- Home
- Karnataka Districts
- ದನದ ಕೊಟ್ಟಿಗೆ ಬಿಲ್ ಪಾವತಿಸದ ಅಧಿಕಾರಿ; ತಾ.ಪಂ ಕಚೇರಿಯಲ್ಲಿ ಹಸುಗಳನ್ನ ಕಟ್ಟಿ, ಕಾಲಿಗೆ ಬಿದ್ದ ಅನ್ನದಾತ!
ದನದ ಕೊಟ್ಟಿಗೆ ಬಿಲ್ ಪಾವತಿಸದ ಅಧಿಕಾರಿ; ತಾ.ಪಂ ಕಚೇರಿಯಲ್ಲಿ ಹಸುಗಳನ್ನ ಕಟ್ಟಿ, ಕಾಲಿಗೆ ಬಿದ್ದ ಅನ್ನದಾತ!
ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.

ಬೀದರ್(ಜೂ.11): ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅಧಿಕಾರಿಗಳ ಕಾಲು ಹಿಡಿಯಬೇಕು ಎಂಬ ಮಾತು ಈಗ ಅಕ್ಷರಶಃ ನಿಜವಾಗಿದೆ. ಕೊಟ್ಟಿಗೆ ನಿರ್ಮಾಣ ಮಾಡಿ 9 ತಿಂಗಳು ಕಳೆದರೂ ಬಿಲ್ ಮಂಜೂರು ಮಾಡದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತನೊಬ್ಬ, ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಆಗಮಿಸಿ ವಿನೂತನವಾಗಿ ಪ್ರತಿಭಟಿಸಿದ ಘಟನೆ ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ನಡೆದಿದೆ.
ಏನಿದು ಘಟನೆ?:
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ರೈತ ಅಪ್ಪಾಸಾಬ್ ಮಡಕೆ ಎಂಬುವವರು ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದರು. ಕೊಟ್ಟಿಗೆ ಪೂರ್ಣಗೊಂಡು ಬರೋಬ್ಬರಿ ಒಂಬತ್ತು ತಿಂಗಳು ಕಳೆದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಇಂದು ಹುಲಸೂರು ತಾಲ್ಲೂಕು ಪಂಚಾಯತ್ ಕಚೇರಿಗೆ ತನ್ನ ಹಸುವನ್ನು ಕರೆತಂದು, ಕಚೇರಿಯ ಆವರಣದಲ್ಲೇ ಹಸು ಕಟ್ಟಿ ಮೇವು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಯ ಕಾಲಿಗೆ ಬಿದ್ದ ಅನ್ನದಾತ:
ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಪ್ಪಾಸಾಬ್ ಮಡಕೆ, ತಾಲ್ಲೂಕು ಪಂಚಾಯತ್ ಇಒ (EO) ಮಹದೇವ ಜಮ್ಮು ಅವರ ಕಾಲಿಗೆ ಬಿದ್ದು, 'ದಯವಿಟ್ಟು ನನ್ನ ಬಿಲ್ ಮಾಡಿಕೊಡಿ ಸ್ವಾಮಿ' ಎಂದು ಕಣ್ಣೀರಿಟ್ಟರು. ಬಿಲ್ ಮಂಜೂರು ಮಾಡಲು ಗ್ರಾಮ ಪಂಚಾಯತ್ ಪಿಡಿಓ (PDO) ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೋಗಸ್ ಬಿಲ್ ಆರೋಪ:
ಕೇವಲ ಅಪ್ಪಾಸಾಬ್ ಒಬ್ಬರೇ ಅಲ್ಲ, ಬೇಲೂರು ಗ್ರಾಮವೊಂದರಲ್ಲೇ ಸುಮಾರು 40ಕ್ಕೂ ಹೆಚ್ಚು ರೈತರಿಗೆ ಕೊಟ್ಟಿಗೆ ನಿರ್ಮಾಣದ ಬಿಲ್ ಪಾವತಿಯಾಗಿಲ್ಲ ಎನ್ನಲಾಗಿದೆ. 'ಗ್ರಾಮ ಪಂಚಾಯತ್‌ನಲ್ಲಿ ಚರಂಡಿ ಸ್ವಚ್ಛತೆ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬೋಗಸ್ ಬಿಲ್ ಮಾಡುತ್ತಾರೆ. ಆದರೆ ನೈಜವಾಗಿ ಕೆಲಸ ಮಾಡಿದ ರೈತರಿಗೆ ಮಾತ್ರ ಹಣ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟಿಸಿದ ರೈತನ ಹೋರಾಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.

