ಬೆಂಗಳೂರು(ಮೇ.16): ಲಾಕ್‌ಡೌನ್‌ ಆಗಿದ್ದರಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದವರನ್ನ ತವರಿಗೆ ಕರೆತರಲು ಕೇಂದ್ರ ಸರ್ಕಾರ ವಿಶೇಷ ರೈಲು ಸಂಚಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಿಂದ ಇಂದು(ಶನಿವಾರ) ಬೆಂಗಳೂರಿಗೆ ಎರಡನೇ‌ ರೈಲು ಆಗಮಿಸಿದೆ. 

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ  ಶ್ರಮಿಕ್ ರೈಲಿನಲ್ಲಿ ಒಟ್ಟು 800 ಜನ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಗುರುವಾರ ಸಂಜೆ ದೆಹಲಿಯಿಂದ ಹೊರಟ್ಟಿದ್ದ ಶ್ರಮಿಕ್ ಎಕ್ಸ್‌ಪ್ರೆಸ್‌ ಇಂದು ಬೆಳಿಗ್ಗೆ 7  ಗಂಟೆಗೆ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಎಲ್ಲ 800 ಜನರನ್ನೂ ಬಿಬಿಎಂಪಿ ಕ್ವಾರಂಟನ್ ಮಾಡಲಿದೆ.

ಲಾಕ್‌ಡೌನ್‌ ಸಡಿಲ: ಮೇ. 17,18 ರಂದು ಉತ್ತರ ಪ್ರದೇಶಕ್ಕೆ ಸ್ಪೆಷಲ್‌ ರೈಲು

ಕಳೆದ ಎರಡು ದಿನಗಳ‌ ಹಿಂದೆ ದೆಹಲಿಯಿಂದ ಬೆಂಗಳೂರಿಗೆ‌ ಮೊದಲ ರೈಲು ಆಗಮಿಸಿತ್ತು. ಈ ವೇಳೆ 19 ಮಂದಿ  ಕ್ವಾರಂಟೈನ್‌ ಆಗಲು ಒಪ್ಪದಿದ್ದ ಕಾರಣ ಅಧಿಕಾರಿಗಳು ಮಧ್ಯೆ ತೀವ್ರವಾದ ವಾಗ್ವಾದ ನಡೆದಿತ್ತು. ಹೀಗಾಗಿ ಕ್ವಾರಂಟೈನ್‌ಗೆ ಒಪ್ಪದ 19 ಮಂದಿಯನ್ನ ಮತ್ತೊಂದು ರೈಲಿನ ಮೂಲಕ ವಾಪಸ್‌ ದೆಹಲಿಗೆ ಕಳುಹಿಸಲಾಗಿತ್ತು. ಉಳಿದದವರನ್ನ ನಗರದ ವಿವಿಧ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. 

ಈ ಕಾರಣದಿಂದ ಪೊಲೀಸರು ಇಂದು ರೈಲ್ವೆ ನಿಲ್ದಾಣದ ರಸ್ತೆಯನ್ನ ಸಂಪೂರ್ಣವಾಗಿ ಬಂದ್ ಮಾಡಿದ್ದರು. ಇಂದೂ ಸಹ ದೆಹಲಿಯಿಂದ 800 ಜನ ಆಗಮಿಸಿದ್ದರು. ಹೀಗಾಗಿ ಈ ಬಾರಿ ರೈಲು ನಿಲ್ದಾಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.