ಬೆಂಗಳೂರು(ಮಾ.21): ಮಾಜಿ ಸಚಿವರ ಲೈಂಗಿಕ ಹಗರಣದ ಸಿ.ಡಿ. ಸ್ಫೋಟದ ಸಂಚಿನ ಕುರಿತು ನ್ಯಾಯಾಧೀಶರ ಸಮ್ಮುಖದಲ್ಲಿ ವಿವಾದಿತ ಯುವತಿಯ ಬಾಯ್‌ಫ್ರೆಂಡ್‌ ಎನ್ನಲಾದ ಬೀದರ್‌ ಜಿಲ್ಲೆಯ ಆಕಾಶ್‌ ತಲವಾಡೆ ಹೇಳಿಕೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ದಾಖಲಿಸಿಕೊಂಡಿದೆ. ರಾಸಲೀಲೆ ಸಿ.ಡಿ. ಬಹಿರಂಗದಲ್ಲಿ ಖಾಸಗಿ ಸುದ್ದಿವಾಹಿನಿ ಪತ್ರಕರ್ತರಾದ ನರೇಶ್‌ ಗೌಡ, ಶ್ರವಣ್‌, ಭವಿತ್‌ ಹಾಗೂ ಯುವತಿಯ ಸ್ನೇಹಿತರ ಪಾತ್ರದ ಬಗ್ಗೆ ಆಕಾಶ್‌ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಸಿ.ಡಿ. ಸ್ಫೋಟದ ಸಂಚಿನಲ್ಲಿ ಪಾಲ್ಗೊಂಡ ಶಂಕೆ ಮೇರೆಗೆ ಆಕಾಶ್‌ನನ್ನು ವಶಕ್ಕೆ ಪಡೆದಿರುವ ಎಸ್‌ಐಟಿ, ಬಳಿಕ ನಗರದ ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಸಿಆರ್‌ಪಿಸಿ 164ರಡಿ ಆತನ ಹೇಳಿಕೆ ದಾಖಲಿಸಿಕೊಂಡಿದೆ. ಮೂರು ದಿನಗಳ ಹಿಂದೆ ಸಿ.ಡಿ. ಸ್ಫೋಟದ ಮಾಸ್ಟರ್‌ ಮೈಂಡ್‌ ಎನ್ನಲಾದ ಪತ್ರಕರ್ತ ನರೇಶ್‌ ಗೌಡ ಹಾಗೂ ಭವಿತ್‌ ವಿಡಿಯೋ ಹೇಳಿಕೆ ನೀಡಿದ ಬೆನ್ನಲ್ಲೇ ನ್ಯಾಯಾಧೀಶರ ಮುಂದೆ ಆಕಾಶ್‌ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಗೋವಾ ಹೋಗಿದ್ದು ನಿಜ, ಹಣದ ವಿಚಾರ ಗೊತ್ತಿಲ್ಲ:

ಬೀದರ್‌ ಜಿಲ್ಲೆ ಭಾಲ್ಕಿ ತಾಲೂಕಿನ ಆಕಾಶ್‌, ಬೆಂಗಳೂರಿನಲ್ಲಿ ಸಾಕ್ಷ್ಯಚಿತ್ರಗಳ ತಯಾರಿಕೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಹಲವು ದಿನಗಳ ಹಿಂದೆ ಆತನಿಗೆ ವಿವಾದಿತ ಯುವತಿ ಪರಿಚಯವಾಗಿ ಬಳಿಕ ಪ್ರೇಮವಾಗಿತ್ತು. ಈ ಪ್ರೀತಿ ವಿಚಾರವು ಎರಡೂ ಕುಟುಂಬಗಳಿಗೆ ತಿಳಿದು ಮದುವೆ ಹಂತಕ್ಕೆ ಬಂದಿತ್ತು. ಅಷ್ಟರಲ್ಲಿ ಲೈಂಗಿಕ ವಿವಾದ ಬೆಳಕಿಗೆ ಬಂದು ಈ ಪ್ರೇಮ ಜೋಡಿಗೆ ಸಂಕಷ್ಟಎದುರಾಗಿದೆ. ಪೊಲೀಸರ ಬಂಧನ ಭೀತಿಯಿಂದ ಯುವತಿ ಜತೆ ತಪ್ಪಿಸಿಕೊಳ್ಳದೆ ಆಕಾಶ್‌ ಊರಿಗೆ ಮರಳಿದ್ದ ಎಂದು ಮೂಲಗಳು ಹೇಳಿವೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಗೆಳತಿ, ಬಳಿಕ ಪಿಆರ್‌ ಮಾಡುತ್ತಿರುವುದಾಗಿ ಹೇಳಿದ್ದಳು. ನನಗೆ ಅಧಿಕಾರಿಗಳು, ಸಚಿವರ ಪರಿಚಯವಿದೆ. ಒಬ್ಬ ಸಚಿವರು ನನಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗ ಸಿಕ್ಕಿದ ಬಳಿಕ ಮದುವೆ ಮಾಡಿಕೊಳ್ಳೋಣ ಎಂದಿದ್ದಳು. ಆದರೆ ಮಾ.1ರಂದು ಆರ್‌.ಟಿ.ನಗರದ ಸಮೀಪದ ಹೋಟೆಲ್‌ನಲ್ಲಿ ಅವಳ ಜೊತೆಗೆ ಕೆಲವರನ್ನು ನಾನು ಭೇಟಿಯಾಗಿದ್ದೆ. ನನಗೆ ಆ ಮುಂಚೆ ಅಲ್ಲಿದ್ದವರು ಪರಿಚಯವಿರಲಿಲ್ಲ. ಆ ಮೇಲೆ ಹೆಸರುಗಳು ಗೊತ್ತಾಯಿತು. ಚಾನಲ್‌ ರಿಪೋರ್ಟರ್‌ ಎಂದು ನರೇಶ್‌ ಗೌಡ, ಶ್ರವಣ್‌ ಪರಿಚಯ ಮಾಡಿಕೊಂಡರು ಎಂದು ಆಕಾಶ್‌ ಹೇಳಿದ್ದಾನೆ ಎನ್ನಲಾಗಿದೆ.

ಮಾ.1ರಂದು ರಾತ್ರಿ ನಮಗೆ ಗೋವಾಕ್ಕೆ ತೆರಳುವಂತೆ ಅವರು ಸೂಚಿಸಿದರು. ನಂತರ ಗೆಳತಿಯ ಪರಿಚಯದವರ ಮೂಲಕ ಗೋವಾದಲ್ಲಿ ಉಳಿಯಲು ಹೋಟೆಲ್‌ ರೂಮ್‌ ಬುಕ್‌ ಮಾಡಿಕೊಳ್ಳಲಾಯಿತು. ಮಾ.2ರಂದು ರಾತ್ರಿ ನಾವು ಬಸ್‌ ಹತ್ತಿ ಗೋವಾಕ್ಕೆ ಪ್ರಯಾಣಿಸಿದ್ದೆವು. ಆದರೆ ಅಷ್ಟೊತ್ತಿಗೆ ಮೀಡಿಯಾ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಗೆಳತಿಗೆ ಸಂಬಂಧಿಸಿದ ಯಾವುದೋ ವಿಡಿಯೋ ವೈರಲ್‌ ಆಗಿತ್ತು. ಇದರಿಂದ ನನಗೆ ನಿರಂತರವಾಗಿ ಕುಟುಂಬದವರು, ಸ್ನೇಹಿತರಿಂದ ಕರೆಗಳು ಬರುತ್ತಿದ್ದವು. ಈ ಬೆಳವಣಿಗೆಯಿಂದ ನನಗೆ ಆತಂಕ ಶುರುವಾಯಿತು. ನಾಲ್ಕು ದಿನ ಗೋವಾದಲ್ಲಿ ಉಳಿದಿದ್ದ ನಾವು, ಮಾ.6ರಂದು ಬೆಂಗಳೂರಿಗೆ ಮರಳಿದೆವು. ಬಸ್‌ ನಿಲ್ದಾಣದಿಂದಲೇ ನಾನು ಭಾಲ್ಕಿಗೆ ಮರಳಿದೆ. ಆಂಧ್ರಪ್ರದೇಶದ ಅನಂತಪುರಕ್ಕೆ ಕಾರಿನಲ್ಲಿ ನರೇಶ್‌ ಗೌಡ, ಶ್ರವಣ್‌ ಜತೆ ಗೆಳತಿ ತೆರಳಿದ್ದು ಗೊತ್ತಾಯಿತು. ಆನಂತರ ನಾನು ಅವರೊಂದಿಗೆ ಸಂಪರ್ಕದಲ್ಲಿ ಇಲ್ಲ. ಕೆಲವು ಬಾರಿ ಹಣದ ವಿಚಾರವನ್ನು ಅವರು ಚರ್ಚಿಸುತ್ತಿದ್ದರು. ಆ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ ಎಂದು ಆಕಾಶ್‌ ಹೇಳಿರುವುದಾಗಿ ತಿಳಿದು ಬಂದಿದೆ