ಬೆಂಗಳೂರು(ಮಾ.21): ‘ನನಗೆ ಯುವತಿ ಪರಿಚಯವಿಲ್ಲ. ಆ ಸೆಕ್ಸ್‌ ಸಿಡಿಯೇ ನಕಲಿ. ನಾನು ತಪ್ಪು ಮಾಡಿಲ್ಲ’ ಎಂದು ತಮ್ಮ ಲೈಂಗಿಕ ಹಗರಣದ ಕುರಿತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ಮುಂದೆ ಹೇಳಿಕೆ ನೀಡಿದ್ದಾರೆ.

ಇದುವರೆಗೆ ತನಿಖೆಯಲ್ಲಿ ಸಿ.ಡಿ. ಅಸಲಿ ಹಾಗೂ ಮಾಜಿ ಸಚಿವರಿಗೆ ವಿವಾದಿತ ಯುವತಿ ಪರಿಚಯವಿದ್ದಳು ಎಂಬುದಕ್ಕೆ ಪೂರಕವಾದ ಪುರಾವೆಗಳು ಲಭಿಸಿವೆ ಎನ್ನಲಾಗಿತ್ತು. ಇದರ ಆಧಾರದ ಮೇರೆಗೆ ಮುಂದಿನ ಹಂತದ ತನಿಖೆ ನಡೆಸಲು ಎಸ್‌ಐಟಿ ಯೋಜಿಸಿತ್ತು. ಆದರೆ ಮಾಜಿ ಸಚಿವರು ಮಾತ್ರ ತನಗೂ ಸಿ.ಡಿ.ಗೂ ಸಂಬಂಧವಿಲ್ಲ. ನನಗೆ ನೇರವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಗುಂಪಿನ ಪರಿಚಯವಿಲ್ಲ. ನೆಲಮಂಗಲದ ಮಾಜಿ ಶಾಸಕರ ಮೂಲಕ ದುಡ್ಡಿಗೆ ಡೀಲ್‌ ಮಾಡಿದ್ದರು ಎನ್ನುತ್ತಿರುವುದು ಅಧಿಕಾರಿಗಳನ್ನು ತುಸು ಗೊಂದಲಕ್ಕೀಡು ಮಾಡಿದೆ ಎನ್ನಲಾಗಿದೆ.

ಸೀಡಿ ಕೇಸ್ ಕ್ಲಿಷ್ಟವಾಗಿದೆ, ತನಿಖೆ ತಡವಾಗುತ್ತಿದೆ: SIT ಕೆಲಸವನ್ನು ಸಮರ್ಥಿಸಿಕೊಂಡ ಕಮಿಷನರ್

ಸಿ.ಡಿ. ಸ್ಫೋಟದ ಸೂತ್ರಧಾರರು ಎನ್ನಲಾದ ಪತ್ರಕರ್ತರು ಹಾಗೂ ವಿವಾದಿತ ಯುವತಿಗೆ ಸೇರಿದ ಮೊಬೈಲ್‌ ಕರೆಗಳು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಹಾಗೂ ಬ್ಯಾಂಕ್‌ ಖಾತೆಗಳ ಪರಿಶೀಲನೆ ಸೇರಿದಂತೆ ಸಂಗ್ರಹಿಸಿರುವ ತಾಂತ್ರಿಕ ಮಾಹಿತಿಯನ್ನು ಕ್ರೋಢೀಕರಿಸಿ ವಿಶ್ಲೇಷಿಸಿದಾಗ ಲಭಿಸುವ ಮಾಹಿತಿಗೂ ಮಾಜಿ ಸಚಿವರ ಹೇಳಿಕೆಗೂ ತಾಳೆ ಆಗುತ್ತಿಲ್ಲ. ಮಾಜಿ ಸಚಿವರು ಮುಜುಗರವಿಲ್ಲದೆ ಮುಕ್ತವಾಗಿ ತನಿಖೆಗೆ ಸಹಕರಿಸಿದರೆ ಆರೋಪಿಗಳ ಪತ್ತೆಗೂ ಅನುಕೂಲ ಹಾಗೂ ಬ್ಲ್ಯಾಕ್‌ಮೇಲ್‌ ಕೃತ್ಯದ ರುಜುವಾತಿಗೂ ಪೂರಕ ಸಾಕ್ಷ್ಯಗಳು ಲಭಿಸುತ್ತವೆ. ಆದರೆ ಭಿನ್ನವಾದ ಹೇಳಿಕೆಗಳಿಂದ ತನಿಖೆಗೆ ಅಡ್ಡಿಯಾಗುವುದಷ್ಟೇ ಅಲ್ಲ, ಆರೋಪಿಗಳಿಗೆ ಪರೋಕ್ಷ ನೆರವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸೀಡಿ ತಿರುಚಿದ್ದೇ? ಎಫ್ಫೆಸ್ಸೆಲ್‌ ವರದಿ ಕೇಳಿದ ಎಸ್‌ಐಟಿ

ಲೈಂಗಿಕ ವಿಡಿಯೋದಲ್ಲಿ ಮಾರ್ಫಿಂಗ್‌ ಆಗಿದೆಯೇ ಎಂಬುದು ಖಚಿತಪಡಿಸಿಕೊಳ್ಳಲು ಎಸ್‌ಐಟಿ, ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌)ದ ತಜ್ಞರ ವರದಿ ಕೇಳಿದೆ. ವಿಡಿಯೋ ನಕಲಿ ಎಂಬುದು ಖಚಿತವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಬಹಿರಂಗವಾಗಿರುವ ವಿಡಿಯೋದಲ್ಲಿ ಯುವತಿಯ ಮುಖ ಮರೆ ಮಾಚಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಎಫ್‌ಎಸ್‌ಎಲ್‌ ವರದಿ ಬಯಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.