ರಾಸಲೀಲೆ ಸಿಡಿ ಕೇಸ್‌: ಯುವತಿ ಪೋಷಕರಿಗೆ ಎಸ್‌ಐಟಿ ಹುಡುಕಾಟ

ಕಳೆದ ಮೂರು ದಿನಗಳಿಂದ ಮನೆಗೆ ಬಾರದ ಸಂತ್ರಸ್ತೆಯ ಕುಟುಂಬಸ್ಥರು| ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ| ಸಂತ್ರಸ್ತೆಯ ಕುಟುಂಬಸ್ಥರು ಸಂಪರ್ಕಕ್ಕೆ ಬಂದರೆ ಮಾಹಿತಿ ನೀಡುವುದಾಗಿ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ ಮನೆ ಮಾಲೀಕರು| 

SIT Offcials Serching for CD Case Victim Parents grg

ಬೆಳಗಾವಿ(ಮಾ.21): ಮಾಜಿ ಸಚಿವರೊಬ್ಬರ ರಾಸಲೀಲೆ ಸಿ.ಡಿ. ಬಹಿರಂಗ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದು, ಶನಿವಾರ ಬೆಳಗಾವಿ ನಗರಕ್ಕೆ ಆಗಮಿಸಿ ಯುವತಿ ಕುಟುಂಬಸ್ಥರು ವಾಸವಿರುವ ಮನೆಯ ಮಾಲೀಕರನ್ನು ವಿಚಾರಣೆ ನಡೆಸಿದ್ದಾರೆ.

"

ಇಲ್ಲಿನ ಕುವೆಂಪು ನಗರದಲ್ಲಿರುವ ಯುವತಿಯ ತಂದೆ, ತಾಯಿ ಹಾಗೂ ಸಹೋದರರು ವಾಸವಿದ್ದ ಬಾಡಿಗೆ ಮನೆಗೆ ತೆರಳಿದ ಡಿವೈಎಸ್‌ಪಿ. ಪಿ.ನಾಗಾರಾಜ್‌ ನೇತೃತ್ವದ ಐವರ ತಂಡ ಮನೆ ಮಾಲೀಕರ ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ಯಾರೆಲ್ಲ ಇದ್ದರು, ಎಷ್ಟು ವರ್ಷಗಳಿಂದ ಕುಟುಂಬ ಇಲ್ಲಿ ವಾಸವಿದೆ ಸೇರಿದಂತೆ ಇನ್ನಿತರ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಮೂರು ದಿನಗಳಿಂದ ಸಂತ್ರಸ್ತೆಯ ಕುಟುಂಬಸ್ಥರು ಮನೆಗೆ ಬಂದಿಲ್ಲ. ಎಲ್ಲಿ ಹೋಗಿದ್ದಾರೆ ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಸಂತ್ರಸ್ತೆಯ ಕುಟುಂಬಸ್ಥರು ಸಂಪರ್ಕಕ್ಕೆ ಬಂದರೆ ಮಾಹಿತಿ ನೀಡುವುದಾಗಿ ಮನೆ ಮಾಲೀಕರು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

‘ಸೀಡಿ ಗ್ಯಾಂಗ್‌’ನ ಬಗ್ಗೆ ಬಾಯ್ಬಿಟ್ಟ ಬಾಯ್‌ಫ್ರೆಂಡ್!‌

ಮಾ.16ರಂದು ಸಂತ್ರಸ್ತೆಯ ಪೋಷಕರು ಎಪಿಎಂಸಿ ಠಾಣೆಯಲ್ಲಿ ನಮ್ಮ ಪುತ್ರಿಯನ್ನು ಅಪಹರಿಸಿದ್ದಾರೆ. ಮಾನಸಿಕ ಕಿರುಕುಳ ನೀಡಿ ಅಶ್ಲೀಲ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣ ಬೆಳಗಾವಿಯಿಂದ ಬೆಂಗಳೂರಿನ ಆರ್‌.ಟಿ.ನಗರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಎಸ್‌ಐಟಿಗೆ ವರ್ಗಾವಣೆಗೊಂಡಿತ್ತು. ಈ ಹಿನ್ನೆಲೆ ಎಸ್‌ಐಟಿ ತಂಡ ಬೆಳಗಾವಿಗೆ ಆಗಮಿಸಿದೆ. ಆದರೆ ದೂರು ದಾಖಲಿಸಿದ್ದ ಸಂತ್ರಸ್ತೆಯ ಪೋಷಕರು ಬೆಳಗಾವಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕುಟುಂಬಸ್ಥರ ವಿಚಾರಣೆಗೆ ಆಗಮಿಸಿದ ಎಸ್‌ಐಟಿಗೆ ಅವರ ಸುಳಿವು ಪತ್ತೆಯಾಗಿಲ್ಲ.

ಜಾಮೀನು ಕೋರಿ ಲಕ್ಷ್ಮೇಪತಿ ಅರ್ಜಿ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಆರೋಪಿ ಲಕ್ಷ್ಮೇಪತಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ನಗರದ 91ನೇ ಸೆಷನ್ಸ್‌ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಲಕ್ಷ್ಮೇಪತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಮಾ.22ಕ್ಕೆ ಮುಂದೂಡಿದರು. ವಿಚಾರಣೆ ವೇಳೆ, ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಇಲ್ಲ. ಆದ್ದರಿಂದ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಇದನ್ನು ನಿರಾಕರಿಸಿದ ನ್ಯಾಯಾಧೀಶರು, ತನಿಖಾಧಿಕಾರಿಗಳ ವಾದ ಆಲಿಸಿದ ಬಳಿಕ ಮುಂದಿನ ಜಾಮೀನು ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿದರು.

ರಾಸಲೀಲೆ: ಯುವತಿ ಪರಿಚಯವಿಲ್ಲ, ಸಿಡಿ ನಕಲಿ ಎಂದ ರಮೇಶ್‌ ಜಾರಕಿಹೊಳಿ

ಶ್ರವಣ್‌ ಸೋದರ ಚೇತನ್‌ ಪತ್ತೆ

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ಆರೋಪಿ ಶ್ರವಣ್‌ ಸಹೋದರ ಚೇತನ್‌ ನಾಪತ್ತೆ ಪ್ರಕರಣ ಸಂಬಂಧ ಅವರ ಪೋಷಕರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ.
ತಮ್ಮ ಪುತ್ರ ಚೇತನ್‌ನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ಚೇತನ್‌ ತಂದೆ ಸೂರ್ಯ ಕುಮಾರ್‌ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ನ್ಯಾ.ಬಿ.ವಿ ನಾಗರತ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕಾಣೆಯಾಗಿರುವ ಚೇತನ್‌ ತಂದೆ ಪೀಠಕ್ಕೆ ಹೇಳಿಕೆ ನೀಡಿ, ತಮ್ಮ ಪುತ್ರ ಸಂಬಂಧಿಕರೊಂದಿಗೆ ತಿರುಪತಿಗೆ ಹೋಗಿದ್ದು, ನಮ್ಮನ್ನು ಸಂಪರ್ಕಿಸಿದ್ದಾನೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೀಠ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಚೇತನ್‌ನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿಲ್ಲ. ಅರ್ಜಿದಾರರ ಪರ ವಕೀಲರು ಆತನನ್ನು ಸಂಪರ್ಕಿಸಿದ್ದಾರೆ. ಅವರ ಸೂಚನೆ ಮೇರೆಗೆ ಯುವಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾನೆ ಎಂದು ತಿಳಿಸಿದ್ದರು. ವಾದ ಆಲಿಸಿದ ಪೀಠ, ಅರ್ಜಿ ಇತ್ಯರ್ಥಪಡಿಸಿತು.
 

Latest Videos
Follow Us:
Download App:
  • android
  • ios