Asianet Suvarna News Asianet Suvarna News

ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ: ಸಿದ್ದರಾಮಯ್ಯ

* ಕೆರೆ ಅಭಿವೃದ್ಧಿಯನ್ನೇ ಮರೆತು ಬಿಟ್ಟ ಸರ್ಕಾರ: ಸಿದ್ದರಾಮಯ್ಯ
* ದುಡ್ಡು ಮಾಡಲು ನಿಂತ ಸರ್ಕಾರ
* ಸುಳ್ಳು ಹೇಳುವುದೇ ಯಡಿಯೂರಪ್ಪ ಕೆಲಸ

Siddaramaiah Slams BJP Government grg
Author
Bengaluru, First Published Jul 14, 2021, 12:35 PM IST

ಬಾದಾಮಿ(ಜು.14): ನಾನು ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದೇನೆ. ಇತಿಹಾಸದಲ್ಲಿಯೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಂತ್ರಿಗಳು ಹಾಗೂ ಅವರ ಮಗ ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಮಂಗಳವಾರ ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಮತವಿಲ್ಲದ ಸರ್ಕಾರ ಆಪರೇಶನ್‌ ಕಮಲದಿಂದ ಅಧಿಕಾರಕ್ಕೆ ಬಂದು ಸರ್ಕಾರದ ಮಂತ್ರಿಗಳು ಅನುದಾನ ಬಿಡುಗಡೆ ಮಾಡಲು, ಎನ್‌ಒಸಿ ಕೊಡಲು ಶೇ.10 ಹಣ ಪಡೆಯುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊಡುತ್ತಿಲ್ಲ. ಸಿಎಂ ಪುತ್ರ ವಿಜಯೇಂದ್ರ ಜೆಸಿಬಿಯಿಂದ ದುಡ್ಡು ಬಾಚುತ್ತಿದ್ದಾರೆ. ಜನ ಬಿಜೆಪಿಗೆ ಯಾಕೆ ಮತ ಹಾಕುತ್ತಾರೆ ಎಂಬುವುದು ನನಗೆ ಇಲ್ಲಿಯವರೆಗೆ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಸರ್ಕಾರದಲ್ಲಿ ಹಣ ಕೊರತೆ:

ಕಬ್ಬಲಗೇರಿಯಿಂದ 125 ಕಿಮೀ ಕಾಲುವೆಗೆ ನೀರು ಹರಿಸುವ ಯೋಜನೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಲ್ಲಿ ಹಣದ ಕೊರತೆ ಇದೆ. ಯಾವುದೇ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರದಿಂದ ವರ್ಗಾವಣೆಗೆ ಭಾರಿ ಹಣ ಪಡೆಯುತ್ತಿದ್ದು, ಉಪನೋಂದಣಿ, ಪಿಎಸ್‌ಐ ವರ್ಗಾವಣೆಗೆ 60 ಲಕ್ಷ ಲಂಚ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ನಾನು ಸಮ್ಮಿಶ್ರ ಸರ್ಕಾರ ಇದ್ದಾಗ ಕೆರೂರ ಏತ ನೀರಾವರಿ, ಬಾದಾಮಿ, ಕೆರೂರ 18 ಗ್ರಾಮಗಳ ಕುಡಿಯುವ ನೀರಿನ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ತ್ರಿಸ್ಟಾರ್‌ ಹೋಟೆಲ್‌, ಪಾರ್ಕಿಂಗ್‌ ಪ್ಲಾಜಾ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಎರಡ್ಮೂರು ವರ್ಷಗಳ ನಂತರ ಅನುದಾನ ನೀಡಿದ್ದಾರೆ ಎಂದರು.

ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆ ತಿಳಿಸಿದ ಸಿದ್ದರಾಮಯ್ಯ

ಬಾದಾಮಿ ತಾಲೂಕು ಪತ್ರಿಕಾ ಭವನಕ್ಕೆ ಈಗ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಮುಖಂಡರಾದ ಎಂ.ಬಿ. ಹಂಗರಗಿ, ಪಿ.ಆರ್‌.ಗೌಡರ, ಆರ್‌.ಎಫ್‌.ಬಾಗವಾನ, ಹೊಳೆಬಸು ಶೆಟ್ಟರ, ರೇವಣಸಿದ್ದಪ್ಪ ನೋಟಗಾರ, ಮಹೇಶ ಹೊಸಗೌಡರ, ಭೀಮಸೇನ ಚಿಮ್ಮನಕಟ್ಟಿ, ಹನಮಂತ ದೇವರಮನಿ, ಮಧು ಯಡ್ರಾಮಿ, ಶಶಿಕಾಂತ ಉದಗಟ್ಟಿ, ನಾಗಪ್ಪ ಅಡಪಟ್ಟಿ ಇನ್ನಿತರರು ಇದ್ದರು.

ಹಂಪಿ ವಿವಿ ಕೇಂದ್ರ ಉಳಿಸಿಕೊಳ್ಳಲು ಯತ್ನ

ಬನಶಂಕರಿ ಹಂಪಿ ವಿವಿ ಸ್ಥಳಾಂತರ ಮಾಡಬಾರದು ಎಂದು ಸ್ಥಳೀಯ ಒತ್ತಾಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದರ ಬಗ್ಗೆ ಪರಿಶೀಲನೆ ಮಾಡಿ ಮುಂದಿನ ಬಾರಿ ಬಾದಾಮಿಗೆ ಬಂದಾಗ ಬನಶಂಕರಿ ಭೇಟಿ ನೀಡುತ್ತೇನೆ. ಇದಕ್ಕೂ ಮೊದಲು ನಾನು ವಿವಿಗೆ ಭೇಟಿ ನೀಡಿದ್ದೇನೆ. ಆದರೆ, ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಒಂದು ಮುಖ್ಯವಾಗಿ ಹೋಟೆಲ್‌ ಅವಶ್ಯಕತೆ ಇದೆ. ಪ್ರವಾಸಿಗರನ್ನು ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಆಕರ್ಷಿತವಾಗುವ ಹಾಗೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತ್ರಿಸ್ಟಾರ್‌ ಹೋಟೆಲ್‌ ನಿರ್ಮಿಸಬೇಕಾಗಿದೆ. ಸಾಧ್ಯವಾದಷ್ಟುಹಂಪಿ ವಿದ್ಯಾಲಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ‘ಹಂಪಿ ಕಲಾ ಕೇಂದ್ರ ಉಳಿಸಿಕೊಳ್ಳುವರೇ ಸಿದ್ದರಾಮಯ್ಯ’ ಎಂಬ ತಲೆ ಬರಹದಡಿಯಲ್ಲಿ ಕನ್ನಡಪ್ರಭ ಜು.9ರಂದು ವರದಿ ಪ್ರಕಟಿಸಿ ಗಮನ ಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ನಾನು ಸಿಎಂ ಆದ್ರೆ ಮತ್ತೆ 10 ಕೆಜಿ ಅಕ್ಕಿ

ಗುಳೇದಗುಡ್ಡದ ಈರಣ್ಣನ ಕೆರೆಯಲ್ಲಿ ಡೋಣಿ ವಿಹಾರ, ಗಾರ್ಡನ್‌, ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ರೈತರು ಮನವಿ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹತ್ತಿರ ದುಡ್ಡೇ ಇಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಯಾಕೆ ಅಂದರೆ ಯಡಿಯೂರಪ್ಪ ಕೋವಿಡ್‌ ನೆಪ ಹೇಳುತ್ತಾರೆ. ಆದರೂ ಕೇಳುತ್ತೇನೆ. ಕೊಟ್ಟರೆ ಮಾಡಿಸುತ್ತೇನೆ. ಮೊದಲೇ ಮಾಡಿಸುತ್ತೇನೆಂದು ನಾನು ಸುಳ್ಳು ಹೇಳಲ್ಲ ಎಂದರು.

ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ಕೆರೆ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ. ನಾನು ಸಿಎಂ ಆಗಿದ್ದಾಗ ಪ್ರತಿಯೊಬ್ಬರಿಗೆ ತಲಾ 10 ಕೆಜಿ ಅಕ್ಕಿ ಕೊಟ್ಟೆ. ಆದರೆ ಬಿಜೆಪಿ ಸರ್ಕಾರ ಬಂದು ಮೂರು ಕೆ.ಜಿ. ಕಸಿದುಕೊಂಡು ಬಿಟ್ಟಿತು. ಮತ್ತೆ ನಾನು ಸಿಎಂ ಆದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಕೋವಿಡ್‌ ಆಗಿ ಸತ್ತ ಕುಟುಂಬಕ್ಕೆ 5 ಲಕ್ಷ ಕೊಡಲು ನಾನು ಹೇಳಿದ್ದೇನೆ. ಸುಪ್ರೀಂ ಕೋರ್ಟ್‌ 4 ಲಕ್ಷ ಕೊಡಲು ನಿರ್ದೇಶನ ನೀಡಿದ್ದರೂ, ಬಿಜೆಪಿ ಸರ್ಕಾರ 1 ಲಕ್ಷ ಕೊಡುವುದಾಗಿ ಹೇಳಿದ್ದರೂ ಅದನ್ನು ಕೊಟ್ಟಿಲ್ಲ ಎಂದರು.

ಸಿದ್ದರಾಮಯ್ಯ ಬಾದಾಮಿ ಬಿಟ್ಟು ಮತ್ತೊಂದು ಮಹಾವಲಸೆಗೆ ಸಿದ್ಧತೆ ನಡೆಸಿದ್ದಾರಾ..?

ಸುಳ್ಳು ಹೇಳುವುದೇ ಯಡಿಯೂರಪ್ಪ ಕೆಲಸ:

ನಾನು ಮಾಸ್ಕ್‌, ಹ್ಯಾಂಡ್‌ಗ್ಲೌಸ್‌ ಹಾಕಿಕೊಂಡಿದ್ದೇನೆ. ನೋಡಿ ಇಲ್ಲಿರುವ ಮಹಿಳೆಯರೂ ಹಾಕಿಲ್ಲ. ಪುರುಷರೂ ಹಾಕಿಲ್ಲ. ಮಾಸ್ಕ್‌ ತಂದರೂ ಹಾಕಿಕೊಂಡಿಲ್ಲ. ನೋಡಿ ಈಗ ಹಾಕಿದರು ಎಂದು ಹಾಸ್ಯ ಚಟಾಕಿ ಹಾಕಿ ಸಭೆಯಲ್ಲಿ ನಗಿಸಿದರು. ಮೊದಲು ಮಾಸ್ಕ್‌ ಹಾಕಿಕೊಳ್ಳಿ. ಕೋವಿಡ್‌ ನಿಯಂತ್ರಣಕ್ಕೆ ಮಾಸ್ಕ್‌, ಸ್ಯಾನಿಟೈಸರ್‌ ಬಳಸಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಸಭೆಯಲ್ಲಿ ನೆರೆದ ಜನರಿಗೆ ಜಾಗೃತಿ ಮೂಡಿಸಿದರು. ಬಿಜೆಪಿ ಸರ್ಕಾರಕ್ಕೆ ಆಕ್ಸಿಜನ್‌ ವ್ಯವಸ್ಥೆ ಮಾಡಿಸಲಿಕ್ಕಾಗದೇ ಜನರನ್ನು ಸಾಯಿಸಿದ್ದಾರೆ. ಸತ್ತವರ ಸಂಖ್ಯೆ ತಪ್ಪಾಗಿ ಕೊಟ್ಟಿದ್ದಾರೆ. ಸುಳ್ಳು ಹೇಳುವುದೇ ಯಡಿಯೂರಪ್ಪನವರ ಕೆಲಸವಾಗಿದೆ ಎಂದರು.

ಮತ್ತೆ ಬಾದಾಮಿಯಿಂದ ಸ್ಪರ್ಧಿಸಿ

ಇದೆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಮತ್ತೆ ಬಾದಾಮಿಯಿಂದ ಸ್ಪರ್ಧಿಸಬೇಕೆಂದು ಕೂಗಾಡಿ ಒತ್ತಾಯಿಸಿದ ಘಟನೆಯೂ ನಡೆಯಿತು. ಅದಕ್ಕೆ ನಕ್ಕ ಸಿದ್ದರಾಮಯ್ಯನವರು, ನಿಮ್ಮ ಅಭಿಮಾನಕ್ಕೆ ನಾನು ಋುಣಿಯಾಗಿದ್ದೇನೆ. ಇಲ್ಲಿನ ಜನ ಬಹಳ ಒಳ್ಳೆಯವರು. ನಾನು ಮತಕೇಳಲು ಬರದಿದ್ದರೂ ನನಗೆ ಮತ ನೀಡಿ ಗೆಲ್ಲಿಸಿದ್ದಿರಿ. ಮುಂದಿನ ಚುನಾವಣೆಗೆ ಇನ್ನೂ ದಿನಗಳಿವೆ. ಈಗಲೇ ನಿರ್ಧಾರ ತಿಳಿಸುವುದು ಸರಿಯಲ್ಲ. ಹಾಗೇನಾದರೂ ನಿಲ್ಲುವುದಾದರೆ ತಮ್ಮನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

ಜೆಸಿಬಿ ಮೇಲೆ ನಿಂತು ಪುಷ್ಪವೃಷ್ಟಿ

ಮಾಜಿ ಸಿಎಂ, ಕ್ಷೇತ್ರದ ಶಾಸಕ ಸಿದ್ದರಾಮಯ್ಯುನವರು ಗುಳೇದಗುಡ್ಡ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಹಾದಿಬಸವೇಶ್ವರ ದೇವಸ್ಥಾನದ ಹತ್ತಿರ ಅವರ ಅಭಿಮಾನಿಗಳು, ಕಾರ್ಯಕರ್ತರು ಜೆಸಿಬಿ ಮೇಲೆ ನಿಂತು ಪುಷ್ಪವೃಷ್ಟಿ ಮಾಡಿ ಗಮನ ಸೆಳೆದರು. ಅಷ್ಟೇ ಅಲ್ಲದೇ ಹೂಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು.
 

Follow Us:
Download App:
  • android
  • ios