Kukke Subrahmanya : ಕುಕ್ಕೆ ದೇವಳದಲ್ಲಿ ಸ್ಮೃತಿ ಇರಾನಿ ಪಂಚಾಮೃತ ಮಹಾಭಿಷೇಕ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಮುಂಜಾನೆ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಸಚಿವರು, ಆರಂಭದಲ್ಲಿ ಸಂಕಲ್ಪ ನೆರವೇರಿಸಿದರು
ಸುಬ್ರಹ್ಮಣ್ಯ (ಡಿ.27) : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಂಗಳವಾರ ಮುಂಜಾನೆ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಸಚಿವರು, ಆರಂಭದಲ್ಲಿ ಸಂಕಲ್ಪ ನೆರವೇರಿಸಿದರು. ಬಳಿಕ ದೇವರ ದರ್ಶನ ಪಡೆದು ಪಂಚಾಮೃತ ಮಹಾಭಿಷೇಕ ಸೇವೆಯನ್ನು ಸಮರ್ಪಿಸಿದರು. ಮಧ್ಯಾಹ್ನ ದೇವರ ಮಹಾಪೂಜೆ ವೀಕ್ಷಿಸಿ ಮಹಾಪೂಜಾ ಸೇವೆ ನೆರವೇರಿಸಿದರು. ಬಳಿಕ ಪ್ರಾರ್ಥನೆ ಸೇವೆ ನಡೆಸಿ ತನ್ನ ಅಭೀಷ್ಠೆಗಳನ್ನು ದೇವರಲ್ಲಿ ನಿವೇದಿಸಿದರು. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಸಚಿವರಿಗೆ ಶಾಲು ಮತ್ತು ದೇವರ ಮಹಾಪ್ರಸಾದ ನೀಡಿ ಹರಸಿದರು.
ಗೌರವಾರ್ಪಣೆ: ನಂತರ ಶ್ರೀ ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು. ದೇವಳದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದರು. ಆಡಳಿತ ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ದೇವರ ಮಹಾಪ್ರಸಾದ ನೀಡಿ ಗೌರವಿಸಿದರು. ಇದರೊಂದಿಗೆ ಬ್ರಹ್ಮರಥ ಎಳೆದ ಪವಿತ್ರ ಬೆತ್ತವನ್ನು ಸಚಿವರಿಗೆ ನೀಡಿದರು. ಬಳಿಕ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದ ಸಚಿವರು, ದರುಶನ ಪಡೆದು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.
Dharmasthala Laksha Deepotsava: ಧಾರ್ಮಿಕ ಮೌಲ್ಯಗಳಿಂದ ಅಭಿವೃದ್ಧಿ ಸಾಧ್ಯ; ಸ್ಮೃತಿ ಇರಾನಿ
ಕುಕ್ಕೆ ಕ್ಷೇತ್ರದಲ್ಲಿ ಸೇವೆ ನೆರವೇರಿಸಲು ಸಲುವಾಗಿಯೇ ದೆಹಲಿಯಿಂದ ಆಗಮಿಸಿದ ಸಚಿವರು ಬೆಳಗ್ಗೆ 9ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ಸಂಕಲ್ಪ ವಿಧಿ ವಿಧಾನ ನೆರವೇರಿಸಿ ಪಂಚಾಮೃತ ಮಹಾಭಿಷೇಕ ಸೇವೆ ನೆರವೇರಿಸಿದರು. ಸುಮಾರು 1 ಗಂಟೆಗೂ ಅಧಿಕ ಕಾಲ ದೇವರ ಪಂಚಾಮೃತ ಮಹಾಭಿಷೇಕ ವೀಕ್ಷಿಸಿದರು. ಬಳಿಕ ಸಂವಾದದಲ್ಲಿ ಭಾಗವಹಿಸಿ ಮತ್ತೆ ದೇವಳಕ್ಕೆ ಬಂದು ಮಹಾಪೂಜೆ ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ಸಚಿವರೊಂದಿಗೆ ಅವರ ಪತಿ ಜುಬಿನ್ ಇರಾನಿ ಮತ್ತು ಮಗಳು ಜೊಯಿಸ್, ಆಂಧ್ರ ಪ್ರದೇಶದ ಬಿಜೆಪಿ ವಕ್ತಾರ ತಿರುಪತಿ ಭಾನುಪ್ರಸಾದ್ ಆಗಮಿಸಿದ್ದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್, ಪ್ರಸನ್ನದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ ವಿ. ಭಟ್, ಲೋಕೇಶ್ ಮುಂಡುಕಜೆ, ಎಇಒ ಪುಷ್ಪಲತಾ ರಾವ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯಕುಮಾರ್, ಶಿಷ್ಠಾಚಾರ ಅಧಿಕಾರಿ ಜಯರಾಂ ರಾವ್, ಶಿಷ್ಟಾಚಾರ ವಿಭಾಗದ ಕೆ.ಎಂ.ಗೋಪಿನಾಥ್ ನಂಬೀಶನ್, ಪ್ರಮೋದ್ ಕುಮಾರ್ ಎಸ್., ನವೀನ್ ಉಪಸ್ಥಿತರಿದ್ದರು. ಕುಣಿಯಲಷ್ಟೇ ಸ್ಮೃತಿ ಅಮೇಥಿಗೆ ಬರ್ತಾರೆ: ಕಾಂಗ್ರೆಸ್ ನಾಯಕನಿಂದ ವಿವಾದಿತ ಹೇಳಿಕೆ