ರಾಜ್ಯ ಸರ್ಕಾರವು 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸಲು ವಿಫಲವಾದ ಕಾರಣ, ಹೊನ್ನೆನಹಳ್ಳಿ ಕೆರೆಯಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ.

ತುಮಕೂರು (ಜ.29): ಸಿದ್ದಗಂಗಾ ಮಠದ ವಿಚಾರದಲ್ಲಿ ರಾಜ್ಯ ಸರ್ಕಾರ ಮಾತು ತಪ್ಪಿದ ಪರಿಣಾಮವಾಗಿ ಮಠದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸುವ ಪ್ರಕ್ರಿಯೆ ಸಂಪೂರ್ಣ ಬಂದ್‌ ಆಗಿರುವ ಕಾರಣಕ್ಕೆ ಸಿದ್ಧಗಂಗಾ ಮಠದಲ್ಲಿ ಮತ್ತೆ ನೀರಿನ ಸಮಸ್ಯೆ ತಲೆದೋರಿದೆ. ಕೆಐಎಡಿಬಿ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ, ಬೆಸ್ಕಾಂ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡಿದೆ. 70 ಲಕ್ಷ ಬಿಲ್ ಪಾವತಿಸಲು ಕೂಡ ರಾಜ್ಯ ಸರ್ಕಾರ ಬಡವಾಗಿದ್ದರಿಂದ, ಹೊನ್ನೆನಹಳ್ಳಿ ಪಂಪ್‌ಹೌಸ್ ನಲ್ಲಿ ನೀರು ಪೂರೈಕೆ ಬಂದ್ ಆಗಿದೆ.

ಹೊನ್ನೆನಹಳ್ಳಿಯಿಂದ ದೇವರಾಯಪಟ್ಟಣ ಕೆರೆಗೆ ಬಂದ ನೀರು ಸಿದ್ದಗಂಗಾ ಮಠಕ್ಕೆ ಪಂಪ್ ಮಾಡಲಾಗುತ್ತಿತ್ತು. ಕಳೆದ 6 ತಿಂಗಳಿಂದ ಹೊನ್ನೇನಳ್ಳಿಯಿಂದ ನೀರು ಬಾರದ ಕಾರಣ, ದೇವರಾಯಪಟ್ಟಣ ಕೆರೆ ಬರಿದಾಗಿದೆ.

ಇದರಿಂದಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಮಠಕ್ಕೆ ನೀರಿನ ಕೊರತೆ ಸಾಧ್ಯತೆ ದಟ್ಟವಾಗಿ ಕಂಡಿದೆ. ಅದಲ್ಲದೆ, ಫೆ.6 ರಿಂದ 20 ರವರೆಗೂ ಮಠದಲ್ಲಿ ನಡೆಯವ ಜಾತ್ರೆಗೂ ನೀರಿನ ಅಭಾವ ಎದುರಾಗಲಿದೆ. ಜಾತ್ರೆಗೆ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಅದರೊಂದಿಗೆ ಪ್ರತಿ ದಿನ 10 ಸಾವಿರ ವಿದ್ಯಾರ್ಥಿಗಳ ಉಪಯೋಗಕ್ಕೆ ನೀರು ಬೇಕಿದೆ.

ಬಿಲ್‌ ಕಟ್ಟುವ ಭರವಸೆ ನೀಡಿದ್ದ ಸರ್ಕಾರ

ಕಳೆದ ವರ್ಷ ನೀರು ಪಂಪ್ ಮಾಡಿದ 70 ಲಕ್ಷ ವಿದ್ಯುತ್ ಬಿಲ್ ನ್ನು ಕೆಐಎಡಿಬಿ ಅಧಿಕಾರಿಗಳು ಮಠಕ್ಕೆ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದರು. ಈ ವೇಳೆ 70 ಲಕ್ಷ ಬಿಲ್ ನ್ನು ನಾವೇ ಕಟ್ಟಿ ಮಠಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದರು. ಆದರೆ, ಒಂದು ವರ್ಷವಾದರೂ ಬಿಲ್ ಪಾವತಿಸದ ಹಿನ್ನೆಲೆ ಹೊನ್ನೆನಹಳ್ಳಿಯ ಪಂಪ್ ಹೌಸ್ ನ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತ ಮಾಡಿದೆ.

ಹಾಗಾಗಿ ನೀರಿನ ಹಾಹಾಕಾರ ತಲೆದೋರುವ ಆತಂಕ ಮಠದಲ್ಲಿ ಎದುರಾಗಿದೆ. ಇನ್ನು ಬಿಲ್ ಕಟ್ಟದಿರುವ ಮಾಹಿತಿ ಕೊಡಲು ಕೆಐಎಡಿಬಿ ಹಿಂದೇಟು ಹಾಕುತ್ತಿದೆ. ಕಳೆದ ವರ್ಷ ಇದೇ ಸುದ್ದಿ ಬಿತ್ತರಿಸಿದಾಗ ರಾಜ್ಯ ಸರ್ಕಾರಕ್ಕೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಿತ್ತು. ಆ ಹಂತದಲ್ಲಿ, ವಿದ್ಯುತ್ ಬಿಲ್ ರಾಜ್ಯ ಸರ್ಕಾರವೇ ಪಾವತಿ ಮಾಡೋದಾಗಿ ಸಚಿವ ಎಂ ಬಿ ಪಾಟೀಲ್ ಆಶ್ವಾಸನೆ ಕೊಟ್ಟಿದ್ದರು.