ಬೆಂಗಳೂರು(ಮಾ.10): ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಾರ್ವಜನಿಕರೊಬ್ಬರು ನೀಡಿದ ದೂರಿನ ಮೇರೆಗೆ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಎಚ್‌ಬಿಆರ್‌ ಲೇಔಟ್‌ನ ಯಾಸಿನ್‌ ನಗರ ನಿವಾಸಿ ರೋಷನ್‌ ಜಮೀರ್‌(36) ಬಂಧಿತ. ಆರೋಪಿ ಎಚ್‌ಬಿಆರ್‌ ಲೇಔಟ್‌ನಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ಗಾಂಜಾ ಸೇವನೆ ಮಾಡುತ್ತಿದ್ದ. ಅದನ್ನು ಗಮನಿಸಿದ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿಕೊಂಡು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಈ ಸಂಬಂಧ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಸಾಮಾಜಿಕ ಜಾಲತಾಣ ವಿಭಾಗದ ಅಧಿಕಾರಿಗಳು ಕೆ.ಜಿ.ಹಳ್ಳಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗೆ ನೋಟಿಸ್‌ ನೀಡಿ ಕರೆಸಿಕೊಂಡು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು. ಹೀಗಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಹಾಗೆಯೇ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಅಥವಾ ಮಾಹಿತಿ ಇದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್‌ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.