ಬೆಂಗಳೂರು(ಮೇ.15): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸುಮಾರು 45,000 ಬಿಡಿಎ ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಸಕ್ರಮ ಮಾಡಿಕೊಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬಿಡಿಎ ವ್ಯಾಪ್ತಿಯಲ್ಲಿ ಒಟ್ಟು 75 ಸಾವಿರ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ಬಹುತೇಕರು ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದಾರೆ. ಬಿಡಿಎ ನಿವೇಶನಗಳಲ್ಲಿ 12 ವರ್ಷಕ್ಕಿಂತ ಹಿಂದೆ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವವರ 600 ಚದರಡಿಯಿಂದ 4,000 ಚದರಡಿವರೆಗಿನ ವಿಸ್ತೀರ್ಣದಲ್ಲಿನ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಸುಮಾರು 45 ಸಾವಿರದಷ್ಟು ಇರಬಹುದಾದ ಈ ಮನೆಗಳನ್ನು ಸಕ್ರಮಗೊಳಿಸಲು ಮಾರ್ಗಸೂಚಿ ಆಧಾರದ ಮೇಲೆ ಕನಿಷ್ಠ ಶುಲ್ಕ ವಿಧಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರು. ಆದಾಯ ಬರುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

ಮಾಸ್ಕ್‌ ಆಫ್‌ ಬೆಂಗಳೂರಿಗೆ ಗೃಹ ಸಚಿವ ಬೊಮ್ಮಯಿ ಶ್ಲಾಘನೆ

ಇನ್ನು 12 ವರ್ಷದಿಂದ ಈಚೆಗೆ ಮನೆಗಳನ್ನು ನಿರ್ಮಿಸಿಕೊಂಡವರ ಮೇಲೆ ಮುಂದಿನ ಎರಡು ವರ್ಷಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ನಿರ್ದೇಶನ ನೀಡಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 1976ರ ಕಾಯ್ದೆಗೆ ತಿದ್ದುಪಡಿ ತಂದು ಸಕ್ರಮಗೊಳಿಸಲಾಗುತ್ತಿದೆ. ಬಿಡಿಎ ಭೂ ಸ್ವಾಧೀನ ಮಾಡಿಕೊಂಡು ಅಭಿವೃದ್ಧಿಪಡಿಸಿರುವ 75 ಸಾವಿರ ನಿವೇಶನಗಳಲ್ಲಿ ಬಹುತೇಕ ಭೂಮಿಯ ಮೂಲ ಮಾಲೀಕರು ಅಕ್ರಮವಾಗಿ ನೆಲೆಸಿದ್ದಾರೆ. ಈ ಪೈಕಿ ಕೆಲ ಭೂಮಿಗೆ ಬಿಡಿಎ ಪರಿಹಾರ ನೀಡಿದ್ದು ಕೆಲವುಗಳಿಗೆ ನೀಡಿಲ್ಲ. ಈ ಸಂಬಂಧ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇವುಗಳಿಗೆ ಮುಕ್ತಿ ಹೇಳಲು ಹಾಗೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಮನೆಗಳನ್ನು ಸಕ್ರಮ ಮಾಡಿಕೊಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಬಿಡಿಎ ನಿವೇಶನಗಳು ಇರುವ ಸ್ಥಳೀಯ ಮಾರ್ಗಸೂಚಿ ದರದ ಆಧಾರದ ಮೇಲೆ ಸಕ್ರಮ ಶುಲ್ಕ ನಿಗದಿಪಡಿಸಲಾಗುವುದು. 600 ಚದರಡಿ (20/30) ನಿವೇಶನದಾರರಿಗೆ ಮಾರ್ಗಸೂಚಿ ದರದ ಶೇ.10 ರಷ್ಟು ಮಾತ್ರ ಶುಲ್ಕ ವಿಧಿಸಲಾಗುವುದು. ಉಳಿದಂತೆ 1,200 ಚದರಡಿ ನಿವೇಶನದಾರರಿಗೆ ಮಾರ್ಗಸೂಚಿ ದರದ ಶೇ.20 ರಷ್ಟು ಹಾಗೂ 2,400 ಚದರಡಿ (40/60), 4,000 ಚದರಡಿ (50/80) ನಿವೇಶನಗಳಿಗೆ ಮಾರ್ಗಸೂಚಿ ದರದ ಶೇ.40 ರಷ್ಟುಶುಲ್ಕ ವಿಧಿಸಲಾಗುವುದು ಎಂದು ಹೇಳಿದರು.

75 ಸಾವಿರ ಕೋಟಿ ಆದಾಯ ನಿರೀಕ್ಷಿಸಿದ್ದೆವು:

ಮೊದಲಿಗೆ 75,000 ನಿವೇಶನಗಳಿಂದ ಮಾರ್ಗಸೂಚಿ ದರದಷ್ಟೇ ಹಣ ವಸೂಲಿ ಮಾಡಿದರೆ ಕನಿಷ್ಠ 75000 ಕೋಟಿ ರು. ಆದಾಯ ಬರುವ ನಿರೀಕ್ಷೆ ಇತ್ತು. ಆದರೆ, ಬಹುತೇಕ ಬಡವರು ಇಷ್ಟುಮೊತ್ತ ಪಾವತಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಶೇ.50 ರಷ್ಟುಮಾರ್ಗಸೂಚಿ ದರ ತೆಗೆದುಕೊಳ್ಳಬೇಕು ಎಂದು ಚಿಂತಿಸಿದೆವು. ಬಳಿಕ ಇದೀಗ ನಿವೇಶನದ ವಿಸ್ತೀರ್ಣದ ಆಧಾರದ ಮೇಲೆ ತುಂಬಾ ಕನಿಷ್ಠ ಶುಲ್ಕ ವಿಧಿಸಿದ್ದೇವೆ. 75,000 ನಿವೇಶನಗಳಲ್ಲಿ 45 ಸಾವಿರ ನಿವೇಶನಗಳಲ್ಲಿ 12 ವರ್ಷಕ್ಕಿಂತ ಮೊದಲು ಮನೆಗಳನ್ನು ನಿರ್ಮಿಸಿರುವ ಅಂದಾಜಿದೆ. ಇಂತಹವರಿಗೆ ಮಾತ್ರ ಸಕ್ರಮ ಮಾಡಲಾಗುವುದು. ಖಾಲಿ ನಿವೇಶನಗಳಿಗೆ ಸಕ್ರಮ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಎಷ್ಟು ಶುಲ್ಕ ಪಡೆದು ಸಕ್ರಮ?

- 20/30 ನಿವೇಶನ: ಮಾರ್ಗಸೂಚಿ ದರದ ಶೇ.10 ಮಾತ್ರ
- 30/40 ನಿವೇಶನ: ಮಾರ್ಗಸೂಚಿ ದರದ ಶೇ.20 ರಷ್ಟು
- 40/60 ರಿಂದ 50/80: ಮಾರ್ಗಸೂಚಿ ದರದ ಶೇ.40 ರಷ್ಟು

ಯಾವುದಕ್ಕೆ ಅನ್ವಯಿಸಲ್ಲ?

- 12 ವರ್ಷಕ್ಕಿಂತ ಈಚೆಗೆ ನಿರ್ಮಿಸಿದ ಮನೆಗಳ ಸಕ್ರಮ ಇಲ್ಲ
- 2 ವರ್ಷದಲ್ಲಿ ಇಂತಹ ಮನೆಗಳ ವಿರುದ್ದ ಸೂಕ್ತ ಕ್ರಮಕ್ಕೆ ಸೂಚನೆ
- ಖಾಲಿ ನಿವೇಶನಗಳ ಸಕ್ರಮ ಇಲ್ಲ