ಬೆಳಗಾವಿ [ ಆ.12]:  ನಾವ್‌ ಬದುಕ್ತೇವ್‌ ಎಂಬ ಭರವಸೆಯೇ ಇರ್ಲಿಲ್ಲ.. ನಮ್‌ ಋುಣಾ ಮುಗಿತು ಅಂದ್ಕೊಂಡಿದ್ವಿ.. ದೇವ್ರ ಬಂದ್ಹಾಂಗ್‌ ಬಂದ್‌ ನಮ್‌ ಜೀವಾ ಉಳಿಸಿದ್ರು. ಈ ಸೈನಿ​ಕ​ರ್ಗಿ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮಿ ರೀ..!

ಇದು ಪ್ರವಾಹದ ನಡುವೆ ಸಿಕ್ಕಿ ನಲುಗಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಸಂತ್ರಸ್ತರ ಅಂತಃಕರಣದ ಮಾತು. ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ಪಕ್ಕದ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬಿಟ್ಟಅಪಾರ ನೀರು ಕೃಷ್ಣಾ ಒಡಲು ಉಕ್ಕಿ ಹರಿದು ಭಾರೀ ಪ್ರಮಾ​ಣ​ದಲ್ಲಿ ಸೃಷ್ಟಿ​ಸಿದ್ದ ಪ್ರವಾ​ಹ​ದಲ್ಲಿ ಸಿಲು​ಕಿದ್ದ ದರೂರ ಗ್ರಾಮ​ಸ್ಥರು ಬುದುಕುವ ಆಸೆ​ಯನ್ನೇ ಬಿಟ್ಟಿ​ದ್ದರು. ಇನ್ನೂ ನಮ್ಮ ಜೀವನ ಮುಗಿದೇ ಹೋಯಿತು ಎನ್ನು​ಷ್ಟ​ರ​ಲ್ಲಿ 13 ಜನ ಗ್ರಾಮ​ಸ್ಥ​ರನ್ನು ಭಾನು​ವಾರ ಸೈನಿ​ಕರು ಕಾಪಾಡಿ ಹೊರ​ತಂದಿ​ದ್ದರು. ಆಗ ಬದು​ಕಿತು ಬಡ​ಜೀವ ಎಂದು ಸಂತ್ರ​ಸ್ತರು ನಿಟ್ಟು​ಸಿರು ಬಿಟ್ಟರು. ಸೇನಾ ಕಾಪ್ಟರ್‌ ಮೂಲಕ ಅಥಣಿ ಸುತ್ತಮುತ್ತ ನಡೆದ ರಕ್ಷಣಾ ಕಾರ್ಯಾಚರಣೆಯ ಸಾಹಸಮಯ ದೃಶ್ಯಗಳನ್ನು ಸುವರ್ಣ ನ್ಯೂಸ್‌ ನೇರ ಪ್ರಸಾರ ಮಾಡಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2 ದಿನಗಳಿಂದ ಸಾಹಸ:  ಕೃಷ್ಣಾ ನದಿ ನೀರಿನ ಪ್ರವಾಹದಿಂದ ಜಲಾವೃತವಾದ ಅಥಣಿ, ರಾಯಬಾಗ, ಗೋಕಾಕ, ಚಿಕ್ಕೋಡಿ, ಕಾಗವಾಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಳೆದೆರಡು ದಿನಗಳು ಪ್ರವಾಹದಲ್ಲಿ ಸಿಲುಕಿರುವವರಿಗೆ ಅಗತ್ಯ ವಸ್ತುಗಳು ಬಟ್ಟೆಜೊತೆ ತಿಂಡಿ- ತಿನಿಸುಗಳ ಸರಬರಾಜನ್ನು ಭಾರತೀಯ ವಾಯು ಸೇನೆ ಮಾಡುತ್ತಿದೆ. 

ಪ್ರವಾಹಕ್ಕೀಡಾದ ಗ್ರಾಮಗಳಲ್ಲಿನ ಜನ, ಜಾನುವಾರಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ವಾಯುಸೇನೆ ಚೇತಕ್‌, ಅಡ್ವಾನ್ಸ್‌ಡ್‌ ಲೈಟ್‌ ಹಾಗೂ ಎಂಐ 17 ಮೂರು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯ ಹಾಗೂ ಆಹಾರ, ನೀರು ಪೂರೈಕೆ ಕಾರ್ಯ ನಡೆದಿದೆ. ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್‌ನಲ್ಲಿ ರಕ್ಷಣೆ ಮಾಡಿದ ವಾಯುಸೇನೆ ಅಧಿಕಾರಿಗಳು, ನಂತರ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆತರುವ ಕಾರ್ಯ ಮಾಡಿದ್ದಾರೆ.