ಶಿವಾನಂದ ವೃತ್ತ ಮೇಲ್ಸೇತುವೆ ಪೂರ್ಣಕ್ಕೆ ಹೈಕೋರ್ಚ್‌ ಒಪ್ಪಿಗೆ ವಿಭಾಗೀಯ ನ್ಯಾಯಪೀಠದಿಂದ ಅನುಮತಿ

ಬೆಂಗಳೂರು (ಜು.9): ನಗರದ ಶಿವಾನಂದ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಹೈಕೋರ್ಚ್‌ ಹಸಿರು ನಿಶಾನೆ ತೋರಿದೆ. ಮೇಲ್ಸೇತುವೆ ನಿರ್ಮಾಣ ಯೋಜನೆ ಪ್ರಶ್ನಿಸಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಮತಿ ನೀಡಿದೆ. ಇದೇ ವೇಳೆ ಮೇಲ್ಸೇತುವೆಯ ಇಳಿಜಾರು ಪ್ರಮಾಣವನ್ನು (ಶೇಷಾದ್ರಿಪುರ ರಸ್ತೆ ಕಡೆಯ) ಶೇ.6.66ರಷ್ಟುಹೆಚ್ಚಿಸಲು ಅನುಮತಿ ಕೋರಿ ಬಿಬಿಎಂಪಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು?: ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿ ಸರ್ಕಾರ 2017ರ ಜೂ.24ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ.ಪಿ.ಮಹೇಶ್‌ ಹಾಗೂ ಇತರರು 2017ರ ಅಕ್ಟೋಬರ್‌ನಲ್ಲಿ ಹೈಕೋರ್ಚ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಾಮಗಾರಿಗೆ ತಡೆ ನೀಡಲು 2018ರ ಜ.8ರಂದು ಹೈಕೋರ್ಚ್‌ ನಿರಾಕರಿಸಿತ್ತು. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

Hebbal Flyover ಬಳಿ ಸಂಚಾರ ದಟ್ಟಣೆ ತಪ್ಪಿಸಲು ಇಂದಿನಿಂದ ಹೊಸ ನಿಯಮ

ಈ ಮಧ್ಯೆ 2022ರ ಜ.13ರಂದು ಬಿಬಿಎಂಪಿ ಆಯುಕ್ತರು ಮತ್ತು ಕಾರ್ಯಕಾರಿ ಎಂಜಿನಿಯರ್‌ (ಪ್ರಾಜೆಕ್ಟ್ ಸೆಂಟರ್‌-2) ಮಧ್ಯಂತರ ಅರ್ಜಿ ಸಲ್ಲಿಸಿ, ಶೇಷಾದ್ರಿಪುರ ಕಡೆಯ ಮೇಲ್ಸೇತುವೆ ಇಳಿಜಾರಿನ ಪ್ರಮಾಣವನ್ನು ಶೇ.6.66ರಷ್ಟುಹೆಚ್ಚಿಸಲು ಅನುಮತಿ ನೀಡುವಂತೆ ಕೋರಿದ್ದರು.

ಆದೇಶವೇನು?: ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಸಾರ್ವಜನಿಕ ಹಿತಾಸಕ್ತಿಯಿಂದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಶೇಷಾದ್ರಿಪುರ ಕಡೆಯ ಇಳಿಜಾರನ್ನು ಹೆಚ್ಚಿಸಲು ಬಿಬಿಎಂಪಿ ಅನುಮತಿ ಕೋರಿದೆ. ಭಾರತದ ಪ್ರತಿಷ್ಠಿತ ಸಂಸ್ಥೆಯ ಐಐಎಸ್ಸಿಯ ಪ್ರಾಧ್ಯಾಪಕರು ಸಹ ಸುರಕ್ಷತೆ ದೃಷ್ಟಿಯಿಂದ ಮೇಲ್ಸೇತುವೆ ಇಳಿಜಾರಿನ ಪ್ರಮಾಣ ಹೆಚ್ಚಿಸಬಹುದು ಎಂದು ವರದಿ ಸಲ್ಲಿಸಿದೆ. ಆದ್ದರಿಂದ ಐಐಎಸ್‌ಸಿಯ ವರದಿಯನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

2018ರಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು, ಈಗಾಗಲೇ ಶೇ.90ರಷ್ಟುಕಾರ್ಯ ಪೂರ್ಣಗೊಂಡಿದೆ. ಯೋಜನೆಗೆ ಭೂಮಿ ನೀಡಿರುವ ಭೂ ಮಾಲೀಕರು ಬಿಬಿಎಂಪಿ ಪ್ರಸ್ತಾವನೆ ಮಾಡಿರುವ ಟಿಡಿಆರ್‌ ಒಪ್ಪದೇ ಇರುವುದರಿಂದ ಭೂ ಸ್ವಾಧೀನ ಪೂರ್ಣಗೊಳಿಸಲು ಮತ್ತಷ್ಟುಸಮಯ ಬೇಕಾಗುತ್ತದೆ. ಆದರೆ, ನಗರದ ಹೃದಯ ಭಾಗದ ಜನ ಹಾಗೂ ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ನಗರಾಭಿವೃದ್ಧಿ ಇಲಾಖೆಗೆ ವಾರ್ಡ್ ಡಿಲಿಮಿಟೇಶನ್ ಸಲಹೆ ಸಲ್ಲಿಸಿದ ನಮ್ಮ ಬೆಂಗಳೂರು ಫೌಂಡೇಷನ್

ಕಾಮಗಾರಿ ವಿಳಂಬದಿಂದ ರಸ್ತೆ ಬಳಸುವ ವಾಹನದಾರರಿಗೆ ಸಮಸ್ಯೆ ಉಂಟಾಗುತ್ತದೆ ಹಾಗೂ ಯೋಜನೆಯ ವೆಚ್ಚ ಹೆಚ್ಚಾಗಲಿದೆ. ಆದ್ದರಿಂದ ಬಿಬಿಎಂಪಿಯ ಮಧ್ಯಂತರ ಅರ್ಜಿ ಪುರಸ್ಕರಿಸಿ ಇಳಿಜಾರಿನ ಪ್ರಮಾಣವನ್ನು ಶೆ.6.66ಕ್ಕೆ ಹೆಚ್ಚಿಸುವ ಮೂಲಕ ಬಾಕಿ ಉಳಿದಿರುವ ಮೇಲ್ಸೇತುವೆಯ ಶೇ.10ರಷ್ಟುಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಲಾಗುತ್ತಿದೆ ಎಂದು ಹೈಕೋರ್ಚ್‌ ಆದೇಶದಲ್ಲಿ ತಿಳಿಸಿದೆ.