ಪ್ರಾಧಿಕಾರ ರಚನೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ,  ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗೆ ಏಕೀಕೃತ ವ್ಯವಸ್ಥೆ, ಮುಖ್ಯಮಂತ್ರಿಯ ಅಧ್ಯಕ್ಷತೆ, ವಿವಿಧ ಇಲಾಖೆಗಳ 27 ಮಂದಿ ಸದಸ್ಯರು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ. 

ವಿಧಾನಸಭೆ(ಡಿ.28): ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆ ಸುಧಾರಿಸುವ ಸಲುವಾಗಿ ರಸ್ತೆ ನಿರ್ಮಾಣದಿಂದ ಸಂಚಾರ ದಟ್ಟಣೆ ನಿಯಂತ್ರಣದವರೆಗೆ ಎಲ್ಲ ಕೆಲಸಗಳ ಮೇಲುಸ್ತುವಾರಿ ವಹಿಸಲು ‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ’ (ಬಿಎಂಎಲ್‌ಟಿಎ) ರಚಿಸುವ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆ ಅಂಗೀಕಾರ ನೀಡಿತು. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಏಕೀಕೃತ ವ್ಯವಸ್ಥೆಯಾಗಿ ಮಹಾನಗರ ಭೂ ಸಾರಿಗೆ ಪ್ರಾಧಿಕಾರ ರಚನೆ ಮಾಡಲಾಗುವುದು.

ಲಂಡನ್‌, ನ್ಯೂಯಾರ್ಕ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದರೂ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ಅಮೂಲಾಗ್ರ ಬದಲಾವಣೆ ತರಲು ಪೂರಕವಾಗಿ ‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ-2022’ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರ್ಯಾಲೋಚನೆಗೆ ಮಂಡಿಸಿ ಅನುಮೋದನೆ ಪಡೆದರು. ಈ ವಿಧೇಯಕವನ್ನು ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ್ದರು. ಮಂಗಳವಾರ ನಡೆದ ಕಲಾಪದಲ್ಲಿ ಪರ್ಯಾಲೋಚನೆ ನಡೆಸಿ ಅಂಗೀಕಾರ ಪಡೆಯಲಾಯಿತು.

Bengaluru: ಬೆಂಗಳೂರು ವಾಹನ ಸವಾರರಿಗೊಂದು ಸೂಚನೆ: ಕೊತ್ನೂರು ಜಕ್ಷನ್‌ ಸಂಚಾರ ಬಂದ್‌

ಇಲಾಖೆಗಳ ನಡುವೆ ಸಮನ್ವಯ

ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಸಾರಿಗೆ ಸಚಿವರು ಉಪಾಧ್ಯಕ್ಷರು ಸೇರಿದಂತೆ 27 ಮಂದಿ ಸದಸ್ಯರನ್ನು ಒಳಗೊಂಡಿರುತ್ತದೆ. ಬಿಬಿಎಂಪಿ, ಹೆದ್ದಾರಿ ಪ್ರಾಧಿಕಾರ, ಸಂಚಾರ ಪೊಲೀಸ್‌, ಬಿಎಂಟಿಸಿ, ಬಿಎಂಆರ್‌ಸಿಎಲ್‌, ಸಾರಿಗೆ ಇಲಾಖೆ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನೈಋುತ್ಯ ರೈಲ್ವೆ, ಬಿಎಂಆರ್‌ಡಿಎ, ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.

ಈ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದರ ಜತೆಗೆ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೂಡಿಕೆ ಅನುಮೋದಿಸುವ ಹಾಗೂ ಪರಿಶೀಲಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ. ಸಾರಿಗೆ ಪ್ರಯಾಣ ದರ ಹೆಚ್ಚಳ, ಕಾಲಮಿತಿಯಲ್ಲಿ ಕಾಮಗಾರಿ ನಡೆಸದಿದ್ದರೆ ಕ್ರಮ ಕೈಗೊಳ್ಳುವ, ಪ್ರಮುಖ ನಗರ ಸಾರಿಗೆ ಯೋಜನೆಗಳನ್ನು ಅನುಮೋದಿಸುವ ಅಧಿಕಾರ, ಸಮಗ್ರ ಸಂಚಾರ ಯೋಜನೆ ಮತ್ತು ನೀತಿಗಳನ್ನು ಸಿದ್ಧಪಡಿಸುವುದು. ಅಗತ್ಯವಿರುವ ವೇಳೆ ತುರ್ತು ಸ್ವರೂಪದ ಕಾಮಗಾರಿಗಳನ್ನು ಕೈಗೊಳ್ಳುವ ಅಧಿಕಾರವನ್ನೂ ಹೊಂದಿರುತ್ತದೆ. ಜತೆಗೆ ಸಂಸ್ಥೆಗಳಿಗೆ ಅನುದಾನ, ಸಾಲ ಒದಗಿಸುವ, ವಸೂಲಿ ಮಾಡುವ ಅಧಿಕಾರವನ್ನು ಪ್ರಾಧಿಕಾರ ಪಡೆದಿರುತ್ತದೆ.

ಪ್ರಾಧಿಕಾರದ ಅಡಿ ಬರುವ ಸಾರಿಗೆ

ಬಸ್ಸು, ಪ್ರಯಾಣಿಕ ರೈಲು, ಮೆಟ್ರೋ, ಮೋನೋ ರೈಲು, ಕೇಬಲ್‌ ಕಾರು, ಲಘು ರೈಲು ಸಾರಿಗೆ ಸೇರಿದಂತೆ ಸಾರ್ವಜನಿಕ ಸಾರಿಗೆ, ಆಟೋ, ವ್ಯಾನ್‌, ಟಿಟಿ, ಟ್ಯಾಕ್ಸಿ, ಕ್ಯಾಬ್‌, ಬಾಡಿಗೆ ಕ್ಯಾಬ್‌ನಂತಹ ಪೂರಕ ಸಾರಿಗೆ, ಸೈಕಲ್‌, ಸೈಕಲ್‌ ರಿಕ್ಷಾ ಸೇರಿದಂತೆ ಮೋಟಾರು ರಹಿತ ಸಾರಿಗೆ, ನಗರ ಸರಕು ಸಾಗಣೆ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ವಿದ್ಯುನ್ಮಾನ ಪ್ರಯಾಣದರ ಸಂಗ್ರಹ, ವಿದ್ಯುನ್ಮಾನ ರಸ್ತೆ ಬಳಕೆ ದರ ನಿಗದಿ ಸೇರಿದಂತೆ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್‌) ಕುರಿತು ನೀತಿ ರೂಪಿಸುವುದು ಹಾಗೂ ನಿಯಮಗಳನ್ನು ಅನುಷ್ಠಾನಗೊಳಿಸುವುದು, ಮೇಲುಸ್ತುವಾರಿ ವಹಿಸುವುದು ಪ್ರಾಧಿಕಾರದ ಕರ್ತವ್ಯವಾಗಿರುತ್ತದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ವಾಹನ ನಿಲುಗಡೆ ನೀತಿ, ಮೋಟಾರು ವಾಹನೇತರ ಸಾರಿಗೆ ನೀತಿ, ಸಾಗಣೆ ಆಧಾರಿತ ಅಭಿವೃದ್ಧಿ ನೀತಿ, ಬಹುಮಾದರಿ ಸಂಯೋಜಿತ ನೀತಿ, ಸರಕು ಸಾಗಣೆ ನೀತಿ, ಸಮಗ್ರ ಸಂಚಾರ ಯೋಜನೆ ಸಿದ್ಧಪಡಿಸುವುದು ಸಮಿತಿ ಜವಾಬ್ದಾರಿಯಾಗಲಿದೆ.

ಸುಗಮ ಸಂಚಾರಕ್ಕೆ ಕ್ರಮ: ಸಿಎಂ

ವಿಧೇಯಕ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬೆಂಗಳೂರು ನಗರದಲ್ಲಿ ದಿನಕ್ಕೆ ಐದು ಸಾವಿರ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತಿವೆ. ಮುಂಬರುವ ವರ್ಷಗಳಲ್ಲಿ ನಗರದ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ. ಬೇರೆ ಊರುಗಳಿಂದ ಬರುವ ವಾಹನಗಳಿಂದ ಹೆಬ್ಬಾಳ, ಗೊರಗುಂಟೆಪಾಳ್ಯದಂತಹ ಕಡೆ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿರುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದ ಮೇಲಿನ ಸಂಚಾರ ದಟ್ಟಣೆ ಒತ್ತಡ ಕಡಿಮೆ ಮಾಡಲು ಪೆರಿಫೆರಲ್‌ ರಸ್ತೆಗಳ ನಿರ್ಮಾಣವಾಗಬೇಕು. ಆದರೆ, ಭೂಸ್ವಾಧೀನ ಸಮಸ್ಯೆಯಿಂದ ಟೆಂಡರ್‌ನಲ್ಲಿ ಭಾಗವಹಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ಭೂಸ್ವಾಧೀನದಿಂದ ರಸ್ತೆ ನಿರ್ಮಾಣ, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಎಲ್ಲದರ ಬಗ್ಗೆಯೂ ಪ್ರಾಧಿಕಾರ ನಿಗಾ ವಹಿಸಲಿದೆ. ಜತೆಗೆ ಬೆಂಗಳೂರು ಸಂಚಾರ ದಟ್ಟಣೆ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಿದ್ದೇವೆ. ಸಂಚಾರ ದಟ್ಟಣೆ ನಿಯಂತ್ರನಕ್ಕೆ ತಂತ್ರಜ್ಞಾನದ ಮೊರೆ ಹೋಗಿದ್ದೇವೆ ಎಂದು ಹೇಳಿದರು.

ಬೆಂಗಳೂರು ವಾಹನ ಸವಾರರೇ ಎಚ್ಚರ: ಇನ್ಮುಂದೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೆ ದಂಡ ಫಿಕ್ಸ್

ದಂಡ ಪಾವತಿಯೂ ಸಹ ನೇರವಾಗಿ ಸಂಗ್ರಹಿಸದೆ ಕ್ಯಾಮರಾಗಳ ಮೂಲಕ ಹಾಕುತ್ತಿದ್ದೇವೆ. ಇದರಿಂದ ದಂಡ ಸಂಗ್ರಹ ಪ್ರಮಾಣವೂ ಹೆಚ್ಚಾಗಿದೆ. ದಂಡ ಸಂಗ್ರಹಿಸುವಾಗ ಉಂಟಾಗುತ್ತಿದ್ದ ದಟ್ಟಣೆ ಕಡಿಮೆಯಾಗಿದೆ. ಶಾಂಘೈ, ಲಂಡನ್‌, ನ್ಯೂಯಾರ್ಕ್ನಲ್ಲಿ ಸಂಚಾರದಟ್ಟಣೆ ಇದೆ. ಆದರೆ, ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲೂ ನಿರ್ವಹಣೆ ಮಾಡಲು ಪ್ರಾಧಿಕಾರ ರಚಿಸಲಾಗಿದೆ ಎಂದರು.

ಕಾಂಗ್ರೆಸ್‌ನ ಎನ್‌.ಎ.ಹ್ಯಾರಿಸ್‌ ಹಾಗೂ ಯು.ಟಿ.ಖಾದರ್‌ ಸಲಹೆಯಂತೆ ಬೆಂಗಳೂರು ನಗರದ ಶಾಸಕರೊಬ್ಬರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು. ಜತೆಗೆ ಬಿಎಂಆರ್‌ಡಿಎ ವ್ಯಾಪ್ತಿಯನ್ನೂ ಒಳಪಡಿಸಲಾಗುವುದು ಎಂದು ಅವರು ಹೇಳಿದರು.