ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿದೆ. ತನ್ನ ವಿರುದ್ಧವೇ ಕೆಲಸ ಮಾಡಿದ್ದಾರೆಂಬ ಕಾರಣಕ್ಕೆ ಜಮೀರ್ ಮೇಲೆ ಸಿದ್ದರಾಮಯ್ಯ ತೀವ್ರ ಕೋಪಗೊಂಡಿದ್ದು, ಇದೇ ಕಾರಣಕ್ಕೆ ಜಮೀರ್‌ಗೆ ಸಚಿವ ಸ್ಥಾನ ಕೈತಪ್ಪಿದೆ ಎನ್ನಲಾಗುತ್ತಿದೆ.

ಬೆಂಗಳೂರು (ಜೂ.11): ರಾಜ್ಯ ರಾಜಕಾರಣದಲ್ಲಿ ಒಂದಾನೊಂದು ಕಾಲದಲ್ಲಿ ರಾಮ-ಹನುಮರಂತೆ ಕಾಣಿಸಿಕೊಳ್ಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಡುವಿನ ಸಂಬಂಧ ಈಗ ಪೂರ್ಣ ಪ್ರಮಾಣದಲ್ಲಿ ಹಳಸಿದೆ ಎಂಬುದು ಗೋಚರವಾಗುತ್ತಿದೆ. ಜಮೀರ್ ಅಹಮದ್ ಖಾನ್ ವಿರುದ್ಧ ಸಿದ್ದರಾಮಯ್ಯ ಅವರ ಆಕ್ರೋಶ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಪಕ್ಷ ಮತ್ತು ವೈಯಕ್ತಿಕವಾಗಿ ತಮ್ಮ ವಿರುದ್ಧವೇ ಕೆಲಸ ಮಾಡಿದ ಜಮೀರ್ ಮೇಲೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಬಲಿಗರ ಮುಂದೆ ಸಿಟ್ಟು ಹೊರಹಾಕಿದ ಸಿಎಂ:

ನಿನ್ನೆ ಜಮೀರ್ ಅಹಮದ್ ಅವರ ಬೆಂಬಲಿಗರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಜಮೀರ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ಜಮೀರ್ ಹೆಸರನ್ನು ಕೇಳುತ್ತಿದ್ದಂತೆಯೇ ಗರಂ ಆದ ಸಿದ್ದರಾಮಯ್ಯ, 'ಯಾಕೆ ಸಚಿವ ಸ್ಥಾನ ಕೊಡಬೇಕು?' ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇದರಿಂದ ಬೆಂಬಲಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ.

'ಆಪ್ತ ಅಂದ್ಮೇಲೆ ನನ್ನ ವಿರುದ್ಧವೇ ಮಾಡೋದಾ?

ಈ ವೇಳೆ ಬೆಂಬಲಿಗರು ಸಂಭಾಳಿಸಿಕೊಂಡು, 'ಅವರು ನಿಮ್ಮ ಪರಮಾಪ್ತರಲ್ಲವೇ ಸಾಹೇಬ್ರೇ...' ಎಂದು ಸಮಾಧಾನಿಸಲು ಮುಂದಾದರು. ಇದಕ್ಕೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, 'ಆಪ್ತ ಅಂದ್ಮೇಲೆ ನನ್ನ ವಿರುದ್ಧವೇ ಪಿತೂರಿ ಮಾಡೋದಾ? ನನ್ನ ವಿರುದ್ಧವೇ ಕೆಲಸ ಮಾಡೋದಾ?' ಎಂದು ಗುಡುಗಿದ್ದಾರೆ. ಸಿದ್ದರಾಮಯ್ಯ ಅವರ ಸಿಟ್ಟು ಕಂಡು ಬೆಂಬಲಿಗರು ಕೊನೆಗೆ, 'ಹಾಗೆಲ್ಲಾ ಮಾಡಬಾರದಿತ್ತು, ನೀವೇ ಅವರನ್ನು ತಿದ್ದಿ ಹೇಳಿ ಸಾಹೇಬ್ರೇ' ಎಂದು ವಿನಂತಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ.

ದೆಹಲಿ ಪ್ರವಾಸದ ವೇಳೆಯೂ 'ವಾರ್ನಿಂಗ್':

ಜಮೀರ್ ಅಹಮದ್ ಅವರ ಮೇಲಿನ ಈ ಕೋಪ ಇಂದಿನದ್ದಲ್ಲ. ಕಳೆದ ಬಾರಿ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಂದರ್ಭದಲ್ಲಿಯೂ ಜಮೀರ್ ಅವರಿಗೆ 'ಡೋಂಟ್ ಕಮ್ ಟು ದೆಹಲಿ' (ನೀವು ದೆಹಲಿಗೆ ಬರುವುದು ಬೇಡ) ಎಂದು ಖಡಕ್ ಆಗಿ ಎಚ್ಚರಿಸಿ ಹೋಗಿದ್ದರು. ಜಮೀರ್ ಅವರ ಕೆಲವು ನಡೆಗಳು ಪಕ್ಷದ ಶಿಸ್ತನ್ನು ಉಲ್ಲಂಘಿಸಿವೆ ಮತ್ತು ಸಿದ್ದರಾಮಯ್ಯ ಅವರ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ತರುವಂತಿದ್ದವು ಎಂಬುದು ಸಿದ್ದರಾಮಯ್ಯ ಅವರ ಆಪ್ತ ವಲಯದ ಮಾತಾಗಿದೆ.

ಸಚಿವ ಸ್ಥಾನಕ್ಕೆ ಅಡ್ಡಿಯಾಗುತ್ತಿದೆಯೇ ಈ ಮುನಿಸು?

ಸಿದ್ದರಾಮಯ್ಯ ಅವರ ಈ ಸಿಟ್ಟೇ ಜಮೀರ್ ಅಹಮದ್ ಖಾನ್ ಅವರಿಗೆ ಸಚಿವ ಸ್ಥಾನ ತಪ್ಪಲು ಮುಖ್ಯ ಕಾರಣ ಎನ್ನಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳ ಪೂರ್ಣ ವಿಶ್ವಾಸ ಗಳಿಸುವಲ್ಲಿ ಜಮೀರ್ ವಿಫಲರಾಗಿದ್ದಾರೆ. ತನ್ನ ನಂಬಿಕಸ್ಥರೇ ತನ್ನ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದರು ಎಂಬ ಭಾವನೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಈ ಎಲ್ಲ ಬೆಳವಣಿಗೆಗಳು ಜಮೀರ್ ಅಹಮದ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿವೆ. ಮುಂದಿನ ದಿನಗಳಲ್ಲಿ ಜಮೀರ್ ಸಿದ್ದರಾಮಯ್ಯ ಅವರ ವಿಶ್ವಾಸವನ್ನು ಮರಳಿ ಗಳಿಸುತ್ತಾರಾ ಅಥವಾ ಈ ಕಂದಕ ಮತ್ತಷ್ಟು ದೊಡ್ಡದಾಗಲಿದೆಯೇ ಎಂದು ಕಾದು ನೋಡಬೇಕಿದೆ.