ಬೆಂಗಳೂರು: ಶಿವಾನಂದ ಫ್ಲೈಓವರ್ ಆ.15ರ ವೇಳಗೆ ಸಿದ್ಧ
* ಹೈಕೋರ್ಟ್‌ನಲ್ಲಿ ಅನುಮತಿ ದೊರೆತ ಬೆನ್ನಲ್ಲೆ ಕಾಮಗಾರಿ ಮತ್ತೆ ಶುರು
* ಶೇ.10 ಕಾಮಗಾರಿ ಬಾಕಿ
* 30 ದಿನದಲ್ಲಿ ಪೂರ್ಣ ಗುರಿ
ಬೆಂಗಳೂರು(ಜು.10): ನಗರದ ಶಿವಾನಂದ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಹಸಿರು ನಿಶಾನೆ ನೀಡಿದ ಹಿನ್ನೆಲೆಯಲ್ಲಿ ಶನಿವಾರದಿಂದ ಕಾಮಗಾರಿ ಮುಂದುವರಿಸಲಾಗಿದ್ದು, ಆಗಸ್ಟ್ 15ರ ವೇಳೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಪಾಲಿಕೆ ಉದ್ದೇಶಿಸಿದೆ.
ಶೇಷಾದ್ರಿಪುರ ರೈಲ್ವೆ ಅಂಡರ್ ಪಾಸ್ ಕಡೆಯ ಡೌನ್ ರಾರಯಂಪ್ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಹೈಕೋರ್ಚ್ ಮೊರೆ ಹೋದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದೀಗ ತಜ್ಞರಿಂದ ವರದಿ ಪಡೆದ ಹೈಕೋರ್ಚ್ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿ ಭರದಿಂದ ಸಾಗಿದೆ.
ಗ್ರೇಡ್ ಸಪರೇಟರ್ ಸೇರಿ ಒಟ್ಟಾರೆ 493 ಮೀ. ಉದ್ದದ ಮೇಲ್ಸೇತುವೆಯ ನಿರ್ಮಾಣ ಕಾರ್ಯ ಶೇ.90 ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್‌ರಾರಯಂಪ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು 30 ದಿನ ಬೇಕಾಗಲಿದೆ. ಈ ಅವಧಿಯಲ್ಲಿ ಮಳೆ ಬಂದರೂ ಒಂದು ವಾರ ತಡವಾಗಬಹುದು. ಆದರೆ, ಆ.15ರ ವೇಳೆಗೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.
Shivananda Circle flyover ಕಾಮಗಾರಿ ಪೂರ್ಣಕ್ಕೆ ಹೈಕೋರ್ಟ್ ಒಪ್ಪಿಗೆ
5 ವರ್ಷ ವಿಳಂಬ
ಜೂನ್ 2017ರಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಕೇವಲ 9 ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಮರಗಳ ತೆರವು, ಭೂಸ್ವಾಧೀನ, ಮೇಲ್ಸೇತುವೆಯ ವಿಸ್ತೀರ್ಣ ಹೆಚ್ಚಳ ಹಾಗೂ ಗುತ್ತಿಗೆದಾರರಿಂದ ಕಾಮಗಾರಿ ದರ ಪರಿಷ್ಕರಣೆ ಸೇರಿ ವಿವಿಧ ಕಾರಣಗಳಿಂದ ನಿರ್ಮಾಣ ಕಾರ್ಯ ಐದು ವರ್ಷ ವಿಳಂಬವಾಗಿದೆ.
ವಿನ್ಯಾಸ ಬದಲು: 40 ಕೋಟಿ ಉಳಿತಾಯ
ಶೇಷಾದ್ರಿಪುರ ಕಡೆಯ ಡೌನ್ ರಾರಯಂಪ್ ಶೇ.5.5 ರಷ್ಟುಇಳಿಜಾರು ನಿರ್ಮಿಸಲು ಯೋಜನೆ ನಿರ್ಮಿಸಲಾಗಿತ್ತು. ಇದರಿಂದ ಭೂಸ್ವಾಧೀನಕ್ಕೆ ಸ್ಥಳೀಯರಿಂದ .40 ಕೋಟಿಗೆ ಬೇಡಿಕೆ ಬಂದಿತು. ಇಷ್ಟೊಂದು ವೆಚ್ಚ ಪಾವತಿಸಲಾಗದೇ ಬಿಬಿಎಂಪಿ ಡೌನ್‌ರಾರಯಂಪ್‌ನ ವಿನ್ಯಾಸ ಬದಲಿಸಲಾಯಿತು. ಇದನ್ನು ಪ್ರಶ್ನಿಸಿ ಸಾರ್ವಜನಿಕರು ಹೈಕೋರ್ಚ್ ಮೆಟ್ಟಿಲೇರಿದ್ದರು. ಕೋರ್ಚ್ ಇದೀಗ ವಿನ್ಯಾಸ ಬದಲಾವಣೆಯ ಬಗ್ಗೆ ಐಐಎಸ್‌ಸಿ ತಜ್ಞರಿಂದ ವರದಿ ಪಡೆದು ಇದೀಗ ಮೇಲ್ಸೇತುವೆ ಕಾಮಗಾರಿ ಮುಂದುವರೆಸಲು ನಿರ್ದೇಶಿಸಿದೆ.
ವೆಚ್ಚ 19ರಿಂದ 60 ಕೋಟಿಗೆ ಏರಿಕೆ
ಬಿಬಿಎಂಪಿಯು 2017ರಲ್ಲಿ ಯೋಜನೆ ರೂಪಿಸಿದಂತೆ 326 ಮೀ. ಉದ್ದದ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ .19.85 ಕೊಟಿ ವೆಚ್ಚ ನಿಗದಿಗೊಳಿಸಲಾಗಿತ್ತು. ತದನಂತರ ಕರ್ನಾಟಕ ಚಲನಚಿತ್ರ ವಾಜ್ಯ ಮಂಡಳಿ ಹಾಗೂ ಇತರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರೇಡ್ ಸಪರೇಟರ್‌ನ ಉದ್ದವನ್ನು 493 ಮೀ.ಗೆ ವಿಸ್ತರಿಸಲಾಯಿತು. ಇದರೊಂದಿಗೆ ಕಂಬಗಳ ಸಂಖ್ಯೆಯನ್ನು 6ರಿಂದ 16ಕ್ಕೆ ಹೆಚ್ಚಿಸಲಾಯಿತು. ಆಗ ಯೋಜನಾ ವೆಚ್ಚವನ್ನು 2018ರ ಜುಲೈನಲ್ಲಿ .42.45 ಕೋಟಿಗೆ ಹೆಚ್ಚಿಸಲಾಯಿತು. ಪುನಃ ವಿವಿಧ ಗಡುವುಗಳ ವಿಸ್ತರಣೆಯ ನಂತರವೂ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸಾಮಗ್ರಿಗಳ ಬೆಲೆ ಏರಿಕೆಯನ್ನು ಪರಿಗಣಿಸಿ ಮತ್ತೊಮ್ಮೆ ಯೋಜನಾ ವೆಚ್ಚವನ್ನು .60 ಕೋಟಿಗೆ ಪರಿಷ್ಕರಿಸಲಾಗಿದೆ.