇದರಿಂದ ಬಡವರಿಗೆ ತುಂಬಾ ಅನಾನುಕೂಲವಾಗುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಬಡವರೇ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ಹೆಚ್ಚುಕಮ್ಮಿಯಾದರೆ ಅವರ ಜೀವಕ್ಕೆ ಹೊಣೆ ಯಾರು? ಬಡವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನಿಡುವಂತ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು.
ಈ ಸಂಬಂಧ ಮಾತನಾಡಿದ ಸಚಿವ ಮಧು ಬಂಗಾರಪ್ಪ ಜನರಿಕ್ ಮಳಿಗೆಯಲ್ಲಿ ಔಷಧಿಗಳು ಲಭ್ಯವಿಲ್ಲ. ಡಯಾಲಿಸಿಸ್ ಮಷೀನ್, ಜನರಿಕ್ ಔಷಧಿ ಹಾಗೂ ಜನರಿಗೆ ಏನು ತ್ವರಿತವಾಗಿ ಅವಶ್ಯಕತೆಗಳಿವೆ ಎಂಬುದರ ಕುರಿತು ಬುಧವಾರದ ಒಳಗೆ ವರದಿ ನೀಡುವಂತೆ ಡಿಎಚ್‌ಒಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಡಯಾಲಿಸಿಸ್, 108 ಆಂಬುಲೆನ್ಸ್ ಸಮಸ್ಯೆ ಇದೆ, ಜನೆರಿಕ್ ಔಷಧಿಗಳು ಬೇಡಿಕೆಗೆ ತಕ್ಕಂತೆ ಲಭ್ಯವಾಗುತ್ತಿಲ್ಲ ಹಾಗೂ ಡ್ರಗ್ ಲಾಜಿಸ್ಟಿಕ್ ಸಹ ಬೇಡಿಕೆ ಮತ್ತು ಸರಬರಾಜು ವ್ಯತ್ಯಾಸವಾಗುತ್ತಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಅಧಿಕಾರಿ ಶಿವಶಂಕರರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಗ್ರಾಮಗಳಿಗೆ ಹೆಚಿನ ಬಸ್ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕೊರತೆ ಇದೆ. ಈ ಬಗ್ಗೆ ಜನರು ಹಲವಾರು ಬಾರಿ ಅಹವಾಲು ನೀಡಿದ್ದಾರೆ. ಹೆಚ್ಚುವರಿ ಬಸ್ ಅವಶ್ಯಕತೆ ಇರುವ ಸ್ಥಳಗಳ ಹಾಗೂ ರೂಟ್ ಎಕ್ಸೆಟನ್ಶನ್ ಬಗ್ಗೆ ಪಟ್ಟಿಮಾಡಿ ನೀಡುವಂತೆ ತಿಳಿಸಿದರು. ಈ ವೇಳೆ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ತಮ್ಮ ಕ್ಷೇತ್ರದಲ್ಲೂ ಬಸ್ ಸಮಸ್ಯೆ ಇದೆ. ಅಧಿಕಾರಿಗಳ ರೂಟ್ ಮ್ಯಾಪ್ ಪ್ರಕಾರ ಬಸ್ ಸಂಚಾರ ಮಾಡುತ್ತಿದ್ದಾರೆ. ಜನರು ರೂಟ್ ಎಕ್ಸೆಟನ್ಶನ್ ಬಗ್ಗೆ ಕೇಳುತ್ತಿದ್ದಾರೆ. ಒಂದೆರಡು ಹಳ್ಳಿಗಳಿಗೆ ಬಸ್ ಹೋಗುವ ಮೂಲಕ ರೂಟ್ ಎಕ್ಸೆ$್ಟನ್ಶನ್ ಮಾಡುವಂತೆ ತಿಳಿಸಿದರು. ಜಿಲ್ಲಧಿಕಾರಿ ಮಾತನಾಡಿ, ಜಿಲ್ಲೆಗೆ ಸುಮಾರು 50 ಬಸ್ ಅವಶ್ಯಕತೆ ಇದೆ. ಕೆಎಸ್‌ಆರ್‌ಟಿಸಿ ಡಿಸಿ ಅವರಿಂದ ಪಟ್ಟಿತರಿಸಿ ಹೆಚ್ಚುವರಿ ಬೇಡಿಕೆ ಇರುವ, ರೂಟ್ ಎಕ್ಸೆಟನ್ಶನ್ ಬಗ್ಗೆ ಸಚಿವರಿಗೆ ವರದಿ ಸಲ್ಲಿಸಲಾಗುವುದು ಎಂದರು.
ಕೇಂದ್ರದ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ: ಸಂಸದ ಮುನಿಸ್ವಾಮಿ
ಶಿಕ್ಷಕರನ್ನು ನಿಯೋಜಿಸಿ: ಜಿಲ್ಲೆಯಲ್ಲಿ 2818 ಸರ್ಕಾರಿ ಶಾಲೆಗಳಿವೆ. ಇದರಲ್ಲಿ ಒಟ್ಟು 136 ಶಾಲೆಗಳಿಗೆ ಒಬ್ಬ ಶಿಕ್ಷಕರೂ ಇಲ್ಲ. ಸಾಗರ ತಾಲ್ಲೂಕಿನಲ್ಲೇ 52 ಶಾಲೆಯಲ್ಲಿ ಶಿಕ್ಷಕರಿಲ್ಲ. ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈ ಕುರಿತು ಡಿಡಿಪಿಐ ಹೆಚ್ಚಿನ ಗಮನ ಹರಿಸಬೇಕು. ಮುಂಬರುವ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಈ ಪ್ರದೇಶಗಳಿಗೆ ಶಿಕ್ಷಕರು ವರ್ಗಾವಣೆ ಆಗುವಂತೆ, ಇತರೆಡೆ ನಿಯೋಜನೆಗೊಂಡ ಶಿಕ್ಷಕರನ್ನು ಇಲ್ಲಿ ನಿಯೋಜಿಸುವಂತೆ ಹಾಗೂ ಅತಿಥಿ ಶಿಕ್ಷಕರನ್ನು ಇಲ್ಲಿ ನಿಯೋಜಿಸುವ ಮೂಲಕ ಇಲ್ಲಿ ಶಿಕ್ಷಕರನ್ನು ನೇಮಿಸಿ ಶಾಲೆಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು.