ಬೆಂಗಳೂರು:  ಕನ್ನಡ ಮತ್ತು ತೆಲುಗಿನಲ್ಲಿ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮದ ಚಿಂತನೆಗಳು, ಚಲಿಸುತ್ತಿರುವ ದಾರಿಯಲ್ಲಿ ಸಾಮ್ಯತೆಗಳಿವೆ. ಪ್ರತಿದಿನ ಬಣ್ಣದ ಮುದ್ರಣ ಹಾಗ ಜಿಲ್ಲಾ ಪುರವಣಿಗಳು ಸೇರಿದಂತೆ ತೆಲುಗು ಪತ್ರಿಕೆಗಳಲ್ಲಿ ಕಾಲಕಾಲಕ್ಕೆ ಆದ ಬದಲಾವಣೆಗಳು ಕನ್ನಡದ ಪತ್ರಿಕೆಗಳಿಗೂ ಪ್ರೇರಣೆ ನೀಡಿವೆ ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗ, ಸೆಂಟ್ರಲ್‌ ಕಾಲೇಜು ಆವರಣದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ತೆಲುಗು, ಕನ್ನಡ ಪತ್ರಿಕೆಗಳು- ಸಾಹಿತ್ಯ ಚಿಂತನೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮಿಳು ಮತ್ತು ಮಲೆಯಾಳಂನ ಸಾಹಿತ್ಯಕ ಮತ್ತು ಪತ್ರಿಕೋದ್ಯಮದ ಚಿಂತನೆಗಳು ಭಿನ್ನವಾಗಿವೆ. ಆದರೆ, ಕನ್ನಡ ಮತ್ತು ತೆಲುಗಿನ ಸಾಹಿತ್ಯಕ ಮತ್ತು ಪತ್ರಿಕೋದ್ಯಮ ಚಿಂತನೆಗಳನ್ನು ಗಮನಿಸಿದಾಗ ಒಟ್ಟೊಟ್ಟಿಗೆ ಸಾಗುತ್ತಿವೆ. ಅವು ಚಲಿಸುವ ದಾರಿಗಳೂ ಒಂದೇ ರೀತಿಯಲ್ಲಿ ಕಾಣಿಸುತ್ತವೆ ಎಂದರು.

ಕನ್ನಡದಲ್ಲಿ ಸಾಹಿತ್ಯಕ ಮತ್ತು ಭಾಷೆಯ ಆಂದೋಲನವನ್ನು ಮುಂದೆ ನಿಂತು ನಡೆಸಿದ್ದು ಪತ್ರಿಕೆಗಳೇ. ಈ ಆಂದೋಲನಕ್ಕೆ ಡಾ.ರಾಜ್‌ಕುಮಾರ್‌ ಅವರು ಧುಮುಕಿದಾಗ ಅದಕ್ಕೊಂದು ವ್ಯಾಪಕತೆ ಸಿಕ್ಕಿತು. ಡಾ.ರಾಜ್‌ ಅವರು ಚಳವಳಿಗೆ ಧುಮುಕುವಂತೆ ಮಾಡಿದ್ದು ಕೂಡ ಪತ್ರಿಕೆಗಳೇ. ಪತ್ರಿಕೆಗಳು ಒಂದು ರೀತಿ ಸಾಹಿತ್ಯದ ರುವಾರಿಗಳಾಗಿದ್ದವು. ಸಾಹಿತಿ, ಸಾಹಿತ್ಯಗಳನ್ನು ಬೆಳೆಸುವ ರಕ್ಷಿಸುವ ಜವಾಬ್ದಾರಿಯನ್ನು ತಮಗೆ ತಾವೇ ಹಾಕಿಕೊಂಡಿದ್ದವು. ಒಂದು ಕಾಲಕ್ಕಂತೂ ಸಾಹಿತಿಗಳಿಗೂ, ಪತ್ರಕರ್ತರಿಗೂ ವ್ಯತ್ಯಾಸವೇ ಕಾಣಿಸುತ್ತಿರಲಿಲ್ಲ. ಡಿ.ವಿ.ಗುಂಡಪ್ಪ ಅವರನ್ನು ಮಂಕುತಿಮ್ಮನ ಕಗ್ಗದ ಮೂಲಕ ಎಷ್ಟುಸ್ಮರಿಸುತ್ತೇವೋ, ಕನ್ನಡ ಪತ್ರಿಕೋದ್ಯಮದಲ್ಲಿ ಅವರು ಅಷ್ಟೇ ಅದ್ಭುತ ಶಕ್ತಿ ಕೂಡ ಆಗಿದ್ದರು ಎಂದು ಸ್ಮರಿಸಿದರು.

ಹಳಗನ್ನಡ, ಹೊಸಗನ್ನಡದ ನಂತರ ಬಂದ ಗೋಪಾಲಕೃಷ್ಣ ಅಡಿಗ ಮತ್ತಿತರ ಸಾಹಿತಿಗಳು ನವ್ಯ, ನವೋದಯ ಸಾಹಿತ್ಯ ಆರಂಭಿಸಿದಾಗ ಕನ್ನಡಪ್ರಭ, ಪ್ರಜಾವಾಣಿ ಇತರೆ ಪತ್ರಿಕೆಗಳು ಅವರ ಉತ್ತೇಜನಕ್ಕೆ ನಿಂತವು. ಬಂಡಾಯ ಸಾಹಿತ್ಯ ಬಂದಾಗಲಂತೂ ಪ್ರಜಾವಾಣಿ ಸಂಪೂರ್ಣ ಮುಂದೆ ನಿಂತು ನಡೆಸಿತು. ಅದೊಂದು ದೊಡ್ಡ ಸಾಹಿತ್ಯ ಚಳವಳಿಯೇ ಆಗಿಹೋಯಿತು ಎಂದರು.

ಪತ್ರಿಕೆಗಳಿಗೆ ಗುರುವಿನ ಸ್ಥಾನ:

ಸಿ.ಪಿ.ಬ್ರೌನ್‌ ಸೇವಾ ಸಮಿತಿ ಅಧ್ಯಕ್ಷ ಇಡಮಕಂಟಿ ಲಕ್ಷ್ಮೇರೆಡ್ಡಿ ಮಾತನಾಡಿ, ಪತ್ರಿಕೆಗಳು ಸದಾ ಜನಪರವಾಗಿ ನಿಲ್ಲಬೇಕು. ಸಮಾಜ ಅಥವಾ ಜನರು ತಪ್ಪು ಹೆಜ್ಜೆ ಇಡದಂತೆ ನೋಡಿಕೊಳ್ಳುವ ತಾಯಿ ಪಾತ್ರ ನಿರ್ವಹಿಸಬೇಕು. ಯಾವುದು ಒಳ್ಳೆಯದು, ಯಾವುದು ಕೆಟ್ಟದೆಂದು ತಿಳಿಸುವ ಗುರುವಿನ ಪಾತ್ರವನ್ನೂ ವಹಿಸಿ ಪ್ರಜೆಗಳಿಗೆ ನಿತ್ಯ ಚೈತನ್ಯ ತುಂಬುವ ಕರ್ತವ್ಯ ಹೊತ್ತಿರುವ ಪತ್ರಿಕೆಗಳು ಒಳ್ಳೆಯ ಮಿತ್ರರಿದ್ದಂತೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹೈದರಾಬಾದ್‌ನ ‘ಮಿಸಿಮಿ’ ಮಾಸ ಪತ್ರಿಕೆ ಸಂಪಾದಕ ಅಶ್ವಿನ್‌ ಕುಮಾರ್‌, ತೆಲುಗು ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ. ಆಶಾಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ಇಂದಿನ ಓದುಗನೇ ನಾಳೆಯ ನಾಯಕ

ಲೇಖಕಿ ಅಂಬಿಕಾ ಅನಂತ್‌ ಅವರು ಮಾತನಾಡಿ, ಶಿಕ್ಷಣ ತಜ್ಞರು, ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಕೂಡ ಅಕ್ಷರ ಪ್ರತಿನಿಧಿಗಳು. ಇಂಗ್ಲಿಷ್‌ ನಾಣ್ಣುಡಿಯಂತೆ ಇಂದಿನ ಓದುಗನೇ, ನಾಳೆಯ ನಾಯಕ. ಒಬ್ಬ ಒಳ್ಳೆಯ ನಾಯಕನ ತಯಾರು ಮಾಡುವಲ್ಲಿ ಪುಸ್ತಕ, ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದರು.

ಅಮೆರಿಕದ ಮಾಜಿ ಅಧ್ಯಕ್ಷ ಖ್ಯಾತ ಲೇಖಕ ಥಾಮಸ್‌ ಜೆಫರ್ಸನ್‌, ಮನುಷ್ಯನ ಮನಸ್ಸನ್ನು ವಿಕಸನಗೊಳಿಸಲು ಪತ್ರಿಕೆ ಅತ್ಯುತ್ತಮ ಸಾಧನ. ಮನುಷ್ಯನ ನೈತಿಕ ಮತ್ತು ಸಾಮಾಜಿಕ ತರ್ಕಬದ್ಧ ಅಸ್ತಿತ್ವವನ್ನು ಅವು ಸುಧಾರಿಸುತ್ತವೆ ಎಂದು ಹೇಳಿದ್ದಾರೆ. ಅದು ಆಗಬೇಕಾದರೆ ಪತ್ರಿಕೆಗಳು ವಿಶೇಷ ಸುದ್ದಿಗಳ ಜೊತೆಗೆ ಸಾಹಿತ್ಯ, ವಿಭಿನ್ನ ಸಂಸ್ಕೃತಿ ಕುರಿತ ವಿಚಾರಗಳನ್ನೂ ನೀಡಬೇಕು. ಇತ್ತೀಚಿನ ಸಮಿಕ್ಷೆ ಪ್ರಕಾರ ದೇಶದಲ್ಲಿ ಒಟ್ಟು 19,500 ಭಾಷೆಗಳಿವೆ. ಇದರಲ್ಲಿ ಶೇ.46ರಷ್ಟುಜನಸಂಖ್ಯೆ ಕೇವಲ 22 ಭಾಷೆಗಳನ್ನು ಬಳಸುತ್ತಿದೆ. ಈ ಎಲ್ಲ ಭಾಷಿಕರ ವೈವಿಧ್ಯತೆಯ ನಡುವೆ ಸಾಮರಸ್ಯ ಉಂಟುಮಾಡಲು ಪತ್ರಿಕಾ ಮಾಧ್ಯಮ ಸಾರಥ್ಯ ವಹಿಸಬೇಕು ಎಂದು ಹೇಳಿದರು.